ಟ್ರೆಂಡ್ ಆಯ್ತು ಶರಣ್ ಹಾಡಿದ ಉತ್ತರ ಕರ್ನಾಟಕದ ಜವಾರಿ ಹಾಡು
ಶರಣ್ ಅಭಿನಯದ 'ರಾಂಬೋ 2' ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಸಿನಿಮಾದ ಮೂರನೇ ಹಾಡು ಇದಾಗಿದ್ದು, ಈಗ ಯೂಟ್ಯೂಬ್ ನಲ್ಲಿ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಚಿತ್ರ ಈ ಹಾಡು ಯೂ ಟ್ಯೂಬ್ ನಲ್ಲಿ 5 ನೇ ಟ್ರೆಂಡಿಂಗ್ ನಲ್ಲಿದೆ.
'ಚುಟು ಚುಟು ಎನ್ನುತೈತಿ...' ಎಂಬ ಹಾಡು ಪಕ್ಕಾ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಇದೆ. ಆ ಭಾಗದಲ್ಲಿ ದಿನನಿತ್ಯ ಬಳಸುವ ಪದಗಳನ್ನು ಬಳಸಿ ಸಖತ್ ಮಜಾ ಕೊಡುವ ಈ ಹಾಡನ್ನು ಮಾಡಲಾಗಿದೆ. ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಶಿವು ಬೆರ್ಗಿ ಸಾಹಿತ್ಯ ಬರೆದಿದ್ದಾರೆ. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರ್ಗವಿ ಹಾಡಿದ್ದಾರೆ. ಹಾಡಿನ ಎಲ್ಲ ಅಂಶಗಳ ಸೂಪರ್ ಆಗಿದೆ. ಟಪ್ಪಾಗುಂಚಿ ಹಾಡುಗಳ ಪ್ರಿಯರಿಗೆ ಈ ಹಾಡು ಬಹಳ ಇಷ್ಟ ಆಗುತ್ತದೆ.

ಹಾಡಿನಲ್ಲಿ ಗಮನ ಸೆಳೆಯುವ ಅಂಶಗಳಲ್ಲಿ ಪ್ರಮುಖವಾಗಿರುವುದು ಶರಣ್ ಮತ್ತು ಆಶಿಕಾ ರಂಗನಾಥ್ ಡ್ಯಾನ್ಸ್. ಅದರಲ್ಲಿಯೂ ಶರಣ್ ನೃತ್ಯದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಒಬ್ಬ ಕಾಮಿಡಿ ನಟನಾಗಿದ್ದ ಶರಣ್ ಹೀರೋ ಆದ ನಂತರ ಈ ಮಟ್ಟಕ್ಕೆ ಡ್ಯಾನ್ಸ್ ಮಾಡುತ್ತಾರೆ ಅಂದರೆ ಅದನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಇನ್ನು ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಭೂಷಣ್ ಅವರ ಮೊದಲ ಸಿನಿಮಾ ಇದಾಗಿದೆ.
ಸದ್ಯ 'ಚುಟು ಚುಟು ಎನ್ನುತೈತಿ...' ಹಾಡನ್ನು ಯೂ ಟ್ಯೂಬ್ ನಲ್ಲಿ 2.75 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಡು ಕೇಳಿದರೆ ಎಲ್ಲರಿಗೂ ಎದ್ದು ಕುಣಿಯಬೇಕು ಎನಿಸುತ್ತದೆ. 'ರಾಂಬೋ 2' ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದು, ತರುಣ್ ಸುಧೀರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿದ್ದಾರೆ.


Click it and Unblock the Notifications











