ಹಣೆಯ ಮೇಲೆ ಗಾಯ! ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ
ಖ್ಯಾತ ಗಾಯಕಿ ವಾಣಿ ಜಯರಾಂ ಇಂದು (ಜನವರಿ 04) ತಮಿಳುನಾಡಿನ ಚೆನ್ನೈನ ನುಂಗಂಬಾಕ್ಕಂನಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಆದರೆ ಪೊಲೀಸರು ವಾಣೀ ಜಯರಾಂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪತಿಯಿಂದ ದೂರಾಗಿ ಒಬ್ಬರೇ ಡೌನ್‌ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ವಾಣಿ ಜಯರಾಂ ವಾಸಿಸುತ್ತಿದ್ದರು. ಎಂದಿನಂತೆ ಇಂದು ಅವರ ಮನೆಯ ಕೆಲಸದವರು ಮನೆಗೆ ಬಂದು ಹಲವು ಬಾರಿ ಕಾಲಿಂಗ್ ಬೆಲ್ ಒತ್ತಿದರೂ ಸಹ ಯಾರೂ ಬಾಗಿಲು ತೆಗೆದಿಲ್ಲ. ಹಾಗಾಗಿ ವಾಣಿ ಜಯರಾಂ ಅವರ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.
ಸಂಬಂಧಿಕರು ಬಂದು ಬಾಗಿಲು ಒಡೆದಾಗ ಗಾಯಕಿಯು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಾಣಿ ಜಯರಾಂ ಶವದ ಸುತ್ತ ರಕ್ತ ಹರಿದಿದ್ದಾಗಿಯೂ ಸಹ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದ್ದು, ವಾಣಿ ಜಯರಾಂ ಅವರ ಸಾವನ್ನು ಅನುಮಾನಸ್ಪದ ಎಂದು ದಾಖಲಿಸಿಕೊಂಡಿದ್ದಾರೆ.

ವಾಣಿ ಜಯರಾಂ ಅವರ ಹಣೆಯ ಮೇಲೆ ಗಾಯವೊಂದು ಆಗಿದ್ದು, ಇದು ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ ಉಂಟಾಗುವಂತೆ ಮಾಡಿದೆ.
ಪತಿಯಿಂದ ದೂರಾಗಿದ್ದ ವಾಣಿ ಜಯರಾಂ ಅವರಿಗೆ ಮಕ್ಕಳು ಸಹ ಇರಲಿಲ್ಲ. ಒಬ್ಬರೇ ಇದ್ದ ಅವರನ್ನು ಹಣಕ್ಕಾಗಿ ಏನಾದರೂ ಕೊಲ್ಲಲಾಗಿದೆಯೇ? ಎಂಬ ಅನುಮಾನ ಸಹ ಇದ್ದು, ಥೌಸಂಡ್ಸ್ ಲೈಟ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಣಿ ಜಯರಾಂ ಅವರು 19 ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅಂತೂ 1971 ರಿಂದ ತೀರ ಇತ್ತೀಚಿನ ವರೆಗೂ ಹಲವು ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಹಲವು ನಟಿಯರಿಗೆ ವಾಣಿ ಜಯರಾಂ ಧ್ವನಿ ನೀಡಿದ್ದಾರೆ. ಎಸ್‌ಪಿ ಬಾಸುಬ್ರಹ್ಮಣ್ಯಂ, ಡಾ ರಾಜ್‌ಕುಮಾರ್ ಸೇರಿದಂತೆ ಹಲವರೊಟ್ಟಿಗೆ ವಾಣಿ ಜಯರಾಂ ಹಾಡು ಹಾಡಿದ್ದಾರೆ.


Click it and Unblock the Notifications











