ದೊಡ್ಡದು, ಚಿಕ್ಕದು, ಯಾರದ್ದು? ಏನದು? ಕೊನೆಗೂ ಮೌನ ಮುರಿದ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'UI' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಸಾಂಗ್ ಪ್ರೋಮೊ ಮಾತ್ರ ಬಿಟ್ಟು ಉಪ್ಪಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು. ಫೆಬ್ರವರಿ 26ಕ್ಕೆ ಕಂಪ್ಲೀಟ್ ಸಾಂಗ್ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.
ಚಿತ್ರತಂಡ ಹೇಳಿದ ಆ ದಿನ ಬಂದೇ ಬಿಟ್ಟಿದೆ. ಅಭಿಮಾನಿಗಳು ದೊಡ್ಡದು, ಚಿಕ್ಕದು ಏನು ಎಂದು ತಿಳಿದುಕೊಳ್ಳಲು ಕಾಯುತ್ತಿದ್ದರು. ಆದರೆ ರಿಯಲ್ ಸ್ಟಾರ್ ನಿರಾಸೆ ಮೂಡಿಸಿದ್ದಾರೆ. ಸದ್ಯಕ್ಕೆ ಸಾಂಗ್ ರಿಲೀಸ್ ಆಗಲ್ಲ ಎನ್ನುವಂತೆ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.

12 ದಿನಗಳ ಹಿಂದೆ 'ಚೀಪ್.. ಚೀಪ್ ಎಲ್ಲಾ ಚೀಪ್ ಚೀಪ್' ಎನ್ನುವ 'UI' ಚಿತ್ರದ ಸಾಂಗ್ ಪ್ರೋಮೊ ರಿಲೀಸ್ ಆಗಿತ್ತು. 'ನಂದು ತುಂಬಾ ದೊಡ್ಡದು ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ಡದು' ಎಂದು ಹಾಡು ಸಾಲುಗಳನ್ನು ಕೇಳಿಸಲಾಗಿತ್ತು. ಉಪ್ಪಿ ಅಭಿಮಾನಿಗಳಂತೂ ಹಾಡು ಕೇಳಿ ಖುಷಿಯಾಗಿದ್ದರು. ಹಾಡಿನ ಸಾಹಿತ್ಯದಲ್ಲೇ ನಮ್ ಬಾಸ್ ಎಂತಹ ಟ್ವಿಸ್ಟ್ ಕೊಟ್ಟಿದ್ದಾರೆ ನೋಡಿ ಎಂದು ಕಾಲರ್ ಎಗರಿಸಿದ್ದರು.
ಅಷ್ಟಕ್ಕೂ ಉಪೇಂದ್ರ ಹೇಳೋಕೆ ಬರುತ್ತಿರುವ ಆ ದೊಡ್ಡದು, ಚಿಕ್ಕದು ಏನು? ಎಂದು ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಫೆಬ್ರವರಿ 26ಕ್ಕೆ ಕಂಪ್ಲೀಟ್ ಸಾಂಗ್ ಬರುತ್ತೆ ಆಗ ಉತ್ತರ ಸಿಗುತ್ತೆ ಎಂದುಕೊಂಡಿದ್ದರು. ಆದರೆ ಸದ್ಯಕ್ಕೆ ಉತ್ತರ ಸಿಗುವಂತಿಲ್ಲ. ಸಾಂಗ್ ರಿಲೀಸ್ ಪೋಸ್ಟ್ ಪೋನ್ ಆಗಿದೆ. ಆ ಬಗ್ಗೆ ಉಪೇಂದ್ರ ಪೋಸ್ಟ್ ಮಾಡಿದ್ದಾರೆ.
"ಚೀಪ್ ಚೀಪ್" ಏನದು? ದೊಡ್ಡದು, ಚಿಕ್ಕದು, ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು? ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ. ಅದಾಗಿ ಹೋಗುತ್ತದೆ ಎಂದರೆ ಏನು? ಏನು "ಅದು"? "ಅದು" ಏನಾಗುತ್ತದೆ? ಏನಾಗುತ್ತದೆ ಎಂದು ಮಾರ್ಚ್ 4ನೇ ತಾರೀಖು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 4ಕ್ಕೆ 'UI' ಸಿನಿಮಾ ಫಸ್ಟ್ ಸಾಂಗ್ ರಿಲೀಸ್ ಆಗುತ್ತಾ? ಅಥವಾ ದೊಡ್ಡದು, ಚಿಕ್ಕದ್ದರ ಬಗ್ಗೆ ಉಪ್ಪಿ ಹೇಳುತ್ತಿರುವುದು ಏನು? ಎಂದು ಗೊತ್ತಾಗುತ್ತಾ ಕಾದು ನೋಡಬೇಕಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ವಿಜಯ್ ಪ್ರಕಾಶ್, ನಕಾಶ್ ಅಜೀಜ್ ಹಾಡು ಹಾಡಿದ್ದಾರೆ. ಖುದ್ದು ಉಪೇಂದ್ರ ಸಾಹಿತ್ಯ ಬರೆದಿದ್ದಾರೆ.
ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ಗಳಲ್ಲಿ ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ 'UI' ಸಿನಿಮಾ ನಿರ್ಮಿಸುತ್ತಿದ್ದಾರೆ. ಆರ್ಮುಗ ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುವ ಕೆಲಸಗಳು ನಡೀತಿದೆ. 5 ಭಾಷೆಗಳಲ್ಲಿ 'ಚೀಪ್ ಸಾಂಗ್' ಪ್ರೋಮೊ ರಿಲೀಸ್ ಆಗಿದೆ.

9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಮರಳಿದ್ದಾರೆ. ಇನ್ನು 'UI' ಟೀಸರ್ ಹಾಗೂ ಫಸ್ಟ್ ಸಾಂಗ್ ಟೀಸರ್ ನೋಡಿದ ಅಭಿಮಾನಿಗಳು 20 ವರ್ಷಗಳ ಹಿಂದಿನ ಉಪೇಂದ್ರ ಮತ್ತೆ ವಾಪಸ್ ಬರುತ್ತಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯಲ್ಲಿ ಕಥೆ ಹೇಳಿ ಪ್ರೇಕ್ಷಕರ ತಲೆಗೆ ಕೆಲಸ ಕೊಡಲು ಮುಂದಾಗಿದ್ದಾರೆ.
ಚಿತ್ರದಲ್ಲಿ ವಿಭಿನ್ನ, ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸಿ ತಲೆಗೆ ಹುಳಬಿಟ್ಟು ಮನರಂಜನೆ ಜೊತೆಗೆ ಸಂದೇಶ ಕೊಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಇನ್ನು ಸಿನಿಮಾ ಟೈಟಲ್ ಅರ್ಥ ಗೊತ್ತಾಗದೇ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಗ್ರಾಫಿಕ್ಸ್ ಕೆಲಸಗಳು ಹೆಚ್ಚು ಇರುವುದರಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ.


Click it and Unblock the Notifications











