ತುಮಕೂರಿನಲ್ಲಿ ಬಿಡುಗಡೆಯಾಯ್ತು 'ಅಥಣಿ' ಚಿತ್ರದ ಹಾಡು, ಬಾರೆ ಬಾರೆ ಹಾಡು ಹೇಗಿದೆ..?
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಇದಕ್ಕೆ ಇನ್ನೊಂದು ಉದಾಹರಣೆ ಅಥಣಿ ಚಿತ್ರ.
ಹೌದು, ಸದ್ದು ಗದ್ದಲ್ಲ ಇಲ್ಲದೇ ಹೊಸತಂಡದ ಪ್ರಯೋಗ ಅಥಣಿ ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರತಂಡ ಮೊನ್ನೆ ಮೊನ್ನೆ ಚಿತ್ರದ ಬಾರೆ ಬಾರೆ ಎಂಬ ಹಾಡನ್ನು ತುಮಕೂರಿನ ದಿಬ್ಬೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಿದೆ. ತುಮಕೂರಿನ ದಿಬ್ಬೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷರಾದ ಮುರಳಿಧರ ಹಾಲಪ್ಪ, ನಟ, ಸಂಕಲನಕಾರ ನಾಗೇಂದ್ರ ಅರಸ್ ಚಿತ್ರದ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ರಾಜು ಚಿತ್ರಪುರ ಬರೆದಿರುವ ಈ ಹಾಡನ್ನು ಸ್ವಾತಿ ಶಂಕರ್ ಹಾಗೂ ಹರ್ಸಿವ್ ಭಘೀರ ಹಾಡಿದ್ದು ಕುಗೋಡು ಸಂಗೀತ ನೀಡಿದ್ದಾರೆ. ಇನ್ನೂ ಸಮರ್ಥ ಈ ಚಿತ್ರವನ್ನು ನಿರ್ದೇಶಿಸಿದ್ದು ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇವರಿಗಿದೆ. ಹುಬ್ಬಳ್ಳಿ ಮೂಲದ ಮಧು ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದು ನಾಗೇಂದ್ರ ಅರಸ್, ಶೋಭರಾಜ್, ಭವ್ಯ ಯತಿರಾಜ್, ಬಲರಾಜವಾಡಿ , ರಾಕೇಶ್ ಪೂಜಾರಿ, ಮೂರ್ತಿ, ವಿಷ್ಣುಪ್ರಿಯ, ಶ್ರೀನಿಧಿ, ಇಂದ್ರ ಕುಮಾರ್, ಸಿ ಜಿ ದಿಬ್ಬೂರು ಮುಂತಾದವರು ತಾರಾಗಣದಲ್ಲಿದ್ದಾರೆ.
ರೈತರ ಬದುಕು ಬವಣೆಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಕ್ರೈಂ, ಲವ್, ಸಸ್ಪೆನ್ಸ್ ಮತ್ತು ಕಾಮಿಡಿ ಹೀಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳನ್ನು ಸೇರಿಸಿ ಚಿತ್ರವನ್ನು ಸಮರ್ಥ್ ನಿರ್ದೇಶಿಸಿದ್ದಾರೆ. ಹರ್ಷ ಕೂಗೋಡು ಸಂಗೀತ ನಿರ್ದೇಶನದಲ್ಲಿ ಚಿತ್ರದಲ್ಲಿ ಐದು ಹಾಡುಗಳಿದ್ದು ಆ ಪೈಕಿ ಮೊದಲನೇ ಹಾಡು ಬಾರೇ ಬಾರೇ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡು ಐಟಂ ಸಾಂಗ್ ಅನ್ನುವುದು ವಿಶೇಷ.
ಮುಂದಿನ ದಿನಗಳಲ್ಲಿ ಚಿತ್ರದ ಇನ್ನುಳಿದ ಹಾಡನ್ನು ಬಿಡುಗಡೆ ಮಾಡುವ ಆಲೋಚನೆಯನ್ನು ಚಿತ್ರತಂಡ ಮಾಡಿದ್ದು ಚಿತ್ರಕ್ಕೆ ಸಂದೀಪ್ ಹೊನ್ನಾಳಿ ಛಾಯಾಗ್ರಹಣ ಇದೆ. ಸುನಯ್ ಜೈನ್ ಅವರ ಸಂಕಲನ ಇದೆ. ಇನ್ನುಳಿದಂತೆ ತುಮಕೂರು, ಬೆಂಗಳೂರು, ರಾಮನಗರ ಹೊನ್ನಾವರ, ಸಕಲೇಶಪುರ ಮುಂತಾದ ಕಡೆ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ. ಸದ್ಯಕ್ಕೆ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆಯನ್ನು ನೀಡಿರುವ ಚಿತ್ರತಂಡ ಮುಂಬರುವ ದಿನಗಳಲ್ಲಿ ಒಂದೊಂದೇ ಹಾಡನ್ನು ಬಿಡುಗಡೆ ಮಾಡಲಿದೆ. ಚಿತ್ರದ ಟ್ರೇಲರ್‌ನ್ನು ಕೂಡ ರಿಲೀಸ್ ಮಾಡಲಿದೆ. ಇನ್ನುಳಿದಂತೆ ಧರಣಿ ಮಂಡಲ ಮಧ್ಯದೊಳಗೆ ಎಂಬ ಅಡಿಬರಹವನ್ನೊಂದಿರುವ ಈ ಚಿತ್ರ ಶೀಘ್ರದಲ್ಲಿಯೇ ಕರುನಾಡಿನೆಲ್ಲೆಡೆ ಬಿಡುಗಡೆಯಾಗಲಿದೆ.


Click it and Unblock the Notifications











