Ghost: ಭುಜ ಕುಣಿಸೋ ಟ್ಯೂನು.. 4 ಭಾಷೆಗೆ ಒಂದೇ ಸಾಂಗು..'ಘೋಸ್ಟ್' OGM ನಿಜಕ್ಕೂ ಬೊಂಬಾಟ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಿ ಪ್ರಮೋಷನ್‌ಗೆ ಚಾಲನೆ ಕೊಡಲಾಗಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸೋಕೆ ಸಿದ್ಧವಾಗಿದೆ. ನಿರ್ದೇಶಕ ಶ್ರೀನಿ ವಿಭಿನ್ನವಾಗಿ ಏನೋ ಮಾಡ್ತಿದ್ದಾರೆ ಎನ್ನುವುದರ ಸುಳಿವು ಸಿಗುತ್ತಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಘೋಸ್ಟ್'. ದಸರಾ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ OGM ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಾಂಗ್ ಜೊತೆಗೆ ಬಿಜಿಎಂ ಕೂಡ ಸೇರಿಸಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕೇಳುಗರಿಗೆ ಸಖತ್ ಕಿಕ್ ಕೊಡ್ತಿದೆ. 'ಘೋಸ್ಟ್' ಸಿನಿಮಾ ಬಿಜಿಎಂ ಕೂಡ ಸಿನಿರಸಿಕರ ಮನಗೆಲ್ಲುವ ಸಾಧ್ಯತೆಯಿದೆ.

ಪ್ಯಾನ್ ಇಂಡಿಯಾ ಸಿನಿಮಾ ಸಾಂಗ್ಸ್‌ನ 5 ಭಾಷೆಗಳಲ್ಲಿ ರಿಲೀಸ್ ಮಾಡೋದನ್ನು ನೋಡಿದ್ದೇವೆ. ಕೆಲವೊಮ್ಮೆ 5 ಭಾಷೆಗೆ ಸೇರಿಸಿ ಒಂದೇ ಟೀಸರ್ ಕಟ್ ಮಾಡೋದನ್ನು ಗಮನಿಸಿದ್ದೇವೆ. ಆದರೆ ಇಲ್ಲಿ 4 ಭಾಷೆಯ ಸಾಹಿತ್ಯ ಸೇರಿಸಿ ಒಂದೇ ಸಾಂಗ್ ಕಟ್ಟಿಕೊಡಲಾಗಿದೆ. ಆದರೆ ಎಲ್ಲೂ ಅಭಾಸ ಅನ್ನಿಸುವುದಿಲ್ಲ. ಇದು ನಾಯಕನ ಇಂಟ್ರೊಡಕ್ಷನ್ ಸಾಂಗ್, ಬಿಲ್ಡಪ್ ಸಾಂಗ್ ಅನ್ನೋದು ಗೊತ್ತಾಗ್ತಿದ್ದು ಲಿರಿಕ್ಸ್ ಸಖತ್ ಕ್ಯಾಚಿಯಾಗಿದೆ. ರ್ಯಾಪ್ ಟಚ್ ಕೊಟ್ಟು 'ಘೋಸ್ಟ್' OGM ಖದರ್ ಹೆಚ್ಚಿಸಿದ್ದಾರೆ.
'ಘೋಸ್ಟ್' OGMಗೆ ಕನ್ನಡದಲ್ಲಿ ಚಿರಂಜೀವಿ, ತೆಲುಗು- ತಮಿಳಿನಲ್ಲಿ ಎಂ.ಸಿ ಚೇತನ್ ಹಾಗೂ ಮಲಯಾಳಂನಲ್ಲಿ ರಾಜೀವ್ ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಜೊತೆ ನಿಶಾನ್ ರೈ ದನಿಯಾಗಿದ್ದಾರೆ. ಅರ್ಜುನ್ ಜನ್ಯಾ ಕಂಪೋಸ್ ಹಾಗೂ ಪ್ರೋಗ್ರಾಮ್ ಮಾಡಿದ್ದಾರೆ. 'ಘೋಸ್ಟ್' OGM ಕೇಳುತ್ತಿದ್ದರೆ ತನಗೆ ತಾನೇ ಭುಜ ಕುಣಿಯೋಕೆ ಶುರುವಾಗುತ್ತದೆ.
ಶಿವರಾಜ್‌ಕುಮಾರ್ ಗನ್ ಹಿಡಿದು ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕಣ್ಣಲ್ಲೇ ಕೊಲ್ಲುವ ಶಿವಣ್ಣನ ಕಣ್ಣೊಳಗೆ ಹೊ ಪ್ರಪಂಚವನ್ನೇ ತೆರೆದಿಟ್ಟಿದ್ದಾರೆ ಶ್ರೀನಿ. ಅಭಿಮಾನಿಗಳಿಗಂತೂ ಸಾಂಗ್ ಸಖತ್ ಮಜಾ ಕೊಡ್ತಿದೆ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರಿಗೂ ಸಖತ್ ಇಷ್ಟವಾಗ್ತಿದೆ. ಶ್ರೀನಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಘೋಸ್ಟ್' ಚಿತ್ರದಲ್ಲಿ ಶಿವಣ್ಣನ ಜೊತೆಗೆ ಅನುಪಮ್ ಕೇರ್, ಜಯರಾಂ, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ದತ್ತಣ್ಣ ನಟಿಸಿದ್ದಾರೆ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಶಿವಣ್ಣ ಅಕ್ಕಪಕ್ಕ ರಾಜ್ಯಗಳಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರವನ್ನು ಬಹಳ ದೊಡ್ಡಮಟ್ಟದಲ್ಲಿ ಹೊರ ರಾಜ್ಯಗಳಲ್ಲೂ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

'ಘೋಸ್ಟ್' ಚಿತ್ರದ ಹಿಂದಿ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 'ಆರ್ ಆರ್ ಆರ್', 'ಜವಾನ್' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆ ಈಗ 'ಘೋಸ್ಟ್' ಚಿತ್ರದ ವಿತರಣ ಹಕ್ಕನ್ನು ಪಡೆದುಕೊಂಡಿದೆ.
ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ 'ಘೋಸ್ಟ್' ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಪೆನ್ ಸ್ಟುಡಿಯೋ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಬಗ್ಗೆ ಮಾಹಿತಿ ನೀಡಿದ್ದರು. ಚಿತ್ರದ ಪ್ರಚಾರಕ್ಕಾಗಿ ನಟ ಶಿವರಾಜಕುಮಾರ್ ಶೀಘ್ರದಲ್ಲೇ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ.
48 ಘಂಟೆಗಳಲ್ಲಿ ನಡೆಯುವ ಕಥೆ ಇದಾಗಿದ್ದು ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಅಕ್ಟೋಬರ್ 19ರಂದು ಸಿನಿಮಾ ಬಹಳ ಅದ್ಧೂರಿಯಾಗಿ ರಿಲೀಸ್ ಆಗಲಿದೆ.


Click it and Unblock the Notifications











