'ಸಿರಿವೆನ್ನೆಲ'ದೊಂದಿಗೆ ಆರಂಭಿಸಿ 'ಸಿರಿವೆನ್ನೆಲ'ಹಾಡಿನೊಂದಿಗೆ ಸಿನಿಜೀವನ ಮುಗಿಸಿದ ಸಿರಿವೆನ್ನೆಲ
ಅದು 1986ರ ಸಮಯ...
ತೆಲುಗು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ತಮ್ಮ ಮುಂದಿನ ಚಿತ್ರ 'ಸಿರಿವೆನ್ನೆಲ' (ಬೆಳದಿಂಗಳು) ಚಿತ್ರದ ಸ್ಕ್ರಿಪ್ಟ್ ವರ್ಕ್‌ನಲ್ಲಿ ಕೂತಿರುತ್ತಾರೆ. ಅದೊಂದು ದಿನ ಕೆಲಸದ ಮಧ್ಯೆ ತೆಲುಗಿನ ವಾರಪತ್ರಿಕೆಯೊಂದರ ಮೇಲೆ ಕಣ್ಣಾಡಿಸುತ್ತಾರೆ. ಅದರಲ್ಲಿ ಶಿವತಾಂಡವದ ಬಗ್ಗೆ ಅದ್ಭುತವಾದ ಕಾವ್ಯವೊಂದು ಅವರ ಕಣ್ಣಿಗೆ ಬೀಳುತ್ತದೆ. ಅದನ್ನು ಓದಿದ ವಿಶ್ವನಾಥ್ ಅವರಿಗೆ ಆ ಕವಿತೆ ರೋಮಾಂಚನಗೊಳಿಸುತ್ತದೆ. ಇದನ್ನು ಬರೆದಂಥ ಮಹಾಶಯರು ಯಾರು ಅಂತ ಕೆಳಗೆ ಕಣ್ಣಿಟ್ಟು ನೋಡಿದಾಗ ಅಲ್ಲಿ ಸೀತಾರಾಮಶಾಸ್ತ್ರಿ ಎಂಬ ಹೆಸರು ಕಾಣುತ್ತದೆ. ಈ ಕವಿಪುಂಗವನ ಕೈಯಲ್ಲಿ ತನ್ನ ಮುಂದಿನ ಚಿತ್ರದಲ್ಲಿ ಶಿವಗೀತೆ ಬರೆಸುವ ಇಚ್ಛೆ ಅವರದಾಗುತ್ತದೆ. ಸಂಪಾದಕರಿಗೆ ಕರೆಮಾಡಿ ಸೀತಾರಾಮ ಶಾಸ್ತ್ರಿ ಅವರ ವಿಳಾಸ ಮತ್ತು ದೂರವಾಣಿ ಯನ್ನು ಪತ್ತೆ ಮಾಡುತ್ತಾರೆ. ಆ ನಂತರ ಸೀತಾರಾಮಶಾಸ್ತ್ರಿ ಅವರಿಗೆ ಕರೆ ಮಾಡಿದ ವಿಶ್ವನಾಥ್ ಅವರು ತಮ್ಮ ಮುಂದಿನ ಚಿತ್ರದ ಒಂದು ಹಾಡು ಬರೆಯುವಂತೆ ಕೇಳಿಕೊಳ್ಳುತ್ತಾರೆ ಮತ್ತು ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸುತ್ತಾರೆ.

