ಸುಪ್ರೀಂ ಕೋರ್ಟ್ ಆದೇಶದಿಂದ 'ಕಾಂತಾರ' ಚಿತ್ರ ತಂಡ ನಿರಾಳ
'ಕಾಂತಾರ' ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆಯಾದರೂ ಆ ಸಿನಿಮಾದ 'ವರಾಹ ರೂಪಂ' ಹಾಡು ವಿವಾದಕ್ಕೆ ಸಿಲುಕಿಕೊಂಡಿದೆ. ಇತ್ತೀಚೆಗಷ್ಟೆ ಕೇರಳ ಹೈಕೋರ್ಟ್ ನೀಡಿದ ಹೊಸ ಆದೇಶದಿಂದ ಮತ್ತೊಮ್ಮೆ 'ಕಾಂತಾರ' ಚಿತ್ರತಂಡವು 'ವರಾಹ ರೂಪಂ' ಹಾಡನ್ನು ಸಿನಿಮಾದಿಂದ ಹಿಂಪಡೆಯುವಂತಾಗಿತ್ತು.
ಆದರೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದ 'ಕಾಂತಾರ' ತಂಡ ನಿರಾಳವಾಗಿದ್ದು, ಮುಂದಿನ ಆದೇಶ ಬರುವವರೆಗೆ 'ವರಾಹ ರೂಪಂ' ಹಾಡನ್ನು ಅದರ ಮೂಲ ಸ್ವರೂಪದಲ್ಲಿಯೇ ಚಿತ್ರತಂಡವು ಬಳಸಬಹುದಾಗಿದೆ.
'ವರಾಹ ರೂಪಂ' ಹಾಡು ತಮ್ಮ 'ನವರಸಂ' ಆಲ್ಬಂನ ಹಾಡಿನಿಂದ ಕದ್ದಿರುವುದು ಎಂದು ಕೇರಳದ ಸಂಗೀತ ತಂಡ ಥೈಕ್ಕುಡಂ ಬ್ರಿಡ್ಜ್ ಹಾಗೂ 'ನವರಸಂ' ಆಲ್ಬಂನ ಹಕ್ಕು ಹೊಂದಿರುವ ಮಾತೃಭೂಮಿ ಪ್ರಿಂಟರ್ಸ್‌ನವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಕೇರಳ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಗಳಾಗಿರುವ 'ಕಾಂತಾರ' ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರುಗಳಿಗೆ ನಿರೀಕ್ಷಣಾ ಜಾಮೀನು ನೀಡಿರುವ ಜೊತೆಗೆ, 'ವರಾಹ ರೂಪಂ' ಹಾಡನ್ನು ಬಳಸದಂತೆ ತಡೆ ನೀಡಿತ್ತು.

ಕೇರಳ ಹೈಕೋರ್ಟ್‌ನ ಈ ಆದೇಶದ ವಿರುದ್ಧ ಚಿತ್ರತಂಡವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, 'ವರಾಹ ರೂಪಂ' ಸಿನಿಮಾದ ಹಾಡನ್ನು ಚಿತ್ರತಂಡ ಬಳಸಬಹುದು ಎಂದಿದೆ, ಅಲ್ಲದೆ, ಪ್ರಕರಣ ಕುರಿತಂತೆ ಪೊಲೀಸರು ನಿರ್ದೇಶಕ, ನಿರ್ಮಾಪಕರನ್ನು ವಿಚಾರಣೆ ನಡೆಸಬಹುದು ಆದರೆ ವಿಚಾರಣೆಗೆ ಹಾಜರಾದಾಗ ಅವರನ್ನು ಬಂಧಿಸುವಂತಿಲ್ಲ' ಎಂದಿದೆ.
''ಕೃತಿಚೌರ್ಯ ಆಗಿದೆ ಎಂದು ಕೇರಳ ಹೈಕೋರ್ಟ್‌ಗೆ ಅನಿಸಿದ ಮಾತ್ರಕ್ಕೆ ಈ ರೀತಿಯ ಆದೇಶ ನೀಡುವಂತಿಲ್ಲ. ಒಂದೊಮ್ಮೆ ಪ್ರಕರಣದಲ್ಲಿ ನಿರ್ದೇಶಕ, ನಿರ್ಮಾಪಕರನ್ನು ಬಂಧಿಸಿದ್ದರೆ ಅವರನ್ನು ಬಿಡುಗಡೆ ಮಾಡಬೇಕು. ಫೆಬ್ರವರಿ 12, 13 ರಂದು ಅರ್ಜಿದಾರರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು'' ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.


Click it and Unblock the Notifications











