ನಾನು ಮೈದಾನಕ್ಕೆ ಎಂಟ್ರಿ ಕೊಡುವಾಗ ಈ ಕನ್ನಡ ಹಾಡು ಹಾಕ್ಬೇಕು; ಸ್ಮೃತಿ ಮಂಧಾನ
ಮಹಿಳಾ ಕ್ರಿಕೆಟ್ ಲೋಕದ ಸೆನ್ಸೇಷನ್ ಸ್ಮೃತಿ ಮಂಧಾನ. ಪಡ್ಡೆ ಹುಡುಗರ ನಿದ್ದೆ ಕದ್ದು ನ್ಯಾಷನಲ್ ಕ್ರಶ್ ಎನಿಸಿಕೊಂಡವರು. ಈ ಮುಂಬೈ ಚೆಲುವೆ ಅಂದರೆ ಹುಡುಗರಿಗಂತೂ ಎಲ್ಲಿಲ್ಲದ ಪ್ರೀತಿ. ಇತ್ತೀಚೆಗೆ ಭಾರತ, ಶ್ರೀಲಂಕಾ ಮತ್ತು ಸೌತ್ ಆಫ್ರಿಕಾ ನಡುವಣ ತ್ರಿಕೋನ ಸರಣಿಯಲ್ಲಿ ಸ್ಮೃತಿ ಕಮಾಲ್ ಮಾಡಿದ್ದರು. ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಒಟ್ಟಯ 11 ಶತಕ ಬಾರಿಸಿರುವ ಸ್ಮೃತಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸದ್ಯ ವುಮೆನ್ಸ್ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ 2015ರಲ್ಲಿ ಆಡಲು ಆಕೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ತಮ್ಮ ನೆಚ್ಚಿನ ಗೀತೆ ಬಗ್ಗೆ ಮಾತನಾಡಿದ್ದಾರೆ.

ಕ್ರಿಕೆಟ್ ಪಂದ್ಯ ನಡೆಯುವಾಗ ಕ್ರೀಡಾಂಗಣಗಳಲ್ಲಿ ಜನಪ್ರಿಯ ಹಾಡುಗಳನ್ನು ಹಾಕಲಾಗುತ್ತದೆ. ನೀವು ಮೈದಾನಕ್ಕೆ ಇಳಿಯುವಾಗ ಯಾವ ಹಾಡು ಕೇಳಲು ಬಯಸುತ್ತೀರಾ? ಎನ್ನುವ ಪ್ರಶ್ನೆಗೆ ಸ್ಮೃತಿ ಮಂಧಾನ ಕನ್ನಡದ ಸೂಪರ್ ಹಿಟ್ ಹಾಡನ್ನು ಹೆಸರಿಸಿದ್ದಾರೆ. ಸದ್ಯ ಆಕೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಕೆಪಿಎಲ್ ರೀತಿ ಮಹಾರಾಷ್ಟ್ರದ 8 ಮಹಿಳಾ ಕ್ರಿಕೆಟ್ ತಂಡಗಳು WMPL 2025 ಟೂರ್ನಿಯಲ್ಲಿ ಸೆಣಸಲಿವೆ. ರತ್ನಗಿರಿ ಜೆಟ್ಸ್ ತಂಡದ ನಾಯಕಿಯಾಗಿ ಸ್ಮೃತಿ ಆಡುತ್ತಿದ್ದಾರೆ.
