ಮೈಕ್ ಮುಂದೆ ನಿಂತು 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ನೀಡಿದ ಉಪೇಂದ್ರ!
ನಟ ಉಪೇಂದ್ರ ಸಕಲಕಲಾವಲ್ಲಭ. ಸಿನಿಮಾದಲ್ಲಿ ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ಕೈಯಾಡಿಸಿ ಸೈ ಎನಿಸಿಕೊಂಡಿದ್ದಾರೆ ಅವರು. ನಿರ್ದೇಶನ, ನಟನೆ, ಗಾಯನ, ಗೀತ ರಚನೆ, ನಿರ್ಮಾಣ ಎಲ್ಲವನ್ನೂ ಮಾಡಿ ಗೆಲುವು ಕಂಡಿರುವ ಅಪರೂಪದ ಕಲಾವಿದ ಉಪೇಂದ್ರ.
ಉಪೇಂದ್ರ ಅವರನ್ನೇ ಅನುಸರಿಸಿ ನಿರ್ದೇಶನ, ನಟನೆ ಎರಡೂ ಮಾಡಲು ಹೋದ ಹಲವರು ಮುಗ್ಗರಿಸಿದ್ದಾರೆ. ಗೆದ್ದವರು ಕೆಲವರಷ್ಟೆ. ರವಿಚಂದ್ರನ್, ಸುದೀಪ್, ರಕ್ಷಿತ್ ಶೆಟ್ಟಿ ಇನ್ನು ಕೆಲವರಷ್ಟೆ ತಾವೇ ನಿರ್ದೇಶಿಸಿ, ನಟಿಸಿ ಯಶಸ್ಸು ಕಂಡ ವಿರಳ ಕಲಾವಿದರು.
ಉಪೇಂದ್ರ ಅವರ ನಟನೆ, ನಿರ್ದೇಶನದ ಬಗ್ಗೆ ವಿಶೇಷವಾಗಿ ಹೇಳಬೇಕಾದದ್ದೇನೂ ಇಲ್ಲ. ಅವರ ನಟನೆ-ನಿರ್ದೇಶನದ ಬಗ್ಗೆ ಸಿನಿ ಪ್ರೇಮಿಗಳಿಗೆ ಚೆನ್ನಾಗಿ ಗೊತ್ತಿದೆ. ನಿರ್ದೇಶಕ, ನಟರಾಗಿರುವ ಜೊತೆಗೆ ಉಪೇಂದ್ರ ಗಾಯಕ ಸಹ. ಈ ಹಿಂದೆ ಹಲವು ಸಿನಿಮಾಗಳಿಗೆ ಉಪೇಂದ್ರ ಹಾಡು ಹಾಡಿದ್ದಾರೆ. ಇದೀಗ ಹೊಸದೊಂದು ಸಿನಿಮಾಕ್ಕೆ ಉಪೇಂದ್ರ ಕಂಠದಾನ ಮಾಡಿದ್ದಾರೆ.
ಈ ವರೆಗೆ 20ಕ್ಕೂ ಹೆಚ್ಚು ಸಿನಿಮಾಗಳನ್ನು ಹಾಡಿರುವ ನಟ ಉಪೇಂದ್ರ ಇದೀಗ ಕನ್ನಡದ ಹೊಸ ಸಿನಿಮಾ 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ಸಿನಿಮಾಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ. ಉಪೇಂದ್ರ ಸ್ಟುಡಿಯೋದಲ್ಲಿ ಮೈಕ್ ಮುಂದೆ ನಿಂತು ಹಾಡು ಹಾಡುತ್ತಿರುವ ಚಿತ್ರವನ್ನು 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ಚಿತ್ರತಂಡ ಹಂಚಿಕೊಂಡಿದೆ.

ರಘುಶಾಸ್ತ್ರಿ ಬರೆದಿರುವ ಹಾಡಿಗೆ ಉಪೇಂದ್ರ ಕಂಠ
'ಗೀಚು ನಿಂಗೆ...' ಎಂಬ ಹಾಡನ್ನು ಉಪೇಂದ್ರ ಈ ಸಿನಿಮಾಕ್ಕಾಗಿ ಹಾಡಿದ್ದಾರೆ. ಹಾಡಿನ ಸಾಹಿತ್ಯ ಬರೆದಿರುವುದು ರಘುಶಾಸ್ತ್ರಿ, ಸಿನಿಮಾಕ್ಕೆ ಸಂಗೀತ ಒದಗಿಸಿರುವುದು ವಿಜಯ್ ರಾಜ್. 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ಸಿನಿಮಾವನ್ನು ರತ್ನತೀರ್ಥ ನಿರ್ದೇಶನ ಮಾಡಿದ್ದಾರೆ. ಜನನಿ ಫಿಲಮ್ಸ್ ಲಾಂಛನದ ಅಡಿ ನಿರ್ಮಾಣವಾಗುತ್ತಿರುವ ಸಿನಿಮಾವನ್ನು ಪ್ರಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

