ರವಿ ರಿಜೆಕ್ಟ್ ಮಾಡಿದ್ದ ಸಾಂಗ್ ವಿಷ್ಣು ಸಿನಿಮಾ ಪಾಲಾಗಿತ್ತು; ಕೇಳಿದ್ರೆ ನೀವು ಹಾಡೋದು ಗ್ಯಾರೆಂಟಿ
ಸಂಗೀತ ನಿರ್ದೇಶಕರು ಚಿತ್ರವೊಂದಕ್ಕೆ ಸಾಕಷ್ಟು ಟ್ಯೂನ್‌ಗಳನ್ನು ಹಾಕ್ತಾರೆ. ಕೆಲವು ನಿರ್ದೇಶಕರಿಗೆ ಇಷ್ಟವಾದರೆ ಮತ್ತೆ ಕೆಲವು ಬೇಡ ಎಂದು ರಿಜೆಕ್ಟ್ ಮಾಡಿಬಿಡುತ್ತಾರೆ. ಆ ರೀತಿ ಕ್ರೇಜಿಸ್ಟಾರ್ ರವಿಚಂದ್ರನ್ ಬೇಡ ಎಂದಿದ್ದ ಸಾಂಗ್ ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದಲ್ಲಿ ಬಳಕೆ ಆಗಿ ಹಿಟ್ ಆಗಿತ್ತು. ನಿಜಕ್ಕೂ ಇದು ಸೂಪರ್ ಹಿಟ್ ಸಾಂಗ್.
ನಾದಬ್ರಹ್ಮ ಹಂಸಲೇಖ ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಎಷ್ಟು ಮಾತನಾಡಿದರೂ ಕಮ್ಮಿನೇ. ಇನ್ನು ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಮಾಡಿ ಜಾದೂ ಎಂಥದ್ದು ಎಂದು ಗೊತ್ತೇಯಿದೆ. ಬರೀ ಹಾಡುಗಳಿಂದಲೇ ಚಿತ್ರಗಳನ್ನು ಈ ಜೋಡಿ ಅರ್ಧ ಗೆಲ್ಲಿಸಿಬಿಡುತ್ತಿತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಎಲ್ಲಾ ಆಲ್ಬಮ್‌ಗಳು ಸೂಪರ್ ಹಿಟ್ ಆಗಿ ದಾಖಲೆ ಬರೆದಿವೆ.

ಆರಂಭದಲ್ಲಿ ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ಇರುತ್ತಿತ್ತು. ಏಳೆಂಟು ಹಾಡುಗಳ ಜೊತೆಗೆ ಸಣ್ಣ ಸಣ್ಣ ಬಿಟ್ ಹಾಡುಗಳು ಇರುತ್ತಿತ್ತು. ರವಿಚಂದ್ರನ್ ಸಿನಿಮಾಗಳಿಗೆ 10ರಿಂದ 15 ಟ್ಯೂನ್‌ಗಳನ್ನು ಹಂಸಲೇಖ ಹಾಕುತ್ತಿದ್ದರು. ಅದರಲ್ಲಿ 7 ರಿಂದ 8 ಟ್ಯೂನ್‌ಗಳನ್ನು ಕ್ರೇಜಿಸ್ಟಾರ್ ಫೈನಲ್ ಮಾಡುತ್ತಿದ್ದರು. ಉಳಿದವನ್ನು ಬೇಡ ಎಂದು ಬಿಟ್ಟುಬಿಡುತ್ತಿದ್ದರು.
ಹೀಗೆ ರವಿಚಂದ್ರನ್ ಬೇಡ ಎಂದು ರಿಜೆಕ್ಟ್ ಮಾಡಿದ್ದ ಟ್ಯೂನ್‌ಗಳು ಬೇರೆ ನಟರ ಸಿನಿಮಾಗಳಲ್ಲಿ ಅಳವಡಿಸಿಕೊಂಡಿರುವುದು ಇದೆ. ವಿಷ್ಣುವರ್ಧನ್ ನಟನೆಯ 'ಸಾಮ್ರಾಟ್' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದವು. ಎಲ್ಲಾ ಹಾಡುಗಳಿಗೆ ಸ್ವತಃ ನಾದಬ್ರಹ್ಮ ಹಂಸಲೇಖ ಸಂಗೀತ, ಸಾಹಿತ್ಯ ಒದಗಿಸಿದ್ದರು. ಚಿತ್ರದ 'ನಮ್ ಕಡೆ ಸಾಂಬಾರ್ ಅಂದ್ರೆ' ಹಾಡನ್ನ ಮರೆಯೋದುಂಟೆ.
ಹಂಸಲೇಖ ತಂಡದಲ್ಲಿ ಕೆಲಸ ಮಾಡಿದ್ದ ಗಿಟಾರ್ ಗೋಪಿ ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಹಂಸಲೇಖ ಜೊತೆಗೆ ಆರಂಭದ ದಿನಗಳಿಂದಲೂ ಅವರು ಗುರ್ತಿಸಿಕೊಂಡವರು. ಸಾಂಗ್ ರೆಕಾರ್ಡಿಂಗ್, ರೀ-ರೆಕಾರ್ಡಿಂಗ್‌ಗೆ ನಾದಬ್ರಹ್ಮನ ಜೊತೆಗಿರುತ್ತಿದ್ದರು. ಗೋಪಿ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನ ಬಿಚ್ಚಿಡುತ್ತಿದ್ದಾರೆ.

