For Quick Alerts
  ALLOW NOTIFICATIONS  
  For Daily Alerts

  ಕನ್ನಡ ಮತ್ತು ಕನ್ನಡಿಗರ ಬಗ್ಗೆ ಸೋನು ನಿಗಮ್ ಮಧುರ ಮಾತು

  |

  ಕಲಾ ಪ್ರೇಮ, ಕಲಾವಿದರ ಆರಾಧನೆ ಕನ್ನಡಿಗರ ರಕ್ತಕ್ಕಂಟಿರುವ ಗುಣ. ಇತರೆ ರಾಜ್ಯಗಳಲ್ಲಿ ಸ್ಟಾರ್ ನಟರನ್ನು ಮಾತ್ರವೇ ಆರಾಧಿಸಿದರೆ ನಮ್ಮಲ್ಲಿ ಸಾಹಿತಿಗಳು, ಹಾಡುಗಾರರು, ನಾಟಕಕಾರರು, ಜನಪದೀಯರು ಎಲ್ಲರನ್ನೂ ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. ಗಾಯಕರಿಗಂತೂ ಕರ್ನಾಟಕದಲ್ಲಿ ಸಿಗುವಷ್ಟು ಪ್ರೀತಿ-ಗೌರವ ಭಾರತದ ಬೇರೆ ರಾಜ್ಯಗಳಲ್ಲಿ ಸಿಕ್ಕಿದ್ದು ಕಡಿಮೆಯೇ.

  ಇದೇ ಕಾರಣಕ್ಕೆ ದಿಗ್ಗಜ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮೂಲತಃ ತಮಿಳುನಾಡಿಗರಾದರೂ 'ನಾನು ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿಯೇ ಹುಟ್ಟಿ ಇಲ್ಲಿನ ಜನರ ಋಣತೀರಿಸುತ್ತೇನೆ' ಎಂದಿದ್ದು. ಇದೇ ಸಾಲಿಗೆ ಈಗ ಖ್ಯಾತ ಗಾಯಕ ಸೋನು ನಿಗಮ್ ಸಹ ಸೇರಿದ್ದಾರೆ.

  ಸೋನು ನಿಗಮ್ ಸಹ ನೂರಾರು ಸುಮಧುರ ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಹಿಂದಿ ಭಾಷಿಕರಾದರು ಕನ್ನಡ ಸಂಗೀತ ಪ್ರೇಮಿಗಳಿಗೆ ಚಿರ-ಪರಿಚಿತ ಧ್ವನಿ ಸೋನು ನಿಗಮ್ ಅವರದ್ದು. ಇತ್ತೀಚೆಗೆ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಸೋನು ನಿಗಮ್, ಕನ್ನಡ ಹಾಗೂ ಕನ್ನಡಿಗರ ಬಗೆಗಿನ ತಮ್ಮ ಪ್ರೇಮವನ್ನು ಮತ್ತೊಮ್ಮೆ ಸಾದರಪಡಿಸಿದರು.

  ಸೋನು ನಿಗಮ್ ಕಾರ್ಯಕ್ರಮಕ್ಕೆ ಕಿಕ್ಕಿರಿದ ಜನ

  ಸೋನು ನಿಗಮ್ ಕಾರ್ಯಕ್ರಮಕ್ಕೆ ಕಿಕ್ಕಿರಿದ ಜನ

  ಸೋಮವಾರ ರಾತ್ರಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಸೋನು ನಿಗಮ್ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕೆ ಮುಂಚೆ ಜನಪದ ಗಾಯನ, ಕುಣಿತಗಳು ನಡೆದವು. ಜನಪದ ಗಾಯನದ ನಂತರ ನಡೆದ ರಾಜಕಾರಣಿಗಳ ಭಾಷಣ ಕಾರ್ಯಕ್ರಮದಲ್ಲಿ ಬಹುತೇಕ ಕುರ್ಚಿಗಳು ಖಾಲಿಯಾಗಿಯೇ ಇದ್ದವು. ಆದರೆ ನಿಗದಿತ ಸಮಯಕ್ಕಿಂತಲೂ ಒಂದು ಗಂಟೆ ತಡವಾಗಿ ಸೋನು ನಿಗಮ್ ಕಾರ್ಯಕ್ರಮ ಆರಂಭವಾಯಿತಾದರೂ, ಸೋನು ನಿಗಮ್ ಒಂದೆರಡು ಹಾಡು ಹಾಡುತ್ತಿದ್ದಂತೆ ಖಾಲಿ ಕುರ್ಚಿಗಳೆಲ್ಲ ತುಂಬಿಬಿಟ್ಟವು.

