ಎರಡನೇ ಪತಿಯ ಆಸ್ತಿ: ಪ್ರಶ್ನೆಗಳಿಗೆ ಗಾಯಕಿ ಸುನಿತಾ ಉತ್ತರ
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿರುವ ಗಾಯಕಿ ಸುನಿತಾ ಉಪದ್ರಶ್ತ ಕೆಲವು ತಿಂಗಳ ಹಿಂದಷ್ಟೆ ಎರಡನೇ ಮದುವೆಯಾದರು. ಸುನಿತಾರ ಮಕ್ಕಳೇ ಮುಂದೆ ನಿಂತು ಅಮ್ಮನ ಮದುವೆ ಮಾಡಿದ್ದು ವಿಶೇಷ.
ಗಾಯಕಿ ಸುನಿತಾರ ಎರಡನೇ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ತೆಲುಗು ಸುದ್ದಿ ವಾಹಿನಿಗಳು ಸುನಿತಾ ಎರಡನೇ ವಿವಾಹವನ್ನು ವಿಶೇಷ ಪ್ರಾಧಾನ್ಯತೆ ನೀಡಿ ಪ್ರಸಾರ ಮಾಡಿದ್ದವು. 43 ವರ್ಷದ ಮಕ್ಕಳೆದುರೆ ಎರಡನೇ ಮದುವೆ ಆದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಹಲವರು ಬೆಂಬಲವನ್ನೂ ಸೂಚಿಸಿದ್ದರು.
ಸುನಿತಾರ ಈಗಿನ ಪತಿ ರಾಮಕೃಷ್ಣ ವೀರಪನೇನಿ ಉದ್ಯಮಿ ಆಗಿದ್ದು, ಸಾಕಷ್ಟು ಆಸ್ತಿ ಹೊಂದಿದ್ದಾರೆ. ಗಾಯಕಿ ಸುನಿತಾ, ರಾಮಕೃಷ್ಣರ ಆಸ್ತಿ ನೋಡಿ ಅವರನ್ನು ವಿವಾಹವಾಗಿದ್ದಾರೆ ಎಂದು ಕೆಲವರು ಮಾತನಾಡಿಕೊಂಡಿದ್ದು ಸುನಿತಾ ಕಿವಿಗೆ ಬಿದ್ದಿದ್ದು, ಪತಿಯ ಆಸ್ತಿಯ ಬಗ್ಗೆ ಸುನಿತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಆಸ್ತಿ ನೋಡಿ ಮದುವೆ ಆಗಿದ್ದಾರೆಂಬ ಆರೋಪ
''ರಾಮಕೃಷ್ಣ ವೀರಪನೇನಿ ಅವರ ಆಸ್ತಿ ನೋಡಿ ಅವರನ್ನು ಮದುವೆ ಆಗಿದ್ದೇನೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಅವರು ಏನು ಬ್ಯುಸಿನೆಸ್ ಮಾಡುತ್ತಾರೆಂಬ ಮಾಹಿತಿ ಸಹ ನನಗೆ ಇಲ್ಲ. ಖಾಸಗಿ ಸಂಸ್ಥೆಯೊಂದನ್ನು ಹೊಂದಿದ್ದಾರೆ ಎಂಬುದು ಗೊತ್ತು, ಆದರೆ ಆ ಸಂಸ್ಥೆಯ ವ್ಯವಹಾರ ಎಷ್ಟು? ಮೌಲ್ಯ ಎಷ್ಟು, ರಾಮಕೃಷ್ಣ ಎಷ್ಟು ಆಸ್ತಿ ಹೊಂದಿದ್ದಾರೆ ಇದ್ಯಾವುದರ ಮಾಹಿತಿಯೂ ನನಗೆ ಇಲ್ಲ'' ಎಂದಿದ್ದಾರೆ ಸುನಿತಾ.

