"ಸೋನು ಕ್ಷಮೆ ಕೇಳಿದ್ರು ಆತನ ಹಾಡು ನಮ್ಮ ಚಿತ್ರಕ್ಕೆ ಬೇಡ"- ರಾಮ್ ನಾರಾಯಣ್
ಬಾಲಿವುಡ್ ಗಾಯಕ ಸೋನು ನಿಗಮ್ ಇತ್ತೀಚೆಗೆ ವಿವಾದ ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದರು. ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಸೋನು ನಿಗಮ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಕ್ಷಮೆ ಕೇಳಿ ವಿವಾದಕ್ಕೆ ಸೋನು ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಇನ್ನು ಮುಂದೆ ಯಾವುದೇ ಕನ್ನಡ ಸಿನಿಮಾದಲ್ಲಿ ಹಾಡಲು ಅವಕಾಶ ಕೊಡದಿರಲು ಚಿತ್ರರಂಗ ತೀರ್ಮಾನಿಸಿತ್ತು. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ನಾವು ಬಿಡಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಸೋನು ನಿಗಮ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆರಂಭದಲ್ಲಿ ತಮ್ಮ ಹೇಳಿಕೆಗೆ ಸಮಜಾಯಿಷಿ ಕೊಡಲು ಮುಂದಾಗಿದ್ದರು. ಪಟ್ಟು ಸಡಲಿಸದೇ ಇದ್ದಾಗ ಸೋನು ಕ್ಷಮೆ ಕೇಳಿದ್ದರು.

ಕನ್ನಡದ 'ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿ ಸೋನು ನಿಗಮ್ 'ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ' ಎಂಬ ಹಾಡನ್ನು ಹಾಡಿದ್ದರು. ವಿವಾದ ಭುಗಿಲೇಳುತ್ತಿದ್ದಂತೆ ಚಿತ್ರದಿಂದ ಅವರ ಹಾಡನ್ನು ಕೈಬಿಡಲಾಗಿತ್ತು. ಕನ್ನಡದ ಬಗ್ಗೆ ಹೀಗೆ ಮಾತನಾಡುವ ಗಾಯಕನ ಹಾಡು ನಮಗೆ ಬೇಡ ಎಂದು ಚಿತ್ರತಂಡ ನಿರ್ಧರಿಸಿತ್ತು. ಆ ಹಾಡು ತೆಗೆದು ಕನ್ನಡ ಗಾಯಕ ಚೇತನ್ ಸೊಸ್ಕಾ ಅವರಿಂದ ಆ ಹಾಡನ್ನು ಹಾಡಿಸಿ ಬಳಸಿಕೊಳ್ಳಲಾಗಿತ್ತು.
ಈಗಾಗಲೇ ಸೋನು ನಿಗಮ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಗುತ್ತಾ? ಇಲ್ವಾ? ಎನ್ನುವ ಚರ್ಚೆ ನಡೀತಿದೆ. 'ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿ ಸೋನು ಹಾಡಿದ್ದ ಹಾಡನ್ನು ತೆಗೆದು ಹಾಕಲಾಗಿತ್ತು. ಕ್ಷಮೆ ಕೇಳಿದರೂ ಮತ್ತೆ ಆ ಹಾಡನ್ನು ಬಳಸಿಕೊಳ್ಳುವುದಿಲ್ಲ ಎಂದು ನಿರ್ದೇಶಕ ರಾಮ್ ನಾರಾಯಣ್ ಇತ್ತೀಚೆಗೆ ಹೇಳಿದ್ದರು.

ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ 'ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮೇ 23ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೋನು ನಿಗಮ್ ಕ್ಷಮೆ ಕೇಳಿದರೂ ಆತನ ಹಾಡನ್ನು ನಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಲ್ಲ ಎಂದು ರಾಮ್ ನಾರಾಯಣ್ ಪುನರುಚ್ಚರಿಸಿದ್ದಾರೆ. ಫಿಲ್ಮ್ ಬೀಟ್ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಸೋನು ನಿಗಮ್ ಕ್ಷಮೆ ಕೇಳಿರುವುದು, ಕ್ಷಮೆ ಕೇಳಿದಂತೆ ಇಲ್ಲ. ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಷ್ಟಕ್ಕೂ ಆತನ ಹಾಡು ನಮ್ಮ ಚಿತ್ರಕ್ಕೆ ಬೇಕಿಲ್ಲ. ಅದಕ್ಕಿಂತ ಕನ್ನಡ ಗಾಯಕ ಚೇತನ್ ಸೊಸ್ಕಾ ಚೆನ್ನಾಗಿ ಹಾಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಸೋನಲ್ ಮಾಂಟೆರೊ, ಶರತ್ ಲೋಹಿತಾಶ್ವ, ತಬಲಾ ನಾನಿ, ಕರಿ ಸಾಭು, ಹರೀಶ್ ರಾಜ್ ಕೂಡ 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ತಾರಾಗಣದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಇಸ್ಲಾ ಉದ್ದೀನ್ ಚಿತ್ರಕ್ಕೆ ಕಥೆ ಬರೆದಿದ್ದು ರಾಮ್ ನಾರಾಯಣ್ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.
ಎರಡ್ಮೂರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದ ಮಡೆನೂರು ಮನು ಅವರಿಗೆ ಹೀರೊ ಆಗಿ ಇದು ಚೊಚ್ಚಲ ಸಿನಿಮಾ. 'ರಾಮಾಚಾರಿ' ಧಾರಾವಾಹಿ ಮೂಲಕ ಗಮನ ಸೆಳೆದ ಮೌನ ಗುಡ್ಡೆಮನೆ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಹಾಸ್ಯದ ಜೊತೆಗೆ ಮಾಸ್ ಹಾಗೂ ಎಮೋಷನ್ ಅಂಶಗಳು ಚಿತ್ರದಲ್ಲಿದೆ.
ಪರ್ಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಹಾಗೂ ವಿದ್ಯಾ 'ಕುಲದಲ್ಲಿ ಕೀಳ್ಯಾವುದೋ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿ ಆಗಿದ್ದರು. ಈ ವೇಳೆ ಕನ್ನಡ ಹಾಡು ಹಾಡುವಂತೆ ಕೆಲವರು ಕೂಗಿ ಕೇಳಿದ್ದರು. ಆದರೆ ಸೋನು ನಿಗಮ್ ನೀವು ಹೀಗೆ ಮಾಡುವುದಕ್ಕೆ ಪಹಲ್ಗಾಮ್ ಘಟನೆ ನಡೆದಿದ್ದು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದೇ ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಹಾಡು ಕೇಳುವುದಕ್ಕೂ ಪಹಲ್ಗಾಮ್ ಉಗ್ರರ ದಾಳಿಗೂ ಏನು ಸಂಬಂಧ ಎಂದು ಕೆಲವರು ಅಸಮಾಧಾನ ವ್ಯಕ್ತವಾಗಿತ್ತು.


Click it and Unblock the Notifications











