ರಾಮ್ ಚರಣ್ 'ಗೇಮ್ ಚೇಂಜರ್' ಸಿನಿಮಾದ ಹಾಡು ಸೋರಿಕೆ: ಸೈಬರ್ ಪೊಲೀಸರಿಂದ ಇಬ್ಬರ ಬಂಧನ
ಚಿತ್ರರಂಗ ಮತ್ತು ಪೊಲೀಸರು ಅದೆಷ್ಟು ಕ್ರಮಗಳನ್ನು ತೆಗೆದುಕೊಂಡರೂ ಕೂಡ ಪೈರಸಿಯ ಹಾವಳಿ ತಪ್ಪುವುದಿಲ್ಲ. ಇತ್ತೀಚೆಗೆ ನಟ ರಾಮ್ ಚರಣ್ ಅವರ ಮುಂಬರುವ 'ಗೇಮ್ ಚೇಂಜರ್' ಸಿನಿಮಾದ ಹಾಡು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದಾದ ನಂತರ 'ಗೇಮ್ ಚೇಂಜರ್' ಸಿನಿಮಾ ತಯಾರಕರು ದೂರು ದಾಖಲಿಸಿದ್ದರು.
ಎಸ್ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್ ಚರಣ್ ನಾಯಕರಾಗಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಚಿತ್ರದ ಹಾಡೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. 30 ಸೆಕೆಂಡ್‌ಗಳ ಕ್ಲಿಪ್ಪಿಂಗ್‌ನ ತೆಲುಗು ಆಡಿಯೋ ಆಗಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಿತ್ರತಂಡ ದೂರು ದಾಖಲಿಸಿದ ನಂತರ, ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

'ಗೇಮ್ ಚೇಂಜರ್' ಹಾಡು ಲೀಕ್, ಇಬ್ಬರ ಬಂಧನ
ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಗೇಮ್ ಚೇಂಜರ್' ಈ ವರ್ಷದ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಬಿಡುಗಡೆಗೆ ಮುಂಚಿತವಾಗಿ, ಚಿತ್ರದ 30 ಸೆಕೆಂಡುಗಳ ಹಾಡು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿತ್ತು.
ಇನ್ನು, ನಿರೀಕ್ಷೆಯಂತೆ ಅಭಿಮಾನಿಗಳು ಅದನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಲೀಕ್ ಆಗಿರುವ ಈ ಕ್ಲಿಪ್ ಸಿನಿಮಾ ಹಾಡಿನ ಅಂತಿಮ ಆವೃತ್ತಿಯಲ್ಲ. ಗಾಯಕರು ಹಾಡಿರುವ ಮೊದಲ ಪ್ರತಿ ಎಂದು ವರದಿಯಾಗಿದೆ. ಇದನ್ನು ನಿರ್ಲಕ್ಷಿಸದ ನಿರ್ಮಾಪಕರು ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೆ ಸೈಬರ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮುಂದೆ ಇಂತಹ ಯಾವುದೇ ಕೆಲಸ ಮಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

'ಗೇಮ್ ಚೇಂಜರ್' ಚಿತ್ರದ ಮೊದಲ ಹಾಡು 'ಜರಗಂಡಿ' ಅನ್ನು ಈ ವರ್ಷದ ದೀಪಾವಳಿಯಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಈ ಹಾಡನ್ನು ಥಮನ್ ಎಸ್ ಸಂಯೋಜಿಸಿದ್ದು, ಹಾಡು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
ಹಾಡು ಲೀಕ್ ಆದ ಬಗ್ಗೆ ಚಿತ್ರದ ನಿರ್ಮಾಪಕರು ಕಾನೂನು ಕ್ರಮ ಕೈಗೊಂಡಿದ್ದರು. ಪ್ರೊಡಕ್ಷನ್ ಹೌಸ್ ಟ್ವಿಟರ್‌ನಲ್ಲಿ ದೂರಿನ ಪ್ರತಿಯನ್ನು ಹಂಚಿಕೊಂಡಿದೆ. "ನಮ್ಮ 'ಗೇಮ್ ಚೇಂಜರ್' ಸಿನಿಮಾದ ಕಂಟೆಂಟ್ ಅನ್ನು ಲೀಕ್ ಮಾಡಿದ ಜನರ ವಿರುದ್ಧ IPC 66(C) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಹೀಗಾಗಿ ಕಾನೂನುಬಾಹಿರವಾಗಿ ಸೋರಿಕೆಯಾಗಿರುವ ಕಳಪೆ ಗುಣಮಟ್ಟದ ಇಂತಹ ವಿಷಯಗಳಿಂದ ದೂರವಿರಲು ನಾವು ನಿಮ್ಮಲ್ಲಿ ವಿನಂತಿಸುತ್ತೇವೆ" ಎಂದಿದ್ದಾರೆ.
ಇನ್ನು, ವರದಿಗಳ ಪ್ರಕಾರ, ಈ ಹಾಡನ್ನು ಸುಮಾರು 15 ಕೋಟಿ ರೂಪಾಯಿಗಳ ಅತ್ಯಂತ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ಶಂಕರ್ ಮತ್ತು ಅವರ ತಂಡ ಈ ಚಿತ್ರಕ್ಕಾಗಿ ಚೆನ್ನೈನಿಂದ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಹಾಡು ಸೋರಿಕೆ ಸಂಭವಿಸಿರಬಹುದು ಎಂದು ವರದಿಗಳು ಹೇಳಿವೆ.


Click it and Unblock the Notifications











