"ಎಂಥಾ ಚೆಂದಾನೇ ಇವಳು" ಎಂದ 'ಲಾಫಿಂಗ್ ಬುದ್ಧ'; ಪ್ರಮೋದ್ ಶೆಟ್ರು ಹಾಡು ಫುಲ್ ಟ್ರೆಂಡಿಂಗ್
ಸ್ಯಾಂಡಲ್‌ವುಡ್‌ನ ಶೆಟ್ರು ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಪ್ರಮೋದ್ ಶೆಟ್ಟಿ. ಶೆಟ್ಟು ಗ್ಯಾಂಗ್ ಮಾಡಿದ ಸಿನಿಮಾದಲ್ಲಿ ಇವರಿಗೆ ಒಂದಲ್ಲ ಒಂದು ಪಾತ್ರ ಇದ್ದೇ ಇರುತ್ತೆ. ಆದ್ರೀಗ ಪ್ರಮೋದ್ ಶೆಟ್ಟಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರಮೋಷನ್ ಕೊಟ್ಟಿದ್ದಾರೆ. ಪೋಷಕ ಪಾತ್ರದಿಂದ ಹೀರೋ ಮಾಡಿದ್ದಾರೆ.
'ಲಾಫಿಂಗ್ ಬುದ್ಧ' ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸೌಂಡು ಮಾಡುವುದಕ್ಕೆ ಶುರು ಮಾಡಿದೆ. ರಿಷಬ್ ಶೆಟ್ಟಿ ನಿರ್ಮಾಣದ ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್‌ಗಳ ವೃತ್ತಿ ಬದುಕು, ವೈಯಕ್ತಿಕ ಬದುಕು ಹೇಗಿರುತ್ತೆ ಅನ್ನೋದನ್ನು ಹಾಸ್ಯ ರೂಪ ಕೊಟ್ಟು ತೋರಿಸಲಾಗಿದೆ.

ಸಿನಿಮಾ ನಗುವಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಸಿನಿಮಾದ ಹೆಸರು ಕೂಡ 'ಲಾಫಿಂಗ್ ಬುದ್ಧ' ಅಂತಲೇ. ಈ ಸಿನಿಮಾದ ಒಂದು ಹಾಡು ಸಂಗೀತ ಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಪೊಲೀಸರ ಬದುಕಿನ ಸಂತೋಷದ ಘಳಿಗೆಗಳನ್ನು ಈ ಹಾಡಿನಲ್ಲಿ ಚಿತ್ರಿಸಲಾಗಿದೆ. ಈ ವೇಳೆ ಪ್ರಮೋದ್ ಶೆಟ್ರು ಸ್ವಲ್ಪ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ "ಎಂಥಾ ಚೆಂದನೇ ಇವಳು" ಅನ್ನೋ ಹಾಡು ನಿಧಾನವಾಗಿ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತಿದೆ. ಎರಡು ವಾರಗಳ ಹಿಂದೆ ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. ಇದೂವರೆಗೂ 6 ಲಕ್ಷದ 30 ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಈ ಹಾಡಿನಲ್ಲಿ ಪ್ರಮೋದ್ ಶೆಟ್ಟಿಗೆ ನಾಯಕಿಯಾಗಿ 'ಗಂಟೂಮೂಟೆ' ಖ್ಯಾತಿಯ ನಟಿ ತೇಜು ಬೆಳವಾಡಿ ನಟಿಸಿದ್ದಾರೆ. ಇವರಿಬ್ಬರ ಲವ್ಲಿ ಸಾಂಗ್‌ಗೆ ಸಿನಿಪ್ರಿಯರು ಮರುಳಾಗಿದ್ದಾರೆ.

'ಲಾಫಿಂಗ್ ಬುದ್ಧ' ಸಿನಿಮಾದ "ಎಂಥಾ ಚೆಂದನೇ ಇವಳು" ಹಾಡಿನಲ್ಲಿ ಹಿರಿಯ ನಟ ಸುಂದರಾಜ್, ಪ್ರಮೋದ್ ಶೆಟ್ಟಿ, ನಟಿ ತೇಜು ಬೆಳವಾಡಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ.
'ಲಾಫಿಂಗ್ ಬುದ್ಧ' ಸಿನಿಮಾದ ಈ ಹಾಡನ್ನು ಪ್ರೇಮ ಕವಿ ಕೆ.ಕಲ್ಯಾಣ್ ರಚಿಸಿದ್ದಾರೆ. ವಿಷ್ಣು ವಿಜಯ್ ಈ ಹಾಡಿಗೆ ಟ್ಯೂನ್ ಅನ್ನು ಹಾಕಿದ್ದಾರೆ. ಕಪಿಲ್ ಕಪಿಲನ್ ಹಾಗೂ ವಿಷ್ಣು ವಿಜಯ್ ಹಾಡಿದ್ದಾರೆ. ಎಂ ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಡು ಕೂಡ ಮಜವಾಗಿದ್ದು, ಮಿಡಲ್ ಕ್ಲಾಸ್ ಕುಟುಂಬದ ಬದುಕಿನ ಖುಷಿಯ ಕ್ಷಣಗಳನ್ನು ಸೆರೆಹಿಡಿಯಲಾಗಿದೆ.
ಅಂದ್ಹಾಗೆ, 'ಲಾಫಿಂಗ್ ಬುದ್ಧ' ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ ಹಾಗೂ ಸುಂದರ್ ರಾಜ್ ಜೊತೆ ದೂದ್ ಪೇಡಾ ದಿಗಂತ್ ಕೂಡ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ರಿಷಬ್ ಶೆಟ್ಟಿ ಬ್ಯಾನರ್‌ನಲ್ಲಿ ನಿರ್ಮಾಣ ಆಗಿರುವುದರಿಂದ ಪ್ರೇಕ್ಷಕರಿಗೆ ಈ ಸಿನಿಮಾ ಮಸ್ತ್ ಮನರಂಜನೆ ಸಿಗಬಹುದು ಎಂಬ ನಿರೀಕ್ಷೆಯಂತೂ ಇದೆ. 'ಲಾಫಿಂಗ್ ಬುದ್ಧ' ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