ಹಂಸಲೇಖ ಅವರು ಪ್ರತಿ ಚಿತ್ರಕ್ಕೂ 10ರಿಂದ 15 ಟ್ಯೂನ್ ಕಂಪೋಸ್ ಮಾಡುತ್ತಿದ್ದರು. ಕೆಲವೊಮ್ಮೆ ಸಾಹಿತ್ಯ ಬರೆದು ರೆಕಾರ್ಡಿಂಗ್ ಕೂಡ ಆಗಿಬಿಡುತ್ತಿತ್ತು. ಅದೇ ರೀತಿ ರವಿಚಂದ್ರನ್ ಅವರ ಚಿತ್ರವೊಂದಕ್ಕೆ 'ನಮ್ ಕಡೆ ಸಾಂಬಾರ್ ಅಂದ್ರೆ' ಸಾಂಗ್ ಕಂಪೋಸ್ ಆಗಿತ್ತು. ಆದರೆ ಅದನ್ನು ಕೇಳಿ ರವಿಚಂದ್ರನ್ ಬೇಡ ಎಂದು ರಿಜೆಕ್ಟ್ ಮಾಡಿದ್ದರು. ಆದರೆ ಸಾಮ್ರಾಟ್ ಸಿನಿಮಾ ವೇಳೆ ನಾಗಣ್ಣ ಈ ಸಾಂಗ್ ಕೇಳಿ ಇಷ್ಟಪಟ್ಟಿದ್ದರು. 'ಸಾಮ್ರಾಟ್' ಈ ಸಾಂಗ್ ಕೊಡಿ ಎಂದು ಕೇಳಿದ್ದರು.
ರೈಟ್ಸ್ ರವಿಚಂದ್ರನ್ ಬಳಿ ಇದೆ. ಅವರು ಕೊಟ್ಟರೆ ನನ್ನದೇನು ಅಭ್ಯಂತರವಿಲ್ಲ ಎಂದು ಹಂಸಲೇಖ ಹೇಳಿದ್ದರು. ಬಳಿಕ ನಾಗಣ್ಣ ಹೋಗಿ ರವಿಚಂದ್ರನ್ ಬಳಿಕ ಕೇಳಿ ಈ ಹಾಡು 'ಸಾಮ್ರಾಟ್' ಚಿತ್ರಕ್ಕೆ ಬಳಸಿಕೊಂಡರು. ಆ ಹಾಡು ಯಾವಮಟ್ಟಿಗೆ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತೇಯಿದೆ ಎಂದು ಗಿಟಾರ್ ಗೋಪಿ ವಿವರಿಸಿದ್ದಾರೆ.
ಅಂದಹಾಗೆ 'ಸಾಮ್ರಾಟ್' ನಾಗಣ್ಣ ನಿರ್ದೇಶನದ ಚೊಚ್ಚಲ ಚಿತ್ರ. ಮುಂದೆ ವಿಷ್ಣುದಾದಾ ಜೊತೆ ಅವರು 'ಹಲೋ ಡ್ಯಾಡಿ', 'ಸೂರಪ್ಪ' ಹಾಗೂ 'ಕೋಟಿಗೊಬ್ಬ' ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಇನ್ನು ಸೂಪರ್ ಹಿಟ್ 'ನಮ್ ಕಡೆ ಸಾಂಬಾರ್ ಅಂದ್ರೆ' ಸಾಂಗ್‌ನಲ್ಲಿ ದಾದಾ ಜೊತೆ ವಿನಯ ಪ್ರಸಾದ್ ಹೆಜ್ಜೆ ಹಾಕಿದ್ದರು. ಸೌಮ್ಯ ಕುಲಕರ್ಣಿ ನಾಯಕಿಯಾಗಿ ಮಿಂಚಿದ್ದರು. ವಜ್ರಮುನಿ, ಸುಧೀರ್ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದರು.


Click it and Unblock the Notifications











