'ಮನಿಕೆ ಮಗೆ ಹಿತೆ...' ಹಾಡು ಹೇಳಿ ಟ್ರೋಲಿಗೆ ಗುರಿಯಾದ ಗಾಯಕಿ ರಾನು ಮಂಡಲ್
ಮನಿಕೆ ಮಗೆ ಹಿತೆ... ಈ ಹಾಡನ್ನು ಕೇಳದವರಿಲ್ಲ. ಶ್ರೀಲಂಕಾದ ಗಾಯಕಿ ಯೊಹಾನಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡು ವಿಶ್ವ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಸದ್ಯ ಈ ಹಾಡಿನದ್ದೆ ಸದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್, ಯೂಟ್ಯೂಬ್, ರೀಲ್ ಗಳಲ್ಲಿ ಮನಿಕೆ ಮಗೆ ಹಿತೆ ಹಾಡಿನದ್ದೆ ಹವಾ. ಈಗಾಗಲೇ ಈ ಹಾಡು 135ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಈ ಹಾಡನ್ನು ಗಾಯಕಿ ರಾನು ಮಂಡಲ್ ಹಾಡಿ ಮತ್ತೆ ಟ್ರೋಲಿಗೆ ಗುರಿಯಾಗಿದ್ದಾರೆ. ಒಂದು ಕಾಲದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದ ರಾನು ಮಂಡಲ್ ಸದ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮನಿಕೆ ಮಗೆ ಹಿತೆ ಹಾಡನ್ನು ಹಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ರೈಲ್ವೆ ಸ್ಟೇಷನ್ನಲ್ಲಿ ಹಾಡುತ್ತಿದ್ದ ರಾನು ನಂತರ ದೊಡ್ಡ ದೊಡ್ಡ ಮನರಂಜನಾ ವಾಹಿನಿಗಳ ರಿಯಾಲಿಟಿ ಶೋ ವೇದಿಕೆಗೂ ಕಾಲಿಟ್ಟಿದ್ದರು. ಸಂಗೀತ ನಿರ್ದೇಶಕ ಹಿಮೇಶ್ ರೇಷಮಿಯಾ ಅವರು ರಾನು ಮಂಡಲ್ ಗೆ ಸಿನಿಮಾದಲ್ಲೂ ಹಾಡುವ ಅವಕಾಶ ನೀಡಿದ್ದರು. ಖ್ಯಾತಿಗಳಿಸಿದ್ದ ರಾನು ಬಳಿಕ ಕಾಣದಂತೆ ಮಾಯವಾಗಿದ್ದರು. ಇದೀಗ ಮನಿಕೆ ಮಗೆ ಹಿತೆ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

ಮನಿಕೆ ಮಗೆ ಹಿತೆ ಹಾಡನ್ನು ಹಾಡಿರುವ ರಾನು ಮಂಡಲ್ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಅನೇಕ ಯೂಟ್ಯೂಬ್ ಚಾನೆಲ್ ಗಳಲ್ಲಿ ಇದನ್ನು ಅಪ್ಲೋಡ್ ಮಾಡಲಾಗಿದೆ. ರಾನು ಮಂಡಲ್ ಹಾಡಿರುವ ಹಾಡು ಕೂಡ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಆದರೆ ನೆಟ್ಟಿಗರು ಸಿಕ್ಕಾಪಟ್ಟೆ ಬೈಯುತ್ತಿದ್ದಾರೆ. ರಾನು ವಿರುದ್ಧ ಟೀಕೆಗಳ ಸುರಿಮಳೆ ಬಂದಿದೆ.
"ದಯವಿಟ್ಟು ನಿಮ್ಮ ಹಾಡನ್ನು ನಿಲ್ಲಿಸಿ, ನಮ್ಮ ಕಿವಿಗಳು ಸಿಡಿದುಹೋಗುತ್ತಿವೆ" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಯೊಹಾನಿ ಹಾಗೆ ಈ ಹಾಡನ್ನು ಹಾಡಲು ಸಾಧ್ಯವಿಲ್ಲ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. 'ಒಂದು ವೇಳೆ ಈ ಹಾಡನ್ನು ಯೊಹಾನಿ ಕೇಳಿಸಿಕೊಂಡರೆ ಹಾಡುವುದನ್ನೇ ನಿಲ್ಲಿಸುತ್ತಾರೆ' ಎಂದು ಕಾಮೆಂಟ್ ಮಾಡಿ ಉಗಿಯುತ್ತಿದ್ದಾರೆ.


Click it and Unblock the Notifications











