ಕೈಲಾಸ ದೇಶದ ಆಶ್ರಮದಲ್ಲಿ ಶಿವಣ್ಣನ ಸಿನಿಮಾ ಹಾಡಿಗೆ ತಾಳ ಹಾಕುತ್ತಿರುವ ನಿತ್ಯಾನಂದ: ವಿಡಿಯೋ
ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪಿ ನಿತ್ಯಾನಂದ ಕಳೆದ 4 ವರ್ಷಗಳಿಂದ ಭಾರತದಿಂದ ತಲೆಮರೆಸಿಕೊಂಡಿದ್ದು ವಿದೇಶದಲ್ಲಿ ನೆಲೆಸಿದ್ದಾನೆ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಹೆಸರಿನ ತನ್ನದೇ ದೇಶ ರಚಿಸಿಕೊಂಡು ಇರುವುದಾಗಿ ಹೇಳಿಕೊಂಡಿದ್ದ. ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದರಲ್ಲಿ ನಿತ್ಯಾನಂದ ನೆಲೆಸಿರುವುದಾಗಿ ವರದಿಯಾಗಿದೆ. ಆ ದ್ವೀಪಕ್ಕೆ 'ಕೈಲಾಸ' ಎಂದು ಹೆಸರು ಇಟ್ಟುಕೊಂಡಿದ್ದಾನೆ.
ಇನ್ನು ಈ ಕೈಲಾಸ ಎನ್ನುವ ಕಾಲ್ಪನಿಕ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್‌ಪೋರ್ಟ್ ಕೂಡ ನಿತ್ಯಾನಂದ ಸಿದ್ದಪಡಿಸಿಕೊಂಡಿದ್ದಾನೆ. ಅದನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವೆಂದು ಆತ ಹೇಳಿಕೊಂಡಿದ್ದಾನೆ. ನಿತ್ಯಾನಂದನೇ 'ಕೈಲಾಸ' ದೇಶಕ್ಕೆ ಸರ್ವಾಧಿಕಾರಿ. ಇನ್ನು ಆ ದೇಶದಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲವಂತೆ. ಇನ್ನು ನಟಿ ರಂಜಿತಾ ಹಾಗೂ ಆಕೆಯ ಸಹೋದರಿ ಕೂಡ ಅದೇ ಆಶ್ರಮದಲ್ಲಿ ಇರುವುದಾಗಿ ಹೇಳಲಾಗ್ತಿದೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಕೈಲಾಸ ದೇಶಕ್ಕೆ ಆತನ ಪ್ರಿಯಶಿಷ್ಯೆ ರಂಜಿತಾ ಪ್ರಧಾನಿ ಎಂದು ಇತ್ತೀಚೆಗೆ ಗುಸುಗುಸು ಶುರುವಾಗಿತ್ತು. ನಟಿ ರಂಜಿತಾ ಜೊತೆಗಿನ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಿತ್ಯಾನಂದ ಬಿಡದಿ ಧ್ಯಾನಪೀಠದಿಂದ ಪಲಾಯನ ಮಾಡಿದ್ದ. ಬಳಿಕ ಗುಜರಾತ್ ಸೇರಿದ್ದ. ಬಳಿಕ ದೇಶವನ್ನೇ ಬಿಟ್ಟು ಪರಾರಿ ಆಗಿದ್ದರು. ಸದ್ಯ ನಿತ್ಯಾನಂದ ಆಶ್ರಮದಲ್ಲಿ ಭಜನೆ ಮಾಡುವ ವಿಡಿಯೋವೊಂದು ವೈರಲ್ ಆಗುತ್ತಿದೆ.
'ಜೋಗಯ್ಯ' ಚಿತ್ರದ ಟೈಟಲ್ ಸಾಂಗ್ ನಿತ್ಯಾನಂದನ ಕೈಲಾಸ ದೇಶದ ಆಶ್ರಮದಲ್ಲಿ ಸದ್ದು ಮಾಡುತ್ತಿದೆ. ಸ್ವತಃ ನಿತ್ಯಾನಂದ ಡ್ರಮ್ ಬಾರಿಸುತ್ತಾ ಭಕ್ತರ ಜೊತೆ ಭಜನೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕೈಲಾಸ ದೇಶದ ಅಧಿಕೃತ ಟ್ವಿಟ್ಟರ್ ಖಾತೆ ಎನ್ನಲಾದ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಸದ್ಯ ಈ ವಿಡಿಯೋಗೆ ಶಿವರಾಜ್‌ಕುಮಾರ್ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
2005ರ ಸೂಪರ್ ಹಿಟ್ 'ಜೋಗಿ' ಸಿನಿಮಾ ಕಥೆಯನ್ನು ಮುಂದುವರೆಸಿ ಪ್ರೇಮ್ 'ಜೋಗಯ್ಯ' ಕಥೆ ಕಟ್ಟಿಕೊಟ್ಟಿದ್ದರು. ವಿ. ಹರಿಕೃಷ್ಣ ಸಂಗೀತದಲ್ಲಿ ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಚಿತ್ರದ ಆರಂಭದಲ್ಲೇ ಬರುವ ಟೈಟಲ್ ಸಾಂಗ್ ಸಿನಿರಸಿಕರ ಮನಗೆದ್ದಿತ್ತು. ಶಿವಣ್ಣ ಅಗೋರಿ ಅವತಾರದಲ್ಲಿ ಹೆಜ್ಜೆ ಹಾಕಿದ್ದರು. ಇದೇ ಹಾಡು ಈಗ ನಿತ್ಯಾನಂದನ ಕೈಲಾಸ ದೇಶದಲ್ಲಿ ಸದ್ದು ಮಾಡ್ತಿದೆ. ಸ್ವತ: ಜೋಗಿ ಪ್ರೇಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದರು. ಶಂಕರ್ ಮಹದೇವನ್ ಗಾಯನದಲ್ಲಿ ಹಾಡು ಸಿನಿರಸಿಕರಿಗೆ ಇಷ್ಟವಾಗಿತ್ತು.
ಸದ್ಯ ಪ್ರೇಮ್ 'ಕೆಡಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಚಿತ್ರ ಮೂಡ ಬರುತ್ತಿದೆ. ಧ್ರುವ ಸರ್ಜಾ 'ಕೆಡಿ' ಆಗಿ ಅಬ್ಬರಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 'ಕೆಡಿ' ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕೆಡಿ' ಚಿತ್ರವನ್ನು ಪ್ರೇಮ್ ಕಟ್ಟಿಕೊಡುತ್ತಿದ್ದಾರೆ. 1968 ಮತ್ತು 1978ರ ನಡುವೆ ನಡೆದಿರುವ ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಪ್ರೇಮ್ ನಿರ್ದೇಶನದ ಸಿನಿಮಾಗಳು ಸೋತರೂ ಆಲ್ಬಮ್ ಮಾತ್ರ ಸೂಪರ್ ಹಿಟ್ ಆಗುತ್ತದೆ. ಹಾಗಾಗಿ 'ಕೆಡಿ' ಸಿನಿಮಾ ಸಾಂಗ್ಸ್ ಬಗ್ಗೆಯೂ ಭಾರೀ ನಿರೀಕ್ಷೆಯಿದೆ.


Click it and Unblock the Notifications











