Raksha Bandhan 2023: ಭ್ರಾತೃತ್ವ ಮೆರೆಯುವ ಕನ್ನಡದ ಸೂಪರ್ ಹಿಟ್ ಹಾಡುಗಳ ಪಟ್ಟಿ
ನಾಳೆ ( ಆಗಸ್ಟ್ 30 ) ಅಣ್ಣ - ತಂಗಿಯರ ಪಾಲಿಗೆ ವಿಶೇಷ ದಿನ. ತಂಗಿಯರು ತಮ್ಮ ನೆಚ್ಚಿನ ಅಣ್ಣಂದಿರಿಗೆ ರಾಕಿಯನ್ನು ಕಟ್ಟಿ ತಮ್ಮ ಸೋದರರ ಕುರಿತು ಇರುವ ಪ್ರೀತಿ ಹಾಗೂ ಗೌರವವನ್ನು ಸಲ್ಲಿಸುವ ಬಾಂಧವ್ಯದ ದಿನ. ಈ ಹಿಂದೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಆಚರಿಸಲ್ಪಡುತ್ತಿದ್ದ ಈ ರಕ್ಷಾಬಂಧನ ಅಥವಾ ರಾಖಿ ಹಬ್ಬ ಈಗ ಸೌತ್ ಇಂಡಿಯಾದಲ್ಲಿಯೂ ಸಹ ಫೇಮಸ್.
ಇನ್ನು ರಕ್ಷಾಬಂಧನ ಅಚರಿಸುವ ಸಹೋದರ ಹಾಗೂ ಸಹೋದರಿಯರು ಫೋಟೊಗಳನ್ನು ಹಾಗೂ ವಿಡಿಯೊಗಳನ್ನು ಚಿತ್ರಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುವುದು ಕಾಮನ್. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಹಾಗೂ ಫೋಟೊಗಳನ್ನು ಹಂಚಿಕೊಳ್ಳುವಾಗ ಭ್ರಾತೃತ್ವ ಸಾರುವ ಕನ್ನಡದ ಹಾಡುಗಳನ್ನು ಬಳಸಲಾಗುತ್ತದೆ. ಅಂತಹ ಬೆಸ್ಟ್ ಹಾಡುಗಳ ಪಟ್ಟಿ ಈ ಕೆಳಕಂಡಂತಿದೆ..

ತಂಗಿ ನಿನ್ನ ನಗುವಲೊಂದು
ಅಣ್ಣ ಹಾಗೂ ತಂಗಿಯ ಸಂಬಂಧದ ಕುರಿತ ಬೆಸ್ಟ್ ಕನ್ನಡ ಚಿತ್ರ ಎಂದ ಕೂಡಲೇ ಎಲ್ಲರ ತಲೆಗೂ ಮೊದಲು ಬರುವ ಹೆಸರೇ ತವರಿಗೆ ಬಾ ತಂಗಿ. ಇನ್ನು ಈ ಚಿತ್ರದಷ್ಟೇ ಇದರಲ್ಲಿನ ಹಾಡುಗಳೂ ಸಹ ಫೇಮಸ್. ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನವಿದ್ದ ಈ ಚಿತ್ರದ ಎಲ್ಲಾ ಹಾಡುಗಳಿಗೂ ಸಹ ಹಂಸಲೇಖ ಅವರೇ ಸಾಹಿತ್ಯ ಬರೆದಿದ್ದರು. ಈ ಚಿತ್ರದ 'ತಂಗಿ ನಿನ್ನ ನಗುವಲೊಂದು ಪುಟ್ಟ ಮಗುವಿದೆ ಹಾಡು ಈಗಲೂ ಸಹ ಹಲವರ ಫೇವರಿಟ್ ಪಟ್ಟಿಯಲ್ಲಿದೆ. ಹಂಸಲೇಖ ಟ್ಯೂನ್, ಮಧು ಬಾಲಕೃಷ್ಣ ವಾಯ್ಸ್ ಹಾಗೂ ಶಿವಣ್ಣ ಮತ್ತು ರಾಧಿಕಾ ನಟನೆ ಸೂಪರ್.
ಅಣ್ಣ ತಂಗಿಯರ ಈ ಬಂಧ
ತವರಿಗೆ ಬಾ ತಂಗಿ ಚಿತ್ರ ಅದ್ಭುತ ಯಶಸ್ಸು ಸಾಧಿಸಿದ ಬಳಿಕ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮತ್ತೆ ಶಿವಣ್ಣ ಹಾಗೂ ರಾಧಿಕಾ ಕಾಂಬಿನೇಶನ್‌ನಲ್ಲಿ ಅಣ್ಣ ತಂಗಿ ಎಂಬ ಸಿನಿಮಾ ಮಾಡಿ ಗೆದ್ದರು. ಈ ಚಿತ್ರದ ಹಾಡುಗಳಿಗೂ ಸಹ ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ಸಂಯೋಜಿಸಿದ್ದರು. ಈ ಚಿತ್ರದ 'ಅಣ್ಣ ತಂಗಿಯರ ಈ ಬಂಧ' ಹಾಡು ಸಿಕ್ಕಾಪಟ್ಟೆ ಫೇಮಸ್. ರಕ್ಷಾಬಂಧನದ ದಿನಕ್ಕೆಂದೇ ಹೇಳಿ ಮಾಡಿಸಿದಂತಿದೆ ಈ ಹಾಡು.
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ
ತವರಿಗೆ ಬಾ ತಂಗಿ ಹಾಗೂ ಅಣ್ಣ ತಂಗಿ ರೀತಿಯ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ಹಾಗೂ ಸಾಹಿತ್ಯ ರಚಿಸಿ ಸಿನಿ ರಸಿಕರ ಮನ ಗೆದ್ದಿದ್ದ ಹಂಸಲೇಖ ಬತ್ತಳಿಕೆಯ ಮತ್ತೊಂದು ಹಾಡು 'ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ'. ಎಸ್ ಪಿ ಬಾಲಸುಬ್ರಹ್ಮಣ್ಯಂ ಕಂಠ ಹಾಡನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ವಿಷ್ಣುವರ್ಧನ್ ಹಾಗೂ ಅನು ಪ್ರಭಾಕರ್ ಅಣ್ಣ - ತಂಗಿ ಪಾತ್ರದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು.
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ರವಿಚಂದ್ರನ್ ಹಾಗೂ ಹೇಮ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿಮಾಮ ಚಿತ್ರದ ನನ್ನಾಸೆ ಮಲ್ಲಿಗೆ ಬರುತಾಳಮ್ಮ ಹಾಡೂ ಸಹ ಅಣ್ಣ - ತಂಗಿ ನಡುವಿನ ಪ್ರೀತಿ, ಬಾಂಧವ್ಯವನ್ನು ಸಾರುವ ಗೀತೆಯಾಗಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದ ಈ ಹಾಡಿನ ಸಾಹಿತ್ಯವನ್ನು ಎಸ್ ನಾರಾಯಣ್ ರಚಿಸಿದ್ದರು.


Click it and Unblock the Notifications