ಆಶ್ಚರ್ಯದಿಂದ ಅಡಿಯಿಂದ ಮುಡಿಯವರೆಗೂ ನೋಡಿದ ಕೆ. ವಿಶ್ವನಾಥ್
ಕೆ. ವಿಶ್ವನಾಥ್ ಅವರ ಆಹ್ವಾನದ ಮೇರೆಗೆ ಚೆನ್ನೈನಲ್ಲಿದ್ದ ಅವರ ಕಚೇರಿಗೆ ಸೀತಾರಾಮಶಾಸ್ತ್ರಿ ಅವರು ಹೋಗುತ್ತಾರೆ. ಸೀತಾರಾಮಶಾಸ್ತ್ರಿ ಎಂಬ ಮಹಾಪಂಡಿತ ನಮ್ಮ ಕಚೇರಿಗೆ ಬರುತ್ತಾರೆ ಅಂತ ಕಾತರದಿಂದ ಎದುರು ನೋಡುತ್ತಿದ್ದರು ಕೆ. ವಿಶ್ವನಾಥ್. ಅವರ ಎದುರಿಗೆ ಕವಿ ಮತ್ತು ಪಂಡಿತ ಸೀತಾರಾಮಶಾಸ್ತ್ರಿ ನಿಂತಿದ್ದರು ಆದರೆ ಅವರನ್ನು ನೋಡಿದ ಕೆ. ವಿಶ್ವನಾಥ್ ಅವರಿಗೆ ಆಶ್ಚರ್ಯ ಕಾದಿತ್ತು. ಹೆಸರು ಸೀತಾರಾಮಶಾಸ್ತ್ರಿ, ಬರೆದದ್ದು ಮಹಾಕಾವ್ಯ ಖಂಡದ ಒಂದು ಶಿವತಾಂಡವ ನೃತ್ಯದ ವರ್ಣನೆ. ಆದರೆ ಎದುರಿಗೆ ನಿಂತಿದ್ದ ವ್ಯಕ್ತಿಗೆ ಸರಿಸುಮಾರು 30 ವಯಸ್ಸು! ಹೀಗಾಗಿ ಅಡಿಯಿಂದ ಮುಡಿಯವರೆಗೂ ನೋಡಿ "ನೀವೇನಾ ಸೀತಾರಾಮಶಾಸ್ತ್ರಿಗಳು..."ಅಂತ ಕೇಳುತ್ತಾರೆ ವಿಶ್ವನಾಥ್.
"ಹೌದು ನಾನೇ ಸೀತಾರಾಮಶಾಸ್ತ್ರಿ ಇಂಗ್ಲಿಷ್ ಲಿಟರೇಚರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಆಲ್ ಇಂಡಿಯಾ ರೇಡಿಯೋ ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದೇನೆ" ಅಂತ ಉತ್ತರ ಕೊಡುತ್ತಾರೆ. ಆನಂತರ ಕವಿ ಸತ್ಕಾರ ನಡೆಸಿದ ವಿಶ್ವನಾಥ್ ಅವರು ಕಥೆಯ ಹಿನ್ನೆಲೆಯನ್ನು ಹೇಳಿ "ನಿಮ್ಮ ಇಷ್ಟದಂತೆ ಅದು ಎಷ್ಟೇ ಕಠಿಣವಾದ ಸಾಹಿತ್ಯಕ ಶಬ್ದಗಳಿದ್ದರೂ ಪರವಾಗಿಲ್ಲ ನೀವು ಕವಿತೆಯನ್ನು ಬರೆದು ಕೊಡಿ, ಅದನ್ನು ಕಾವ್ಯಾತ್ಮಕವಾಗಿ ಸಿನಿಮಾಗೆ ಅಳವಡಿಸಿಕೊಳ್ಳುವ ಜವಾಬ್ದಾರಿ ನನ್ನದು ಮತ್ತು ನಮ್ಮ ಚಿತ್ರದ ಸಂಗೀತ ನಿರ್ದೇಶಕರಾದ ಕೆ. ಮಹದೇವನ್ ಅವರದು" ಅಂತ ಭರವಸೆ ಮತ್ತು ಮುಕ್ತವಾದ ಸ್ವಾತಂತ್ರವನ್ನು ಕವಿತೆ ಬರೆಯಲು ಶಾಸ್ತ್ರಿಗಳಿಗೆ ವಿಶ್ವನಾಥ್ ಅವರು ಕೊಡುತ್ತಾರೆ.

