ಹಾಡಿನ ಮೂಲಕ ಮತ್ತೊಮ್ಮೆ ಹುಚ್ಚೆಬ್ಬಿಸಿದ ಪ್ರೇಮ್, ಎಲ್ಲೆಡೆ ಕೆಡಿ ಚಿತ್ರದ ಶಿವ ಶಿವ ಹಾಡಿನ ಅಬ್ಬರ..!
ಚಿತ್ರರಂಗ ಮತ್ತು ಪ್ರೇಕ್ಷಕರ ಗಮನವನ್ನು ತೀವ್ರವಾಗಿ ತಮ್ಮತ್ತ ಸೆಳೆಯುವ ಕಲೆ ಶೋಮ್ಯಾನ್ ಜೋಗಿ ಪ್ರೇಮ್ ಅವರಿಗೆ ಯಾವತ್ತೋ ಸಿದ್ಧಿಸಿದೆ. ಪ್ರೇಮ್ ಹೊಸಬರನ್ನೂ ಗೆಲ್ಲಿಸುತ್ತಲೇ, ತಾವೂ ಗೆದ್ದವರು. ಸೂಪರ್ ಸ್ಟಾರ್ ಗಳನ್ನು ಒಟ್ಟೊಟ್ಟಿಗೇ ಹ್ಯಾಂಡಲ್ ಮಾಡಿದವರು.
ಇಂಥಾ ಪ್ರೇಮ್ ಅವರ ಚಿತ್ರಗಳಲ್ಲಿ ಮೊದಲಿಂದ ಹಾಡುಗಳು ಪ್ರಾಮುಖ್ಯತೆ ಪಡೆಯುತ್ತಾನೇ ಬಂದಿವೆ. ಇವರು ಆಯ್ಕೆ ಮಾಡಿಕೊಳ್ಳುವ ಟ್ಯೂನಿನಲ್ಲೇ ಜನರನ್ನ ಸಮ್ಮೋಹಕಗೊಳಿಸುತ್ತವ ಗುಣವಿರುತ್ತದೆ. ಜೊತೆಗೆ ಮನಸಿಗೆ ಹತ್ತಿರವಾದ ಸಾಲುಗಳು ಯಾವಾಗಲೂ ಗೆಲುವು ಸಾಧಿಸುತ್ತವೆ. ಇದಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಬಂದ ಕೆಡಿ ಚಿತ್ರದ ಶಿವ ಶಿವ ಹಾಡು ಸದ್ಯದ ಉದಾಹರಣೆ.

ಹೌದು, ಆರಂಭದಿಂದಲೂ ರೋಮಾಂಚಕ ವಾತಾವರಣವನ್ನು ತಮ್ಮ ಕೆಡಿ ಚಿತ್ರದ ಮೂಲಕ ನಿರ್ಮಾಣ ಮಾಡುತ್ತಾನೇ ಬಂದ ಪ್ರೇಮ್ ಈಗ ಚಿತ್ರದ ಮೊದಲ ಹಾಡಿನ ಮೂಲಕ ಅನೇಕರನ್ನು ಹುಚ್ಚೆಬ್ಬಿಸಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಯಾದ ಮೂರು ದಿನದಲ್ಲಿ ಕನ್ನಡದಲ್ಲಿ 13,521,661 ವೀಕ್ಷಣೆಯನ್ನು ಪಡೆದಿರುವ ಈ ಹಾಡು ಈಗಲೂ ಕೂಡ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಇನ್ನು ಕೆಡಿ ಕೇವಲ ಕನ್ನಡ ಚಿತ್ರವಲ್ಲ. ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ ಕನ್ನಡದ ಜೊತೆ ಬೇರೆ ಬೇರೆ ಭಾಷೆಯಲ್ಲಿ ಕೂಡ ಪ್ರೇಮ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಬೇರೆ ಭಾಷೆಯಲ್ಲಿ ಕೂಡ ಕೆಡಿ ಚಿತ್ರದ ಈ ಹಾಡು ವ್ಯಾಪಕವಾದ ಮೋಡಿಯನ್ನು ಮಾಡುತ್ತಿದೆ. ಹಿಂದಿಯಲ್ಲಿ 4.6 ಮಿಲಿಯನ್ ವೀವ್ಸ್ ಪಡೆದಿದೆ. ಯೂಟ್ಯೂಬ್‌ನಲ್ಲಿ ಹನ್ನೆರಡನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇನ್ನು, ತಮಿಳಿನಲ್ಲಿ 2.2 ಮಿಲಿಯನ್ ವೀಕ್ಷಣೆಯನ್ನು ಪಡೆದಿರುವ ಈ ಹಾಡು ತೆಲುಗಿನಲ್ಲಿ 2.1 ಮಿಲಿಯನ್ ವೀವ್ಸ್ ಪಡೆದಿದೆ. ಮಲಯಾಳಂನಲ್ಲಿ ಈ ಸಂಖ್ಯೆ 1 ಮಿಲಿಯನ್ ದಾಟಿದೆ.
