ಕನ್ನಡ ಭಾಷಾಭಿಮಾನ ಇಲ್ಲದವರಿಗೆ ಎಚ್ಚರಿಕೆ ಕೊಟ್ಟ ಶಿವಣ್ಣ
ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಹಾಡಿರುವ 'ಕನ್ನಡ ಕಲಿಯೋ ಮುಂಡೆದೇ....' ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡ ಭಾಷೆ ಬಳಸಿ ಎಂದು ಎಚ್ಚರಿಕೆ ನೀಡುವುದರ ಜೊತೆಗೆ ಜಾಗೃತಿ ಮೂಡಿಸುವಂತಿದೆ ಈ ಹಾಡು.
ಚಂದ್ರಶೇಖರ್ ಬಂಡಿಯಪ್ಪಾ ನಿರ್ದೇಶನ ಮಾಡಿರುವ 'ತಾರಕಾಸುರ' ಚಿತ್ರದ ಹಾಡು ಇದಾಗಿದ್ದು, ರೆಬೆಲ್ ಸ್ಟಾರ್ ಅಂಬರೀಶ್ ದಂಪತಿ ಈ ಹಾಡನ್ನ ಬಿಡುಗಡೆ ಮಾಡಿದ್ದಾರೆ.
ಕನ್ನಡದ ಬಗ್ಗೆ ಮೂಡಿಬಂದಿರುವ ಈ ಹಾಡಿನಲ್ಲಿ ಭಾಷಾಭಿಮಾನದ ಬಗ್ಗೆ ಸಾಹಿತ್ಯ ಬರೆಯಲಾಗಿದೆ. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ದುಡಿಯಲು, ಮತ್ತು ತಮ್ಮ ಜೀವನವನ್ನ ರೂಪಿಸಿಕೊಳ್ಳಲು ಬರ್ತಾರೆ. ನಂತರ ಇಲ್ಲೆ ನೆಲೆ ಕಾಣ್ತಾರೆ. ವರ್ಷಗಳ ಕಾಲ ಇಲ್ಲೆ ಕುಟುಂಬವನ್ನ ಪೋಷಿಸುತ್ತಾರೆ. ಆದ್ರೆ, ಕನ್ನಡ ಭಾಷೆಯನ್ನ ಮಾತ್ರ ಕಲಿಯುವ ಪ್ರಯತ್ನ ಮಾಡುವುದಿಲ್ಲ ಎಂಬುದನ್ನ ಚರ್ಚಿಸಿದ್ದಾರೆ.

ಗಡಿವಿವಾದ, ನೀರಿನ ವಿವಾದ ಹೀಗೆ ಎಲ್ಲದರ ಬಗ್ಗೆಯೂ ಹಾಡಿನಲ್ಲಿ ಸಾಹಿತ್ಯ ಬರೆಯಲಾಗಿದೆ. ಇಂತಹ ಸನ್ನಿವೇಶವನ್ನ ಗಮನದಲ್ಲಿಟ್ಟುಕೊಂಡು ಈ ಹಾಡಿಗೆ ಸಾಹಿತ್ಯ ಬರೆಯಲಾಗಿದೆ. ಭಾಷಾಭಿಮಾನ ಇಲ್ಲದ ಇಂತಹ ವ್ಯಕ್ತಿಗಳಿಗೆ ಈ ಹಾಡಿನ ಮೂಲಕ ತರಾಟೆಗೆ ತೆಗೆದುಕೊಳ್ಳಲಾಗಿದೆ. ಕನ್ನಡ ಭಾಷೆಗೆ ಅವಮಾನ ಮಾಡುವಂತಹ ವ್ಯಕ್ತಿಗಳಿಗೆ ಹಾಡಿನಿಂದಲೇ ಉಗಿದು ಉಪ್ಪಿನಕಾಯಿ ಹಾಕಲಾಗಿದೆ.
ವೈಭವ್ ನಾಯಕನಾಗಿರುವ 'ತಾರಕಾಸುರ' ಚಿತ್ರದಲ್ಲಿ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್, ಟಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ನರಸಿಂಹಲು ತಮ್ಮ ಮಗನನ್ನು ನಾಯಕನಾಗಿ ಸಿನಿಮಾರಂಗಕ್ಕೆ ಪರಿಚಯ ಮಾಡುವುದರ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ

ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡಿರುವ ಹಾಡನ್ನು ಕವಿರಾಜ್ ಬರೆದಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಿದ್ದು ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