ಸೀತಾರಾಮಶಾಸ್ತ್ರಿಗಳು 'ಸಿರಿವೆನ್ನೆಲ' ಆದ ಕಥೆ
'ಸಿರಿವೆನ್ನೆಲ' ಚಿತ್ರದೊಂದಿಗೆ ಸಿನಿಮಾ ಸಾಹಿತ್ಯರಂಗದಲ್ಲಿ ಸೀತಾರಾಮಶಾಸ್ತ್ರಿಗಳ ಮೊದಲ ಪಯಣ ಆರಂಭವಾಗುತ್ತದೆ. ಅದರಲ್ಲೂ ಅವರು ಬರೆದ ಮೊದಲನೆಯ ಹಾಡು ಓಂಕಾರದ ಪ್ರಣವ ನಾದ ಹುಟ್ಟಿನಿಂದ ಮೊದಲುಗೊಂಡು ಸೃಷ್ಟಿಯ ಎಲ್ಲ ರಹಸ್ಯಗಳ ಅನಾವರಣವನ್ನು ಆ ಹಾಡಿನಲ್ಲಿ ಬರೆಯುತ್ತಾರೆ. ಪದ ಸಾಹಿತ್ಯಕ್ಕೆ ತಕ್ಕಂತೆ ಸಂಗೀತದ ಬಾಣಿಯನ್ನು ಮಹದೇವನ್ ಅದ್ಭುತವಾಗಿ ನೀಡುತ್ತಾರೆ. ಇನ್ನು ಈ ಹಾಡನ್ನು ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಪಿ. ಸುಶೀಲ ತಮ್ಮ ಸುಶ್ರಾವ್ಯವಾದ ಕಂಠಸಿರಿಯಿಂದ ಇದನ್ನು ಮತ್ತಷ್ಟು ಇಂಪಾಗಿಸುತ್ತಾರೆ. ಈ ಹಾಡು ಕೆ. ವಿಶ್ವನಾಥ್ ಅವರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂದರೆ ತಮ್ಮ ಆಸ್ಥಾನ ಪಂಡಿತರಾದ ವೇಟೋರಿ ಸುಂದರ ರಾಮಮೂರ್ತಿ ಮತ್ತು ಸಿ. ನಾರಾಯಣ ರೆಡ್ಡಿ ಅವರನ್ನು ಪಕ್ಕಕ್ಕಿಟ್ಟು ಈ ಚಿತ್ರದಲ್ಲಿನ ಎಲ್ಲಾ ಹಾಡುಗಳನ್ನು ಸೀತಾರಾಮ ಶಾಸ್ತ್ರಿಗಳ ಕೈಯಲ್ಲೇ ಬರೆಸುತ್ತಾರೆ.
ಅದು ಕೂಡ ಒಂದಲ್ಲಾ, ಎರಡಲ್ಲಾ ಒಟ್ಟು ಹತ್ತು ಹಾಡುಗಳು 'ಸಿರಿವೆನ್ನೆಲ' ಚಿತ್ರದಲ್ಲಿ, ಅಷ್ಟು ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾದ ಮತ್ತು ಅದ್ಭುತವಾದದ್ದು. ಬರೆದ ಮೊದಲನೆಯ ಹಾಡಿಗೆ ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ನಂದಿ ಪುರಸ್ಕಾರ ಪಡೆದ ಸೀತಾರಾಮಶಾಸ್ತ್ರಿಗಳು ತಮ್ಮ ಹೆಸರಿಗೆ 'ಸಿರಿವೆನ್ನೆಲ' ಎಂಬ ಪದವನ್ನು ಜೋಡಿಸಿಕೊಂಡು ಇಲ್ಲಿಂದ 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿಯಾಗಿ ಲೋಕ ಪ್ರಸಿದ್ಧರಾದರು. ಅದು ಎಷ್ಟರಮಟ್ಟಿಗೆ ಎಂದರೆ, ಸೀತಾರಾಮಶಾಸ್ತ್ರಿ ಎಂಬ ಹೆಸರು ಮರೆತುಹೋಗಿ 'ಸಿರಿವೆನ್ನೆಲ' ಎಂಬ ಹೆಸರಿನಲ್ಲಿ ಅವರನ್ನು ತೆಲುಗು ಸಿನಿಮಾರಂಗ ಗುರುತಿಸುವಷ್ಟು ಜನಸಾಮಾನ್ಯರು ಇವರನ್ನು ಪ್ರೀತಿಸುವಷ್ಟು.

ವಿಧಾತ ತಲಪುನ ಪ್ರಭವಿಂಚಿನದಿ....
