ಕೆನಡಾದ ಬೀದಿಗೆ ಭಾರತದ ಸಂಗೀತ ಮಾಂತ್ರಿಕನ ಹೆಸರು!
ವಿದೇಶಗಳಲ್ಲಿ ಭಾರತದವರ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಹೆಮ್ಮೆಯ ವಿಚಾರ. ಮಹಾತ್ಮಾ ಗಾಂಧಿ, ಬಸವಣ್ಣನವರಿಂದ ಹಿಡಿದು ಹಲವು ಸಾಧಕರು ಈ ರೀತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೀಗ ಭಾರತದ ಅತ್ಯತ್ತಮ ಸಂಗೀತ ಮಾಂತ್ರಿಕರೊಬ್ಬರನ್ನು ವಿದೇಶಿಗರು ಗುರುತಿಸಿ ಗೌರವಿಸಿದ್ದಾರೆ.
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅಪರೂಪದ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ತಮ್ಮ ಸಂಗೀತದಿಂದ ಜಗತ್ತನ್ನು ಸೂರೆಗೊಳಿಸಿರುವ ಎ.ಆರ್.ರೆಹಮಾನ್ ಅವರ ಗೌರವಾರ್ಥ ಕೆನಡಾದ ರಸ್ತೆಯೊಂದಕ್ಕೆ ಅವರ ಹೆಸರು ಇಡಲಾಗಿದೆ.
ಕೆನಡಾದ ಮರಕ್ಕಮ್ ನಗರದ ಬೀದಿಯೊಂದಕ್ಕೆ ಎ.ಆರ್.ರೆಹಮಾನ್ ಹೆಸರು ಇಡಲಾಗಿದೆ. ಈ ಅಪರೂಪದ ಚಿತ್ರವನ್ನು ಮಾಹಿತಿಯೊಂದಿಗೆ ಎ.ಆರ್.ರೆಹಮಾನ್ ಹಂಚಿಕೊಂಡಿದ್ದು ಕೆನಡಾದ ಮರಕ್ಕಮ್ ನಗರ ನಿವಾಸಿಗಳಿಗೆ, ಅಲ್ಲಿನ ಮೇಯರ್‌ಗೆ ಧನ್ಯವಾದ ತಿಳಿಸಿದ್ದಾರೆ.

''ಎ.ಆರ್.ರೆಹಮಾನ್' ಎಂಬ ಹೆಸರು ನನ್ನದಲ್ಲ. ಕರುಣಾಮಯಿ ಅಥವಾ ದಯೆ ಎಂದು ಅದರರ್ಥ. ದಯೆ ಎಂಬುದು ನಮ್ಮ ಎಲ್ಲ ದೇವತೆಗಳ ಸಾಮಾನ್ಯ ಗುಣ. ಹಾಗಾಗಿ ನೀವು ಇಟ್ಟಿರುವ ಈ ಹೆಸರು ನಿಮ್ಮ ನಗರಕ್ಕೆ, ದೇಶಕ್ಕೆ ಶಾಂತಿ, ದಯೆ, ಆರೋಗ್ಯ, ಆಯಸ್ಸು, ಸಿರಿವಂತಿಕೆಯನ್ನು ತರಲಿ ಎಂದು ಆಶಿಸುತ್ತೇನೆ'' ಎಂದು ರೆಹಮಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
''ನನ್ನ ಭಾರತ ದೇಶದ ಅಣ್ಣ-ತಮ್ಮಂದಿರು, ಅಕ್ಕ ತಂಗಿಯರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು. ನನ್ನ ಜೊತೆ ಇಷ್ಟು ವರ್ಷ ಕೆಲಸ ಮಾಡಿದ ಎಲ್ಲ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿಗಳಿಗೂ ಧನ್ಯವಾದ. ಅವರೆಲ್ಲರೂ ನನಗೆ ಕಲಿಸಿದ್ದಾರೆ, ನನ್ನ ಪ್ರತಿಭೆಯೊಟ್ಟಿಗೆ ನಾನು ಎತ್ತರಕ್ಕೆ ಬೆಳೆಯಲು ಸಹಾಯ ಮಾಡಿದ್ದಾರೆ. ಸಿನಿಮಾದ ನೂರು ವರ್ಷ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ದೊಡ್ಡ ಸಮುದ್ರದಲ್ಲಿ ನಾನೊಂದು ಹನಿಯಷ್ಟೆ'' ಎಂದು ವಿನಯ ಪ್ರದರ್ಶಿಸಿದ್ದಾರೆ ಎ.ಆರ್.ರೆಹಮಾನ್.
ಈ ರೀತಿಯ ಸಂಗತಿಯನ್ನು ನನ್ನ ಜೀವಮಾನದಲ್ಲಿ ನಾನು ಎಣಿಸಿರಲಿಲ್ಲ. ನಾನು ಮರಕ್ಕಮ್ ನಗರದ ಮೇಯರ್ ಫ್ರಾಂಕ್ ಸ್ಕಾರ್ಪಿಟಿ ಹಾಗೂ ಇತರೆ ಕೌನ್ಸಿಲರ್‌ಗಳು. ಭಾರತ ಕಾನ್ಸುಲೇಟ್ ಜನರಲ್ ಆಗಿರುವ ಅಪೂರ್ವಾ ಶೀವ್ರತ್ಸ ಹಾಗೂ ಕೆನಡಾದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ''ಈ ಗೌರವವು ನನಗೆ ಇನ್ನಷ್ಟು ಸೃಜನಶೀಲವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ನೀಡಿದೆ. ಹೆಚ್ಚು ಹೆಚ್ಚಿಗೆ ಕೆಲಸ ಮಾಡಿ, ಆದರ್ಶಪ್ರಾಯವಾಗುವಂತಾಗಬೇಕೆಂಬ ಜವಾಬ್ದಾರಿ ನೀಡಿದೆ. ಸುಸ್ತಾಗದೆ, ಬೇಗ ನಿವೃತ್ತಿಯಾಗದೆ ಕೆಲಸ ಮಾಡುತ್ತಲೇ ಇರಬೇಕೆಂಬ ಕಸುವು ನೀಡಿದೆ'' ಎಂದಿದ್ದಾರೆ.


Click it and Unblock the Notifications











