ದೊಡ್ಡ ಮೊತ್ತಕ್ಕೆ 'ಭೈರತಿ ರಣಗಲ್' ಆಡಿಯೋ ಸೇಲ್; ಶಿವಣ್ಣನ ಬರ್ತ್‌ಡೇಗೆ ಟೀಸರ್
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಶಿವರಾಜ್‌ಕುಮಾರ್ ನಟಿಸುತ್ತಿರುವ 'ಭೈರತಿ ರಣಗಲ್'. ನರ್ತನ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಪೋಸ್ಟರ್‌ಗಳು ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿವೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸುದ್ದಿಯಲ್ಲಿರುವ ಈ ಸಿನಿಮಾ ಶಿವಣ್ಣ ಬರ್ತ್‌ಡೇಗೆ ಟೀಸರ್ ರಿಲೀಸ್ ಮಾಡುವುದಕ್ಕೆ ಹೊರಟಿದೆ.
'ಮಫ್ತಿ' ಸಿನಿಮಾದ ಬಳಿಕ ಮತ್ತೆ ನರ್ತನ್ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್ ಒಂದಾಗಿದೆ. ಈ ಕಾರಣಕ್ಕೆ 'ಭೈರತಿ ರಣಗಲ್' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. 'ಮಫ್ತಿ'ಯಲ್ಲಿ ಶಿವಣ್ಣನ ಖದರ್ ನೋಡಿದವರಿಗೆ ಈ ಸಿನಿಮಾದಲ್ಲಿ ಹೇಗೆ ತೋರಿಸಿರಬಹುದು ಅನ್ನೋ ಕುತೂಹಲವಿದೆ. ಅದು ಜುಲೈ 12ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಶಿವಣ್ಣ ಹುಟ್ಟುಹಬ್ಬದಂದು ರಿವೀಲ್ ಆಗಲಿದೆ.

ಶಿವಣ್ಣನ ಬರ್ತಡೇಗೆ ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾದ ಟೀಸರ್ ರಿಲೀಸ್ ಆಗೋದು ಕನ್ಫರ್ಮ್. ಚಿತ್ರತಂಡ ಈ ಟೀಸರ್ ಅನ್ನು 'ಫಸ್ಟ್ ವರ್ಡಿಕ್ಟ್' ಅಂತ ಹೇಳಿದೆ. ಇದನ್ನು ಹೇಳಿದ ಮೇಲಂತೂ ಸಿನಿಮಾ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿಂದೆ ಶಿವಣ್ಣ ನಟನೆಯ 'ವೇದ' ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ಸಂಸ್ಥೆಯಿಂದ ಮತ್ತೊಂದು ಸಿನಿಮಾ ನಿರ್ಮಾಣ ಆಗುತ್ತಿದೆ. ಇದು ಗೀತಾ ಪಿಕ್ಚರ್ಸ್ ಸಂಸ್ಥೆಯ ಎರಡನೇ ಸಿನಿಮಾ. 'ಮಫ್ತಿ' ಸಿನಿಮಾದ ಪ್ರೀಕ್ವೆಲ್ ಆಗಿರುವುದರಿಂದ ಯಂಗ್ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಬಹುದು. ಇದರಲ್ಲಿ ಶಿವಣ್ಣ ಲಾಯರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾದ ಟೀಸರ್ ಬಿಡುಗಡೆಗೂ ಮುನ್ನವೇ ವ್ಯಾಪಾರಕ್ಕೂ ಇಳಿದಿದೆ. 'ಬೈರತಿ ರಣಗಲ್' ಸಿನಿಮಾಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದ್ದು, ಸಿನಿಮಾ ಹಾಡುಗಳನ್ನು ಆನಂದ್ ಆಡಿಯೋ ಖರೀದಿ ಮಾಡಿದೆ ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಈ ಸಿನಿಮಾಗೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಆನಂದ್ ಆಡಿಯೋ ಸಂಸ್ಥೆ 'ಭೈರತಿ ರಣಗಲ್' ಸಿನಿಮಾ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಆದರೆ, ಎಷ್ಟು ಮೊತ್ತ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ. 'ಭೈರತಿ ರಣಗಲ್' ಸಿನಿಮಾ ಇದೇ ವರ್ಷ ತೆರೆಕಾಣುತ್ತಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಹೊಸ ಹುರುಷು ನೀಡಬಹುದೆಂಬ ನಿರೀಕ್ಷೆಯಿದೆ. "ಈ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ" ಎನ್ನುತ್ತಾರೆ ಆನಂದ್ ಆಡಿಯೋದ ಮಾಲೀಕ ಶ್ಯಾಮ್ ಚಾಬ್ರಿಯಾ.
'ಭೈರತಿ ರಣಗಲ್' ಸಿನಿಮಾದ ಆಡಿಯೋ ಹಕ್ಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಶಿವಣ್ಣನ ಬರ್ತ್‌ಡೇಗೆ 'ಭೈರತಿ ರಣಗಲ್' ಟೀಸರ್ ರಿಲೀಸ್ ಆದ ಬಳಿಕ ಶೀಘ್ರದಲ್ಲಿಯೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ಅನ್ನೋ ಸುದ್ದಿ ಹಬ್ಬಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