  10 ಗಂಟೆ ಬಳಿಕವೂ ಆಗಮಿಸುತ್ತಿದ್ದ ಜನರು

  10 ಗಂಟೆ ಬಳಿಕವೂ ಆಗಮಿಸುತ್ತಿದ್ದ ಜನರು

  ಮೊದಲಿಗೆ ಎರಡು ಹಿಂದಿ ಹಾಡುಗಳನ್ನು ಹಾಡಿದ ಸೋನು ನಿಗಮ್ ಆ ನಂತರ ಸಾಲು-ಸಾಲಾಗಿ ಕನ್ನಡ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಸೋನು ನಿಗಮ್ ಕನ್ನಡ ಹಾಡುಗಳನ್ನು ಹಾಡಲು ಪ್ರಾರಂಭಿಸುತ್ತಿದ್ದಂತೆ ಚಿಕ್ಕಬಳ್ಳಾಪುರದ ಮನೆಗಳಲ್ಲಿ ಕೂತಿದ್ದ ಜನರೂ ಸಹ ಕಾರ್ಯಕ್ರಮದ ವೇದಿಕೆಗೆ ಧಾವಿಸಲು ಆರಂಭಿಸಿದರು. ಕನ್ನಡದಲ್ಲಿ ಹಾಡು ಹಾಡಲು ಆರಂಭಿಸಿದ ಕಾಲದಿಂದ ಇತ್ತೀಚೆಗೆ ಹಾಡಿದ ಹಾಡಿನ ವರೆಗೂ ಹಲವು ಹಾಡುಗಳನ್ನು ವೇದಿಕೆ ಮೇಲೆ ಸೋನು ನಿಗಮ್ ಹಾಡಿದರು.

  'ಹಿಂದಿಗಿಂತಲೂ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ'

  'ಹಿಂದಿಗಿಂತಲೂ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ'

  'ಮುಂಗಾರು ಮಳೆ', 'ಪರವಶನಾದೆನು', 'ಪ್ರೀತಿ ನೀನಿಲ್ಲದೆ ನಾ ಹೇಗಿರಲಿ', 'ಈ ಸಂಜೆ ಯಾಕಾಗಿದೆ', 'ಮೊಗ್ಗಿನ ಮನಸ್ಸು ಸಿನಿಮಾದ 'ಐ ಲವ್ ಯೂ', 'ಅನಿಸುತಿದೆ ಯಾಕೋ ಇಂದು', 'ಹೃದಯ ಒಂಟಿಕೊಪ್ಪಲು' ಇನ್ನೂ ಹಲವಾರು ಸೂಪರ್-ಡೂಪರ್ ಹಿಟ್ ಹಾಡುಗಳನ್ನು ಸೋನು ನಿಗಮ್ ವೇದಿಕೆ ಮೇಲೆ ಹಾಡಿದರು. ಹಾಡುತ್ತಾ ಹಾಡುತ್ತಾ ಮಾತನಾಡುತ್ತಿದ್ದ ಸೋನು ನಿಗಮ್, ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎನಿಸುತ್ತದೆ, ಅಷ್ಟು ಪ್ರೇಮ ನನಗೆ ಕನ್ನಡಿಗರಿಂದ ಸಿಕ್ಕಿದೆ ಎಂದರು. ನಾನು ಈ ವರೆಗೆ ಸಾವಿರಾರು ಹಾಡುಗಳನ್ನು ಹಾಡಿದ್ದೇನೆ, ಹಿಂದಿಯಲ್ಲಿಯೂ ಸಹಸ್ರಾರು ಹಾಡುಗಳನ್ನು ಹಾಡಿದ್ದೇನೆ. ಆದರೆ ಹೆಚ್ಚು ಒಳ್ಳೆಯ ಹಾಡುಗಳನ್ನು ಹಾಡಿರುವುದು ಕನ್ನಡದಲ್ಲಿಯೇ ಎಂದರು ಸೋನು ನಿಗಮ್.

  ಕಿಡಿಗೇಡಿಗಳಿಂದ ಅಡಚಣೆ

  ಕಿಡಿಗೇಡಿಗಳಿಂದ ಅಡಚಣೆ

  ರಾತ್ರಿ ಒಂಬತ್ತು ಗಂಟೆಗೆ ಪ್ರಾರಂಭವಾದ ಸೋನು ನಿಗಮ್‌ರ ಗಾನ ಲಹರಿ 11 ಆದರೂ ಮುಗಿದಿರಲಿಲ್ಲ. ಆದರೆ ಆ ಸಮಯದಲ್ಲಿಯೂ ಸಹ ಜನ ತಂಡೋಪತಂಡವಾಗಿ ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಸ್ಟೇಡಿಯಂಗೆ ಆಗಮಿಸುತ್ತಲೇ ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ಖಾಲಿ ಇದ್ದ ಕುರ್ಚಿಗಳೆಲ್ಲ ತುಂಬಿ ಜನರು ನಿಂತು ಸೋನು ನಿಗಮ್ ಗಾಯನ ನೋಡಿದರು. ಆದರೆ ಸೋನು ಹಾಡುವಾಗೊಮ್ಮೆ, ಯಾರೋ ಕೆಲ ಕಿಡಿಗೇಡಿಗಳು ಪೀಪಿ ಊದಿದ್ದು, ಅವರ ಗಾಯನಕ್ಕೆ ಅಡ್ಡಿಯಾಯಿತು. ಇದರಿಂದ ತುಸು ಸಿಟ್ಟಾದರಾದರೂ ಆ ಬಳಿಕ ಮಾಮೂಲಿನಂತೆ ಗಾಯನ ಮುಂದುವರೆಸಿದರು.

  English summary
  Famous singer Sonu Nigam said he sang more better songs in Kannada than Hindi. He also said he believe he was born as Kannadiga in his before life so he is getting so much affection from Kannadigas.
  Wednesday, January 11, 2023, 15:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X