'ಸಿರಿವೆನ್ನೆಲ' ಚಿತ್ರಕ್ಕೆ 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ ಬರೆದ ಮೊದಲ ಹಾಡು 'ವಿಧಾತ ತಲಪುನ ಪ್ರಭವಿಂಚಿನದಿ...' ಒಂದು ಸಾಹಿತ್ಯ ಕುಸುಮವಾಗಿ ತೆಲುಗು ಚಿತ್ರರಂಗದ ಶ್ರೇಷ್ಠ ಹಾಡುಗಳಲ್ಲಿ ಒಂದಾಗಿ ಇಂದಿಗೂ ಅಜರಾಮರವಾಗಿದೆ.
ವಿಧಾತ ತಲಪುನ ಪ್ರಭವಿಂಚಿನದಿ ! ಅನಾದಿ ಜೀವನ ವೇದಂ...! ಓಂ...
ಪ್ರಾಣನಾಡುಲಕು ಸ್ಪಂದನ ನೊಸಗಿನ ! ಆದಿ ಪ್ರಣವ ನಾದಂ...! ಓಂ...
ಕನುಲ ಕೋಲನುಲೋ ಪ್ರತಿಬಿಂಬಿಂಚಿನ ! ವಿಶ್ವರೂಪ ವಿನ್ಯಾಸಮ್...!
ಎದಕನುಮಲಲೋ ಪ್ರತಿಧ್ವನಿಂಚಿನ !! ವಿರಿಂಚಿ ವಿಪಂಚಿ ಗಾನಂ...
ಸರಸಸ್ವರ ಸುರಝಾರಿಗಮನಮೌ ! ಸಾಮವೇದ ಸಾರಮಿದಿ...
ನೀಪಾಡಿನ ಜೀವನ ಗೀತಂ...! ಈ ಗೀತಂ...
ವಿರಿಂಚಿನೈ ವಿರಚಿಂಚಿತಿನಿ ! ಈ ಕವನಮ್...ವಿಪಂಚಿನೈ ವಿನಿಪಿಂಚಿತಿನಿ !! ಈ ಗೀತಂ...
ಪ್ರಾಗ್ದಿಶ ವೀಣೈಯ ಪೈನ ದಿನಕರ ಮಯೂಕಾತಂತ್ರುಲ ಪೈನ...
ಜಾಗೃತ ವಿಹಾಂಗ ತತುಲೇ ವಿನೀಲ ಗಗನಪು ವೇದಿಕ ಪೈನ...!
ಪಲಿಕಿನ ಕಿಲಕಿಲ ತ್ಯನಮುಲ ಸ್ವರಗತಿ ಜಗತಿಕಿ ಶ್ರೀಕಾರಮು ಕಾಗ...ವಿಶ್ವಕಾವ್ಯಮುನಕಿದಿ ಭಾಷ್ಯಮುಗಾ...!
ವಿರಿಂಚಿನೈ ವಿರಚಿಂಚಿತಿನಿ ! ಈ ಕವನಂ...
ವಿಪಂಚಿನೈ ವಿನಿಪಿಂಚಿತಿನಿ !! ಈ ಗೀತಂ...
ಜನಿಂಚು ಪ್ರತಿಶಿಶು ಗಳಮುನ ಪಲಿಕಿನ ! ಜೀವನನಾದ ತರಂಗಂ...
ಚೇತನ ಪೊಂದಿನ ಸ್ಪಂದನ ಧ್ವನಿಂಚು! ಹೃದಯಮೃದಂಗಧ್ಯಾನಂ...
ಅನಾದಿರಾಗಂ ಆದಿ ತಾಳಮುನ !
ಅನಂತ ಜೀವನ ವಾಹಿನಿಗಾ...
ಸಾಗಿನ ಸೃಷ್ಟಿ ವಿಲಾಸಮು ನೇ...
ವಿರಿಂಚಿನೈ ವಿರಚಿಂಚಿತಿನಿ ! ಈ ಕವನಂ...
ವಿಪಂಚಿನೈ ವಿನಿಪಿಂಚಿತಿನಿ !! ಈ ಗೀತಂ...
ನಾ ಉಚ್ವಾಸಂ ಕವನಂ !! ನಾ ನಿಶ್ವಾಸಂ ಗಾನಂ...
