ಕಬ್ಜ ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ ಈ ಸ್ಟಾರ್ ನಟರು
ಆರ್ ಚಂದ್ರು ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ಕಬ್ಜ ಸದ್ದು ಸದ್ಯ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿಯೇ ಕೇಳಿ ಬರುತ್ತಿದೆ. ಚಿತ್ರದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಇನ್ನು ಚಿತ್ರತಂಡ ಉಳಿದ ಹಾಡುಗಳನ್ನು ಯಾವಾಗ ಬಿಡುಗಡೆ ಮಾಡಲಿದೆ ಹಾಗೂ ಎಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂಬ ಕುತೂಹಲ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಮೂಡಿತ್ತು.
ಇನ್ನು ಕಳೆದ ಕೆಲ ದಿನಗಳ ಹಿಂದೆಯೇ ಶಿಡ್ಲಘಟ್ಟ ಪಟ್ಟಣದಲ್ಲಿ ಕಬ್ಜ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಆರ್ ಚಂದ್ರು ಮಾಹಿತಿ ನೀಡಿದ್ದರು. ಇಂದು ( ಫೆಬ್ರವರಿ 26 ) ಸಂಜೆ ಆರು ಗಂಟೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಕಬ್ಜ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯಾವ ನಟರು ಹಾಗೂ ನಟಿಯರು ಆಗಮಿಸಲಿದ್ದಾರೆ ಎಂಬ ಮಾಹಿತಿಯನ್ನು ನಿರ್ದೇಶಕ ಆರ್ ಚಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ನಟಿ ಶ್ರೀಯಾ ಶರಣ್, ಗೋಲ್ಡನ್ ಸ್ಟಾರ್ ಗಣೇಶ್, ಸಲಗ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಡಾಲಿ ಧನಂಜಯ್ ಹಾಗೂ ನೆನಪಿರಲಿ ಪ್ರೇಮ್ ಮುಖ್ಯ ಅತಿಥಿಗಳಾಗಿ ವೇದಿಕೆ ಏರಲಿದ್ದಾರೆ. ಸದ್ಯ ನಿನ್ನೆಯಷ್ಟೇ ಎರಡು ದಿನಗಳ ಕಾಲ ನಡೆದ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಕ್ರಿಕೆಟ್ ಟೂರ್ನಮೆಂಟ್ ಮುಕ್ತಾಯಗೊಂಡಿದ್ದು, ಇದರಲ್ಲಿ ಭಾಗವಹಿಸಿದ್ದ ಬಹುತೇಕರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಅಲ್ಲದೇ ಗುರು ಕಿರಣ ಮ್ಯೂಸಿಕಲ್ ನೈಟ್ಸ್ ಸಹ ಈ ಆಡಿಯೊ ಬಿಡುಗಡೆ ಕಾರ್ಯಕ್ರಮದ ಭಾಗವಾಗಿದ್ದು ವಿಜಯ್ ಪ್ರಕಾಶ್, ಸಾಧು ಕೋಕಿಲ, ಮಂಗ್ಳಿ, ಅನುರಾಧಾ ಭಟ್ ಹಾಗೂ ಸಂಜಿತ್ ಹೆಗ್ಡೆ ವಿವಿಧ ಗೀತೆಗಳನ್ನು ಹಾಡಲಿದ್ದಾರೆ. ಜತೆಗೆ ಪರಭಾಷೆಯ ಹಲವಾರು ಖ್ಯಾತ ನಟ ನಟಿಯರು ಸಹ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಲಾಗಿದೆ.
ಇನ್ನು ಆರ್ ಚಂದ್ರು ಈ ಹಿಂದೆ ತಾನು ನಿರ್ದೇಶಿಸಿದ್ದ ಚಿತ್ರಗಳಲ್ಲಿ ನಾಯಕರಾಗಿ ಬಣ್ಣ ಹಚ್ಚಿದ್ದ ಪ್ರತಿಯೊಬ್ಬ ನಟನನ್ನೂ ಸಹ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಕರೆ ತರುತ್ತಿರುವುದು ವಿಶೇಷವಾಗಿದೆ. ಇನ್ನು ಚಿತ್ರದ ಐಟಂ ಹಾಡು ಸಂಜೆ ಏಳು ಗಂಟೆಗೆ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಯಜಮಾನ ಹಾಗೂ ಅಮತ್ ಚಿತ್ರಗಳ ಖ್ಯಾತಿಯ ನಟಿ ತಾನ್ಯಾ ಹೋಪ್ ಸೊಂಟ ಬಳುಕಿಸಿದ್ದಾರೆ. ಈ ಹಾಡನ್ನು ಚಿತ್ರತಂಡ 'ಸೆಲೆಬ್ರೇಶನ್ ಸಾಂಗ್ ಆಫ್ ದ ಇಯರ್' ಎಂದು ಬರೆದುಕೊಂಡು ಪ್ರಚಾರ ಮಾಡುತ್ತಿದೆ.

ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 17ರಂದು ಕಬ್ಜ ಚಿತ್ರ ತೆರೆಗೆ ಅಪ್ಪಳಿಸಲಿದೆ. ಆ ದಿನದಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಇರುವ ಕಾರಣ ಅದೇ ದಿನ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಅನೇಕ ಬಾರಿ ತಿಳಿಸಿರುವ ಆರ್ ಚಂದ್ರು, ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಿದ್ದೇವೆ ಎಂದೂ ಸಹ ತಿಳಿಸಿದ್ದಾರೆ.


Click it and Unblock the Notifications