20 ಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಹಾಡಿದ್ದಾರೆ
ನಟ ಉಪೇಂದ್ರ ಈ ವರೆಗೆ 20 ಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ತಮ್ಮದೇ ನಿರ್ದೇಶನದ ಕೆಲವು ಸಿನಿಮಾಗಳಿಗೆ ತಾವೇ ರಚಿಸಿರುವ ಹಾಡುಗಳನ್ನು ಹಾಡಿದ್ದಾರೆ ಅವುಗಳು ಬಹು ಹಿಟ್ ಸಹ ಆಗಿವೆ. 2019ರಲ್ಲಿ ಬಿಡುಗಡೆ ಆದ ತಮ್ಮದೇ ನಟನೆಯ 'ಐ ಲವ್ ಯು' ಸಿನಿಮಾದಲ್ಲಿ ಉಪೇಂದ್ರ ಹಾಡಿದ್ದರು, ಅದೇ ಅವರು ಹಾಡಿದ್ದ ಕೊನೆಯ ಹಾಡಾಗಿತ್ತು. ಅದರ ಬಳಿಕ ಈಗ 'ಅಲ್ಲೆ ಡ್ರಾ ಅಲ್ಲೆ ಬಹುಮಾನ' ಸಿನಿಮಾಕ್ಕಾಗಿ ಹಾಡಿದ್ದಾರೆ.

ಹಲವು ಹಿಟ್ ಹಾಡುಗಳನ್ನು ಹಾಡಿರುವ ಉಪೇಂದ್ರ
'ಉಪೇಂದ್ರ' ಸಿನಿಮಾದ 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಹಾಡಿನ ಮೂಲಕ ಗಾಯನ ಆರಂಭಿಸಿದ ಉಪೇಂದ್ರ, 'ಎಚ್2ಓ' ಸಿನಿಮಾದ 'ಬಿಡ ಬ್ಯಾಡ', 'ದಿಲ್ ಇಲ್ದೆ ಲವ್ ಮಾಡೊಕಾಗಲ್ವೆ', 'ನಾಗರಹಾವು' ಸಿನಿಮಾದ 'ಯಾಕಿಂಗಾಡ್ತೀಯೆ', ರಕ್ತ ಕಣ್ಣೀರು ಸಿನಿಮಾದ 'ಬಾ ಬಾರೊ ರಸಿಕ', ಓಂಕಾರ ಸಿನಿಮಾದ 'ಓತ್ಲಾ-ಓತ್ಲಾ ಓಟಿಲ್ಲಿ ಒತ್ತಲಾ', 'ಉಪ್ಪಿ ದಾದಾ ಎಂಬಿಬಿಎಸ್'ನ 'ಮಕ್ಕರ್ ಮಾಡೊ ಮಾಲಿನಿಯೇ', 'ಐಶ್ವರ್ಯಾ' ಸಿನಿಮಾದ 'ಎಲ್ಲಾ ಓಕೆ ಮದುವೆ ಯಾಕೆ', 'ಬುದ್ಧಿವಂತ' ಸಿನಿಮಾದ 'ಚಿತ್ರಾನ್ನ-ಚಿತ್ರಾನ್ನ', ಸೂಪರ್ ಸಿನಿಮಾದ 'ಸಿಕ್ಕಾಪಟ್ಟೆ ಇಷ್ಟಾಪಟ್ಟೆ', ಶಿವರಾಜ್ ಕುಮಾರ್ ನಟನೆಯ 'ಜೋಗಯ್ಯ' ಸಿನಿಮಾದ 'ತಗಲಾಕ್ಕೊಂಡೆ ನಾನು', ದುನಿಯಾ ವಿಜಯ್ ನಟನೆಯ 'ಜರಾಸಂಧ' ಸಿನಿಮಾದ 'ಪದೇ-ಪದೇ ಫೋನಿನಲ್ಲಿ' ಇನ್ನೂ ಹಲವಾರು ಹಾಡುಗಳನ್ನು ಉಪೇಂದ್ರ ಹಾಡಿದ್ದಾರೆ.

ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ
ಉಪೇಂದ್ರ ಪ್ರಸ್ತುತ 'ಕಬ್ಜ' ಮತ್ತು 'ಲಗಾಂ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆರ್.ಚಂದ್ರು ನಿರ್ದೇಶಿಸಲಿರುವ 'ಕಬ್ಜ' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುದೀಪ್ ಸಹ ನಟಿಸುತ್ತಿದ್ದಾರೆ. 'ಲಗಾಂ' ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಉಪೇಂದ್ರ ನಟಿಸಿರುವ 'ಹೋಮ್ ಮಿನಿಸ್ಟರ್' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನ 'ಗನಿ' ಸಿನಿಮಾದಲ್ಲಿ ಸಹ ಉಪೇಂದ್ರ ನಟಿಸಿದ್ದು ಬಿಡುಗಡೆಗೆ ತಯಾರಾಗಿದೆ. ಜೊತೆಗೆ 'ತ್ರಿಶೂಲಂ' ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ಬುದ್ಧಿವಂತ 2' ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ.


Click it and Unblock the Notifications