ಸರಸಸ್ವರ ಸುರಝಾರೀಗಮನಮೌ ! ಸಾಮವೇದ ಸಾರಮಿದಿ...
ನೀಪಾಡಿನ ಜೀವನ ಗೀತಂ...! ಈ ಗೀತಂ...

ಮೂರು ಸಾವಿರ ಹಾಡುಗಳ ಸರದಾರ
'ಸಿರಿವೆನ್ನೆಲ' ಚಿತ್ರದೊಂದಿಗೆ ಸಿನಿ ಯಾನವನ್ನು ಆರಂಭಿಸಿದ 'ಸಿರಿವೆನ್ನೆಲ'ಸೀತಾರಾಮಶಾಸ್ತ್ರಿಗಳು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕೆ.ವಿಶ್ವನಾಥ್ ಅಂತಹ ಲಲಿತಕಲಾ ಸಾಹಿತ್ಯಪ್ರೇಮಿ ನಿರ್ದೇಶಕನ ಜೊತೆಗೆ ಕೆಲಸ ಮಾಡಿದ ಸೀತಾರಾಮಶಾಸ್ತ್ರಿಗಳು ಪರಮ ನಾಸ್ತಿಕ ರಾಮ್ ಗೋಪಾಲ್ ವರ್ಮಾ ಅವರ ಆಸ್ಥಾನ ಕವಿಯೂ ಆಗಿದ್ದರು. 90 ದಶಕದಿಂದ ಹೊರಬಂದ ಎಲ್ಲ ಹೊಸ ನಿರ್ದೇಶಕರ ಪಾಲಿನ ಅಚ್ಚುಮೆಚ್ಚಿನ ಕವಿ ಸೀತಾರಾಮಶಾಸ್ತ್ರಿಗಳಾಗಿದ್ದರು. ಅತ್ಯಂತ ಕ್ಲಿಷ್ಟ ಭಾಷೆಯಲ್ಲಿ ಸಾಹಿತ್ಯವನ್ನು ಬರೆಯುತ್ತಿದ್ದರು, ಅಷ್ಟೇ ಸರಳವಾದ ಭಾಷೆಯಲ್ಲಿ ಬರೆದು ರಂಜಿಸಿದರು. ತಮ್ಮ 35 ವರ್ಷದ ಸಿನಿಪಯಣದಲ್ಲಿ ಅವರು ಬರೆದದ್ದು ಸುಮಾರು 3000 ಗೀತೆಗಳು. ವಿಶೇಷವೆಂದರೆ ಆ 3000 ಗೀತೆಗಳಲ್ಲಿ ಒಂದೇ ಒಂದು ಅಶ್ಲೀಲ ಹಾಡು ಇಲ್ಲ.

ಮೂರು ಅಂಶಗಳ ಮೇಲೆ ಹಾಡುಗಳನ್ನು ಬರೆಯುವುದಿಲ್ಲ
ಹಿಂದೆ ಒಮ್ಮೆ ಶಾಸ್ತ್ರಿಗಳು ಇನ್ನೂ ತಮ್ಮ ಸಾಹಿತ್ಯದ ಬಗ್ಗೆ ಮಾತನಾಡುತ್ತಾ"ಕವಿಯೊಬ್ಬ ಎಲ್ಲತರದ ಸಾಹಿತ್ಯವನ್ನು ಬರೆಯಲೇಬೇಕು. ಶೃಂಗಾರದಿಂದ ಕ್ರೋಧದವರೆಗೆ ಎಲ್ಲತರದ ರಸದೊಳಗೆ ಪ್ರವೇಶ ಮಾಡಬೇಕು. ಆದರೆ, ಇದರೊಳಗೆ ಒಂದು ಗೆರೆ ನಾನು ಎಳೆದುಕೊಂಡೆ ಸಾಹಿತ್ಯ ಬರೆಯುತ್ತೇನೆ. ಒಂದು: ಸಂಸ್ಕೃತಿಯ ಅವಹೇಳನ ಮಾಡುವುದಿಲ್ಲ, ಎರಡು: ಹೆಣ್ಣನ್ನು ಅಶ್ಲೀಲ ಪದಗಳಿಂದ ವರ್ಣಿಸುವುದಿಲ್ಲ, ಮೂರು: ಯುವಕರನ್ನು ದಾರಿ ತಪ್ಪಿಸುವ ಹಾಡುಗಳನ್ನು ಬರೆಯುವುದಿಲ್ಲ. ಇದು ನನ್ನ ಸ್ಪಷ್ಟ ನಿಲುವು" ಎಂದು ಹೇಳಿದ್ದರು ಮತ್ತು ಹಾಗೆ ಅವರು ಸಾಹಿತ್ಯ ರಚನೆ ಮಾಡಿದರು.