ಇಂದಿನ(ಜೂನ್ 9) ಪಂದ್ಯದಲ್ಲಿ ರತ್ನಗಿರಿ ಜೆಟ್ಸ್ ತಂಡ ಸೊಲ್ಲಪುರ್ ಸ್ಮ್ಯಾಶಸ್ ತಂಡವನ್ನು ಎದುರಿಸುತ್ತಿದೆ. ಪಂದ್ಯಕ್ಕಾಗಿ ತಾಲೀಮು ನಡೆಸುವ ವೇಳೆ ಸಂದರ್ಶನದಲ್ಲಿ ಸ್ಮೃತಿ ಭಾಗಿ ಆಗಿದ್ದರು. ಈ ವೇಳೆ ರ್ಯಾಪಿಡ್ ಫೈಯರ್ ರೌಂಡ್ ಕೂಡ ನಡೆಯಿತು. ಇದರಲ್ಲಿ ಸಾಕಷ್ಟು ವಿಚಾರಗಳನ್ನು ಆಕೆ ಮಾತನಾಡಿದ್ದಾರೆ. ಕ್ರಿಕೆಟರ್ ಆಗದೇ ಇದ್ದಿದ್ದರೆ ಏನಾಗುತ್ತಿದ್ದಿರಿ ಎನ್ನುವ ಪ್ರಶ್ನೆಗೆ ಶೆಫ್ ಎಂದು ಉತ್ತರಿಸಿದ್ದಾರೆ.
ನೀವು ಪ್ರತಿ ಬಾರಿ ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವಾಗ ಯಾವ ಹಾಡು ಪ್ಲೇ ಮಾಡಬೇಕು ಎಂದು ಬಯಸುತ್ತೀರಾ? ಎನ್ನುವ ಪ್ರಶ್ನೆಗೆ ಸ್ಮೃತಿ ಮಂಧಾನ "ಕನ್ನಡದ 'KGF' ಚಿತ್ರದ 'ತೂಫಾನ್' ಹಾಡು ಹಾಕಬೇಕು. ಇತ್ತೀಚೆಗೆ ನಾನು ಇನ್‌ಸ್ಟಾಗ್ರಾಮ್ ಸ್ಟೋರಿಯೊಂದಕ್ಕೆ ಈ ಹಾಡನ್ನು ಹಾಕಿದ್ದೆ. ಆ ಹಾಡು ನನಗೆ ಬಹಳ ಹತ್ತಿರ ಎನಿಸುತ್ತೆ. ನಾನು ಕೆಲವೊಮ್ಮೆ ಸೈಲೆಂಟ್, ಬಟ್.. ಹಾಗಾಗಿ ಆ ಹಾಡು ಚೆನ್ನಾಗಿರುತ್ತದೆ" ಎಂದಿದ್ದಾರೆ. ಮುಂದಿನ ಪಂದ್ಯದಲ್ಲಿ ನೀವು ಎಂಟ್ರಿ ಕೊಟ್ಟಾಗ ಈ ಹಾಡು ಪ್ಲೇ ಆಗುತ್ತದೆ ಎಂದು ನಿರೂಪಕಿ ಹೇಳಿದ್ದಾರೆ. ಸದ್ಯ ಈ ವೀಡಿಯೋವನ್ನು ಯಶ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ವಡಾ ಪಾವ್ ಅಥವಾ ಮಿಸೆಲ್ ಪಾವ್ ಯಾವುದು ಇಷ್ಟ? ಎಂದಿದ್ದಕ್ಕೆ ವಡಾ ಪಾವ್ ಎಂದು ಉತ್ತರ ಕೊಟ್ಟಿದ್ದಾರೆ. ಐಡಿಯಲ್ ಡೇಟ್ ಸೇರಿದಂತೆ ಕೆಲ ರ್ಯಾಪಿಡ್ ಫೈಯರ್ ಪ್ರಶ್ನೆಗಳಿಗೆ ಸ್ಮೃತಿ ತಮ್ಮ ಆಯ್ಕೆ ಹೇಳಿದ್ದಾರೆ. 'KGF'- ಚಾಪ್ಟರ್-2 ಚಿತ್ರದ 'ತೂಫಾನ್' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದು ಸದ್ದು ಮಾಡಿತ್ತು.
ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ವರ್ಷಾ ಆಚಾರ್ಯ ಹಾಡಿಗೆ ದನಿಯಾಗಿದ್ದಾರೆ. ಸ್ವತಃ ಸಂಗೀತ ನಿರ್ದೇಶಕ ರವಿ ಬಸ್ರೂರು ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದರು. 3 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'KGF'- ಚಾಪ್ಟರ್-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು.


Click it and Unblock the Notifications











