ಗಾಯಕ ಕೆಕೆ ದುರಂತ ಸಾವು: ಕಂಬನಿ ಮಿಡಿದ ಸಿನಿಮಾರಂಗ!
ಗಾಯಕ ಕೃಷ್ಣಕುಮಾರ್ ಕುನ್ನತ್ ಇನ್ನಿಲ್ಲ. ಕೆಕೆ ಗಾಯನ ಶಾಶ್ವತವಾಗಿ ನಿಂತು ಹೋಗಿದೆ. ಕೋಲ್ಕತ್ತಾದ ನಜ್ರುಲ್ ಮಂಚ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಗಾಯಕ ಕೆಕೆ, ಸ್ಟೇಜ್ ಮೇಲೆ ಅಸುನೀಗಿರುವ ದುರಂತ ಘಟನೆ ನಡೆದಿದೆ. ಕೆಕೆ ನಿಧನಕ್ಕೆ ಸಂಗೀತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗಾಯನ ವೇದಿಕೆಯಲ್ಲೇ ಉಸಿರು ನಿಲ್ಲಿಸಿದ್ದನ್ನು ಅಭಿಮಾನಿಗಳು ಸ್ಮರಿಸಿ ಆಘಾತ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದ ವಿವೇಕಾನಂದ ಕಾಲೇಜಿನ ಕಾರ್ಯಕ್ರಮದ ಭಾಗವಾಗಿ ನಜ್ರುಲ್ ಮಂಚ್‌ನಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಕೆಕೆ ಪಾಲ್ಗೊಂಡಿದ್ದರು. ಗಾಯನದ ನಡುವೆ ಅಸ್ವಸ್ಥರಾಗಿ ಕುಸಿದ ಗಾಯಕ ಕೆಕೆರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಈ ಸುದ್ದಿ ಸಿನಿಮಾರಂಗ ಮಾತ್ರವಲ್ಲ, ಕೆಕೆ ಕಂಠಸಿರಿಗೆ ಮರುಳಾಗಿದ್ದವರಿಗೆಲ್ಲಾ ಆಘಾತ ಉಂಟುಮಾಡಿದೆ. ಕನ್ನಡ ಸೇರೀದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ಕೆಕೆ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಳ ಸಂತಾಪ ಸೂಚಿಸಿದ್ದಾರೆ. "ನನ್ನ ಮನದಾಳದಿಂದ ಸಂತಾಪ ಸಲ್ಲಿಸುವೆ, ಅವರ ಬಂಮಗಾರದ, ಭಾವಪೂರ್ಣ ಧ್ವನಿ ನಮ್ಮೆಲ್ಲರ ಹೃದಯದಲ್ಲಿ ಪ್ರತಿ ಧ್ವನಿಸುತ್ತದೆ." ಎಂದು ಮೊದಲ ಟ್ವೀಟ್ ಮಾಡಿದ್ದಾರೆ.
"ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ವಿನಮ್ರ, ಸೌಮ್ಯ, ಶುದ್ಧ ಮಾನವರಲ್ಲಿ ಒಬ್ಬರು. ಲಕ್ಷಾಂತರ ಅಭಿಮಾನಿಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳ ಜೀವನದಲ್ಲಿ ಪ್ರೀತಿಯನ್ನು ಹರಡಲು, ದೇವರೇ ಪ್ರೀತಿಯ ಮಗುವನ್ನು ಕಳುಹಿಸಿದ್ದಾ. ಈಗ ದೇವರಿಗೆ ಅವನು ಮರಳಿ ಬೇಕೇ? ಇಷ್ಟು ಬೇಗ? ಇದು ದುರಂತ. ಅವರ ಕುಟುಂಬ ಬಗ್ಗೆ ಎಂದು ಊಹಿಸಲು ಸಾಧ್ಯವಿಲ್ಲ." ಎಂದು ಬರೆದುಕೊಂಡು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಶ್ರೇಯಾ ಘೋಷಾಲ್ "ಈ ಸುದ್ದಿಯ ಸುತ್ತ ನನ್ನ ತಲೆ ಸುತ್ತಲೇ ಇದೆ. ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ಕೆಕೆ ಯಾಕೆ! ಇದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರ! ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಂಗೀತ ನಿರ್ದೇಶಕ ತಮನ್ ಕೂಡ ಟ್ವೀಟ್ ಮಾಡುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. "ಇದು ಅತ್ಯಂತ ಆಘಾತಕಾರಿ... ಕೆಕೆ ಜಿ...ಅದ್ಬುತ ಪ್ರತಿಭೆ ಅದ್ಬುತ ಮಾನವ ಇಂದು ನಮ್ಮೊಂದಿಗಿಲ್ಲ ........ ರೆಸ್ಟ್ ಇನ್ ಪೀಸ್ ಕೆಕೆ ಸಾಬ್ ಅನಿರೀಕ್ಷಿತ ...ಜೀವನ" ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನೂ ಕನ್ನಡ ಸಿನಿಮಾರಂಗದಲ್ಲಿಯೂ ಹಲವರು ಕೃಷ್ಣ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ "ಆಘಾತಕಾರಿ. ಖ್ಯಾತ ಗಾಯಕ ಕೆಕೆ ಅವರು ಲೈವ್ ಈವೆಂಟ್‌ನಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಅವರ ದುರಂತ ಸಾವು ನಿಜಕ್ಕೂ ಆಘಾತಕಾರಿ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