ಸಂಭಾವನೆ ಎಂದು ಕೇಳಿ ಪಡೆದಿಲ್ಲ
'ತಾವು ತೆಲುಗು ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗೀತರಚನೆಕಾರ ಅಲ್ಲವೇ?' ಎಂಬ ಪ್ರಶ್ನೆಗೆ ಉತ್ತರಿಸಿದ್ದ ಶಾಸ್ತ್ರಿಗಳು"ನಾನು ಯಾವತ್ತೂ ನನ್ನ ಹಾಡಿಗೆ ಬೆಲೆಕಟ್ಟಿ ಇಷ್ಟು ಕೊಡಿ ಅಂತ ಕೇಳಿದ್ದೆ ಇಲ್ಲ. ಪ್ರತಿ ಹಾಡು ಒಂದು ಹೆಣ್ಣು ಮಗುವಿನಂತೆ ನಾನು ಭಾವಿಸಿದ್ದೇನೆ. ಆ ಹೆಣ್ಣಿಗೆ ನೀವು ಬೆಲೆ ಕಟ್ಟಲು ಸಾಧ್ಯವೇ? ಆದರೆ ಒಬ್ಬರಿಂದ ಒಂದು ವಸ್ತು ಪಡೆಯುವಾಗ ಅದಕ್ಕೊಂದು ಬೆಲೆ ಕೊಡಬೇಕಾದದ್ದು ಅದನ್ನು ಪಡೆಯುವವರ ಧರ್ಮ. ಆ ಧರ್ಮವನ್ನು ಪಾಲಿಸಿ ಅವರು ಕೊಟ್ಟಷ್ಟು ಸಂಭಾವನೆ ಮಾತ್ರ ನಾನು ಪಡೆದಿದ್ದೇನೆ. ಕೆಲವರು ನಾನು ಕೇಳುವುದಿಲ್ಲ ಅಂತ ಹೇಳಿ ಸಂಭಾವನೆ ಕೊಟ್ಟೇ ಇಲ್ಲ, ಕೆಲವರು ನಿರೀಕ್ಷೆಗೂ ಮೀರಿದ ಸಂಭಾವನೆಗಳನ್ನು ಕೊಟ್ಟಿದ್ದು ಇದೆ. ಎರಡನ್ನೂ ಸಮಚಿತ್ತದಿಂದಲೇ ಸ್ವೀಕರಿಸಿದ್ದೇನೆ." ಅಂತ ತಮ್ಮ ಸಂಭಾವನೆಯ ಬಗ್ಗೆ ಮಾತು ಹೇಳಿದ್ದರು.

ಮೊದಲೇ ತಮ್ಮ ಸಾವನ್ನು ನಿರೀಕ್ಷಿಸಿದ್ದರೇ?
ಸಿರಿವೆನ್ನೆಲ ಸೀತಾರಾಮಶಾಸ್ತ್ರಿಗಳು ನಿಧನ ಹೊಂದುವ ಕೆಲವೇ ಕೆಲವು ದಿನಗಳ ಹಿಂದೆ 'ಶ್ಯಾಮ್ ಸಿಂಗ ರಾಯ್'' ಚಿತ್ರಕ್ಕೆ ಎರಡು ಹಾಡುಗಳನ್ನು ಬರೆದಿದ್ದಾರೆ. ನಿರ್ದೇಶಕರಿಗೆ ಹಾಡುಗಳನ್ನು ಪ್ರಸ್ತುತಪಡಿಸುವಾಗ ನಡೆದ ಘಟನೆಯನ್ನು ಚಿತ್ರತಂಡ ನೆನಪಿಸಿಕೊಂಡಿದೆ. 'ಶ್ಯಾಮ್ ಸಿಂಗ ರಾಯ್' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ನಾನಿ ನಾಯಕನಟನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. 'ಟ್ಯಾಕ್ಸಿವಾಲಾ' ಖ್ಯಾತಿಯ ರಾಹುಲ್ ಸಂಕೃತ್ಯನ್ ನಿರ್ದೇಶನ ಮಾಡಿದ್ದಾರೆ. 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ ಇದರಲ್ಲಿ ಎರಡು ಹಾಡುಗಳನ್ನು ಬರೆದಿದ್ದಾರೆ.