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು: ಸುನಿತಾ
''ನನ್ನ ಭವಿಷ್ಯವನ್ನು ನಾನು ಕಟ್ಟಿಕೊಂಡಿದ್ದೇನೆ, ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ ಹೀಗಿರುವಾಗ ನಾನೇಕೆ ಅವರ ಆಸ್ತಿಯನ್ನು ನೋಡಲಿ. ನನಗೆ ಅದರ ಅವಶ್ಯಕತೆಯೂ ಇಲ್ಲ. ರಾಮ್‌ರ ಒಳ್ಳೆಯತನ, ಮಾನವೀಯ ಗುಣಗಳನ್ನು ನೋಡಿ ಅವರನ್ನು ಮದುವೆಯಾಗಿದ್ದೇನೆಯೇ ವಿನಃ ಅವರ ಆಸ್ತಿಯನ್ನೊ, ಅಂತಸ್ತನ್ನೋ ನೋಡಿ ಅಲ್ಲ. ಇದಕ್ಕೂ ಮುನ್ನಾ ನನ್ನ ಜವಾಬ್ದಾರಿಯನ್ನು ಯಾರೊ ಒಬ್ಬ ವ್ಯಕ್ತಿ ನೋಡಿಕೊಳ್ಳುತ್ತಿದ್ದರು ಎಂಬ ಸುದ್ದಿಗಳನ್ನು ಸಹ ಹರಿಯ ಬಿಡಲಾಗಿತ್ತು ಆದರೆ ಅದು ಸಹ ಸುಳ್ಳು'' ಎಂದಿದ್ದಾರೆ ಸುನಿತಾ.

19ನೇ ವಯಸ್ಸಿಗೆ ಮದುವೆ ಆಗಿದ್ದ ಸುನಿತಾ
ಗಾಯಕಿ ಸುನಿತಾ ತಮ್ಮ 19ನೇ ವಯಸ್ಸಿನಲ್ಲಿಯೇ ಕಿರಣ್ ಕುಮಾರ್ ಗೋಪರಾಜು ಎಂಬಾತನನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ಸಹ ಜನಿಸಿದರು. ಆದರೆ ನಂತರ ಪತಿಯೊಂದಿಗೆ ದಾಂಪತ್ಯ ಸರಿಬರದೆ ಬಹುಬೇಗನೆ ವಿಚ್ಛೇಧನ ಸಹ ಪಡೆದುಕೊಂಡು, ಇಬ್ಬರು ಮಕ್ಕಳ ಜವಾಬ್ದಾರಿಯನ್ನು ತಾವೊಬ್ಬರೇ ನಿರ್ವಹಿಸಿದರು. ಬಹಳ ಸಣ್ಣ ವಯಸ್ಸಿಗೆ ವಿಚ್ಛೇಧನ ಪಡೆದುಕೊಂಡ ಕಾರಣ ಹಲವು ಪುರುಷರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸುವ ಯತ್ನ ಮಾಡಿದ್ದರು ಎಂದು ಸುನಿತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ಹಲ್ಲು ಕಚ್ಚಿಕೊಂಡು ಸಹಿಸಿಕೊಂಡು ವೃತ್ತಿಯನ್ನು ಮುಂದುವರೆಸಿಕೊಂಡು ಬಂದೆ'' ಎಂದಿದ್ದರು.

ಕನ್ನಡದ ಹಲವು ಸಿನಿಮಾಗಳಲ್ಲಿ ಗಾಯನ
ಗಾಯಕಿ ಸುನಿತಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ 1997ರಲ್ಲಿ ಬಿಡುಗಡೆ ಆದ 'ಭೂಮಿಗೀತ' ಸಿನಿಮಾದ ಮೂಲಕ ಹಾಡಲು ಆರಂಭಿಸಿ ಆ ನಂತರ ದರ್ಶನ್ ನಟನೆಯ 'ಅಭಯ್', ಶಿವಣ್ಣನ 'ಚೆಲುವೆಯೇ ನಿನ್ನ ನೋಡಲು', ಪುನೀತ್ ನಟನೆಯ 'ಹುಡುಗ್ರು', ಯಶ್ ನಟನೆಯ 'ಮೊದಲಾ ಸಲ', 'ಡ್ರಾಮಾ', 'ಸಂತೂ ಸ್ಟ್ರೈಟ್ ಫಾರ್ವರ್ಡ್', ಉಪೇಂದ್ರ ನಟನೆಯ 'ಕಠಾರಿ ವೀರ ಸುರಸುಂದರಾಂಗಿ' ಸಿನಿಮಾಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ.


Click it and Unblock the Notifications