ಜನಪ್ರಿಯ ಜಾನಪದ ಹಾಡಿನ ಮೊದಲ ಎರಡು ಸಾಲು ಬಳಸಿಕೊಂಡು ಮಂಜುನಾಥ ಗೌಡ ಈ ಹಾಡನ್ನು ಬರೆದಿದ್ದಾರೆ. ತೆಲುಗಿನಲ್ಲಿ ಆರ್.ಆರ್.ಆರ್ ಖ್ಯಾತಿಯ ಚಂದ್ರಬೋಸ್ ಬರೆದಿದ್ದರೆ, ತಮಿಳಿನಲ್ಲಿ ಮದನ್ ಕರ್ಕಿ ಮತ್ತು ಮಲಯಾಳಂನಲ್ಲಿ ಮನಕೊಂಪು ಗೋಪಾಲ್ ಕೃಷ್ಣನ್ ಬರೆದಿದ್ದಾರೆ. ಹಿಂದಿಯಲ್ಲಿ ರಖೀಬ್ ಆಲಂ ಈ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಪ್ರೇಮ್ ಮತ್ತು ಕೈಲಾಶ್ ಖೇರ್ ಈ ಹಾಡಿಗೆ ಧ್ವನಿಯಾಗಿದ್ದರೆ, ಹಿಂದಿಯಲ್ಲಿ ಸಲೀಂ ಮಾಸ್ಟರ್ ಅವರು ಕೈಲಾಶ್ ಖೇರ್ ಅವರ ಜೊತೆ ತಮ್ಮ ಕಂಠ ಕುಣಿಸಿದ್ದಾರೆ. ವಿಜಯ್ ಪ್ರಕಾಶ್ ಈ ಹಾಡನ್ನು ತಮಿಳಿನಲ್ಲಿ ಹಾಡಿರುವುದು ವಿಶೇಷ. ಮಲಯಾಳಂ ಹಾಡನ್ನು ಪ್ರಣವಂ ಶಶಿ ಹಾಡಿದ್ದಾರೆ.
ಉಳಿದಂತೆ ಕೆಡಿ ಚಿತ್ರದಲ್ಲಿ ಸಂಜಯ್ ದತ್ ಜೊತೆ ಶಿಲ್ಪಾ ಶೆಟ್ಟಿ ಕೂಡ ಇದ್ಧಾರೆ. 17 ವರ್ಷಗಳ ನಂತರ ಕೆಡಿ' ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಶಿಲ್ಪಾ ಶೆಟ್ಟಿ ಅವರನ್ನು ಕರೆತಂದಿದ್ದು ಪ್ರೇಮ್ ಅವರ ಮತ್ತೊಂದು ಹೆಗ್ಗಳಿಕೆ. ಬಾಲಿವುಡ್‌ನ ಈ ಎರಡು ಆಕರ್ಷಣೆಯನ್ನು ಹೊರತು ಪಡಿಸಿದರೆ, ಪ್ರೇಕ್ಷಕರನ್ನು ಸೆಳೆಯಲು ಕನ್ನಡ ಚಿತ್ರರಂಗದ ಹಿರಿಯರಾದ ರಮೇಶ್ ಅರವಿಂದ್ ಮತ್ತು ಡಾ.ರವಿಚಂದ್ರನ್ ಚಿತ್ರದಲ್ಲಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಹೃದಯ ಕದಿಯುವ ಕೆಲಸವನ್ನು ರೀಷ್ಮಾ ನಾಣಯ್ಯ ಮಾಡಿದ್ದಾರೆ.
ಇನ್ನೂ.. ಸಾಮಾನ್ಯವಾಗಿ ಚಿತ್ರದ ಆಡಿಯೋ ಹಕ್ಕು ಅಷ್ಟು ಕೋಟಿ, ಇಷ್ಟು ಕೋಟಿಗೆ ಮಾರಾಟವಾಯಿತು ಎಂದು ಎಲ್ಲರೂ ಹೇಳುತ್ತಾರೆ. ಆದರೆ.. ಇದೇ ಮೊದಲ ಬಾರಿಗೆ ನಿರ್ದೇಶಕ ಪ್ರೇಮ್ ತಮ್ಮ ಕೆಡಿ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ ಎಂದು ಹಿಂದೆ ಹೇಳಿದ್ದರು. ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿಯನ್ನೂ ಬರೆದಿದ್ದರು ಪ್ರೇಮ್. ಇನ್ನು ಅದ್ಧೂರಿ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು ಎಪ್ಪತ್ತು, ಎಂಭತ್ತರ ದಶಕದ ಕಥೆ ವಿಲಿಯಂ ಡೇವಿಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯದಲ್ಲಿಯೇ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.


Click it and Unblock the Notifications











