'ಕಾಂತಾರ': ಮಾಧುರ್ಯದ ಅಲೆಯ ಜೊತೆಗೆ ಸುಂದರ ದೃಶ್ಯ ಹೆಣಿಗೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬಹು ನಿರೀಕ್ಷಿತ 'ಕಾಂತಾರ' ಸಿನಿಮಾದ ಹಾಡು ಬಿಡುಗಡೆ ಆಗಿದೆ. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಟ್ರೈಲರ್ ಸಿನಿಮಾ ಬಗ್ಗೆ ದೊಡ್ಡ ಕುತೂಹಲವೊಂದನ್ನು ಹುಟ್ಟುಹಾಕಿದೆ. ಇದೀಗ ಸಿನಿಮಾ ಹಾಡೊಂದು ಬಿಡುಗಡೆ ಆಗಿದ್ದು, ಇದು ಮೂರರಲ್ಲಿ ಮತ್ತೊಂದು ಸಿನಿಮಾ ಅಲ್ಲ ಎಂಬುದನ್ನು ಖಾತ್ರಿಪಡಿಸಿದೆ.
ಆಗಸ್ಟ್ 15ರ ಈ ಸ್ವಾತಂತ್ರ್ಯದ ಅಮೃತಮಹೋತ್ಸದ ಸಂದರ್ಭದಲ್ಲಿ ಬಿಡುಗಡೆ ಆಗಿರುವ 'ಕಾಂತಾರ'ದ ಈ ಹಾಡು ಯುಗಳ ಗೀತೆಯಾಗಿದ್ದು, ಗಾಯಕರಾದ ವಿಜಯಪ್ರಕಾಶ್ ಹಾಗೂ ಗಾಯಕಿ ಅನನ್ಯಾ ಭಟ್ ಭಾವಪೂರ್ಣ ಗಾಯನದಿಂದ ಹಾಡಿನ ಪದ-ಪದಕ್ಕೂ ಜೀವ ತುಂಬಿದ್ದಾರೆ.
ಯಕ್ಷಗಾನದ ಫಲುಕಿನೊಂದಿಗೆ ಆರಂಭವಾಗುವ ಹಾಡು ವಿಜಯಪ್ರಕಾಶ್‌ರ ಮಧುರ ಧ್ವನಿಯೊಟ್ಟಿಗೆ ಮುಂದುವರೆದು ಮೊದಲ ಬಾರಿಗೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಆರಂಭದಿಂದ ಅಂತ್ಯದ ವರೆಗೆ ಒಂದೆ ಧಾಟಿಯಲ್ಲಿ ಸಾಗದೆ ಹಲವು ಏರಿಳಿತಗಿರುವ ಹಾಡಿನಲ್ಲಿ ಅನನ್ಯಾ ಭಟ್‌ರ ಧ್ವನಿಯೂ ಬಹುವಾಗಿ ಗಮನ ಸೆಳೆಯುತ್ತದೆ. ಹಾಡು ಬಡೆದವರು ಪ್ರಮೊದ್ ಮರವಂತೆ.

ಈಗಾಗಲೇ ತಾವೆಂಥಹಾ ಪ್ರತಿಭಾನ್ವಿತ ಎಂಬುದನ್ನು ಸಾಬೀತುಪಡಿಸಿರುವ ಅಜನೀಶ್ ಈ ಹಾಡಿನ ಮೂಲಕ ತಾವು ಕೇವಲ ಗಿಟಾರ್-ಕೀ ಬೋರ್ಡ್ ಸಂಗೀತ ನಿರ್ದೇಶಕ ಮಾತ್ರವಲ್ಲ ಅದಕ್ಕೂ ಮೀರಿದವರು ಎಂಬುದನ್ನು ತೋರಿಸಿದ್ದಾರೆ.
ಹಾಡಿನ ಮಾಧುರ್ಯ ಒಂದೆಡೆಯಾದರೆ ಹಾಡಿನ ಮುನ್ನೆಲೆಯಲ್ಲಿರುವ ದೃಶ್ಯಗಳದ್ದೇ ಮತ್ತೊಂದು ಅಂದ. ಯುವಕ-ಯುವತಿಯ ನಡುವಿನ ಕಣ್ಸನ್ನೆಯ ಪ್ರೇಮದಿಂದ ಆರಂಭಿಸಿ, ಇಬ್ಬರ ನಡುವಿನ ತುಸು ತುಂಟತನದ ದೃಶ್ಯಗಳನ್ನು ಬಹಳ ಸುಂದರವಾಗಿ ರಿಷಬ್ ಶೆಟ್ಟಿ ಸೆರೆಹಿಡಿದಿದ್ದಾರೆ. ಹಾಡಿನ ನಡುವೆ ಅಲ್ಲಲ್ಲಿ ಕಾಮಿಡಿ ಪಂಚ್‌ಗಳು ಸಹ ಇವೆ. ಹಾಡಿನಲ್ಲಿ ನಾಯಕಿ ಸಪ್ತಮಿ ಗೌಡರ ನಟನೆಯೂ ಬಹಳ ಗಮನ ಸೆಳೆಯುತ್ತದೆ.
ಕತೆಯ ಜೊತೆಗೆ ಸಾಗುತ್ತವಂತೆ ಹಾಡನ್ನು ಬಳಸಿಕೊಳ್ಳಲಾಗಿದ್ದು, ಹಾಡಿನಲ್ಲಿ ನಾಯಕಿಯ ಕುಟುಂಬ, ನಾಯಕನ ಗೆಳೆಯರು, ನಾಯಕಿಯ ವೃತ್ತಿ, ಕೌಟುಂಬಿಕ ಪರಿಸ್ಥಿತಿಗಳ ಚಿತ್ರಣದ, ಊರಿನ ಯಜಮಾನ ಪರಿಚಯ ಹಾಗೂ ನಾಯಕ-ನಾಯಕಿ ನಡುವಿನ ಪ್ರೇಮ ಇನ್ನಿತರೆ ಮಾಹಿತಿಗಳನ್ನು ಜಾಣತನದಿಂದ ರಿಷಬ್ ಬಿಟ್ಟುಕೊಟ್ಟಿದ್ದಾರೆ. ಹಾಡಿನಲ್ಲಿ ಬರುವ ದೃಶ್ಯಗಳು ಬಹಳ ಅಂದವಾಗಿ, ಆಪ್ತವಾಗಿಯೂ ಇವೆ.
'ಕಾಂತಾರ' ಸಿನಿಮಾವನ್ನು ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದು ಮುಖ್ಯ ಪಾತ್ರದಲ್ಲಿ ಅವರೇ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾದ ನಾಯಕಿ ಸಪ್ತಮಿ ಗೌಡ.


Click it and Unblock the Notifications











