ಗಾಯಕಿ ಸುಶ್ಮಿತಾ ಆತ್ಮಹತ್ಯೆ: ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು.!
ಪತಿಯ ಕುಟುಂಬದವರು ನೀಡುತ್ತಿದ್ದ ಕಿರುಕುಳದಿಂದ ಬೇಸೆತ್ತು ಹಿನ್ನಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ ನಡೆದಿದೆ. ಬೆಂಗಳೂರಿನ ಮಾಳಗಾಳದಲ್ಲಿರುವ ತವರು ಮನೆಯಲ್ಲಿ ಗಾಯಕಿ ಸುಶ್ಮಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿದ್ದರೂ, ಗಾಯಕಿ ಸುಶ್ಮಿತಾ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಸುಶ್ಮಿತಾ ಕಣ್ಣುಗಳನ್ನು ಪೋಷಕರು ದಾನ ಮಾಡಿದ್ದಾರೆ. ಆ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Recommended Video

ಸಾವಿಗೆ ಪತಿಯ ಕುಟುಂಬದವರು ಕಾರಣ.!
26 ವರ್ಷ ಗಾಯಕಿ ಸುಶ್ಮಿತಾ, ತಮ್ಮ ಸಾವಿಗೆ ಪತಿ ಶರತ್ ಕುಟುಂಬದವರೇ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿಗೆ ವಾಟ್ಸ್ ಆಪ್ ಮೂಲಕ ಕಳುಹಿಸಿದ್ದ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸುಶ್ಮಿತಾ ತಾಯಿ ಏನಂತಾರೆ.?
''ನಾನು ಕೂಲಿ ಮಾಡಿ ಮಗಳನ್ನು ಸಾಕಿದ್ದೇನೆ. ಕಷ್ಟ ಪಟ್ಟು 150 ಗ್ರಾಂ ಚಿನ್ನ ಕೊಟ್ಟು ಮದುವೆ ಮಾಡಿದ್ದೆ. ಆದ್ರೆ, ಆ ಚಿನ್ನವನ್ನು ಮಾರಿ ತನ್ನ ಹೆಸರಿನಲ್ಲಿ ಶರತ್ ಮನೆ ಖರೀದಿಸಿದ್ದಾನೆ. ಬಳಿಕ ಮನೆಯಿಂದ ಹೊರಗೆ ಹೋಗುವಂತೆ ನನ್ನ ಮಗಳನ್ನು ಪೀಡಿಸಿದ್ದಾನೆ. ಕಿರುಕುಳ ತಾಳಲಾರದೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ'' ಎಂದು ಸುಶ್ಮಿತಾ ತಾಯಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಎರಡು ಕುಟುಂಬಗಳ ನಡುವೆ ಗಲಾಟೆ
ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸುಶ್ಮಿತಾ ಕುಟುಂಬ ಮತ್ತು ಪತಿ ಶರತ್ ಕುಟುಂಬದ ನಡುವೆ ವಿಕ್ಟೋರಿಯಾ ಆಸ್ಪತ್ರೆಯ ಮುಂಭಾಗದಲ್ಲಿ ಗಲಾಟೆ ನಡೆದಿದೆ. ಸುಶ್ಮಿತಾ ಆತ್ಮಹತ್ಯೆಗೆ ಶರತ್ ಕುಟುಂಬ ಕಾರಣ ಅಂತ ಆಕೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದ ವೇಳೆ ಗಲಾಟೆ ಆಗಿದೆ.

ಹಿನ್ನಲೆ ಗಾಯಕಿ ಸುಶ್ಮಿತಾ
26 ವರ್ಷದ ಸುಶ್ಮಿತಾ ಇನ್ನೂ ಯುವ ಗಾಯಕಿ. ಸುಗಮ ಸಂಗೀತ ಗಾಯಕಿಯಾಗಿ, ಚಲನಚಿತ್ರ, ಧಾರಾವಾಹಿಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸುಶ್ಮಿತಾ ಗುರುತಿಸಿಕೊಂಡಿದ್ದರು. 'ಹಾಲು ತುಪ್ಪ', 'ಶ್ರೀ ಸಾಮಾನ್ಯ' ಮುಂತಾದ ಚಿತ್ರಗಳ ಹಾಡುಗಳಿಗೆ ಸುಶ್ಮಿತಾ ದನಿಯಾಗಿದ್ದರು.


Click it and Unblock the Notifications