ಈ ಹಾಡುಗಳನ್ನು ಬರೆಯುವ ಸಮಯದಲ್ಲಿ ಸಿರಿವೆನ್ನೆಲ ಅವರು ತಮ್ಮ ಸಾವನ್ನು ನಿರೀಕ್ಷಿಸಿದ್ದರು. 'ಬಹುಶಃ ಇದೇ ನನ್ನ ಕೊನೆ ಹಾಡು ಆಗಬಹುದು'' ಎಂದು ರಾಹುಲ್ ಜೊತೆ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಹೇಳಿದ್ದರಂತೆ. ಇದನ್ನು ರಾಹುಲ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ. "ಅವರು ಯಾಕೆ ಹಾಗೆ ಹೇಳಿದರು ಎಂದು ಆಗ ನನಗೆ ತಿಳಿಯಲಿಲ್ಲ. ಆದರೆ ಇಂದು ಅದು ನಿಜವಾಗಿದೆ. ಅವರು ನಮ್ಮಿಂದ ಭೌತಿಕವಾಗಿ ದೂರವಾದರೂ ಅವರ ಸಾಹಿತ್ಯದ ಮೂ

ಕೊನೆಯ ಹಾಡು ಕೂಡ 'ಸಿರಿವೆನ್ನೆಲ'
'ಸಿರಿವೆನ್ನೆಲ' ಚಿತ್ರದೊಂದಿಗೆ ಸಿನಿಯಾನ ಆರಂಭಿಸಿದ ಸೀತಾರಾಮಶಾಸ್ತ್ರಿಗಳು 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ ಗಳಾದರು. 11 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಪಡೆದುಕೊಂಡರು. ಕೇಂದ್ರ ಸರ್ಕಾರದಿಂದ 'ಪದ್ಮಶ್ರೀ' ಪುರಸ್ಕಾರ ಪಡೆದರು. ದೇಶ-ವಿದೇಶದ ನೂರಾರು ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡರು. ಇಂತಹ 'ಸಿರಿವೆನ್ನೆಲ' ತಮ್ಮ ವಿದಾಯದ ಹಾಡು ಕೂಡ 'ಸಿರಿವೆನ್ನೆಲ' ಹೆಸರಿನಲ್ಲೇ ಮಾಡಿದ್ದಾರೆ. ಹೌದು 'ಸಿರಿವೆನ್ನೆಲ' ಬರೆದ ಕೊನೆಯ ಹಾಡು ಸಿರಿವೆನ್ನೆಲ....ಇತ್ತೀಚೆಗಷ್ಟೇ ಚಿತ್ರತಂಡ ಸಿರಿವೆನ್ನೆಲ ಅವರಿಗೆ ಅರ್ಪಿಸಿ ಭಾವಪೂರ್ಣವಾದ ಆ ಹಾಡನ್ನು ಬಿಡುಗಡೆ ಮಾಡಿದೆ. ಹಾಡನ್ನು ಕೇಳಿದ ಪ್ರತಿಯೊಬ್ಬರು ಕೂಡ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಿರಿವೆನ್ನೆಲ ಅವರಿಗೆ ಅರ್ಪಿಸುತ್ತಿದ್ದಾರೆ.
ಸಿರಿವೆನ್ನೆಲ ಬರೆದ ಕೊನೆಯ ಹಾಡು
"ನೆಲರಾಜುನೀ...ಇಲರಾಣಿನೀ ಕಲಿಪಿಂದಿ ಕದಾ ಸಿರಿವೆನ್ನೆಲ..."


Click it and Unblock the Notifications