'ನಮಾಮಿ ನಮಾಮಿ' ಮಧುಮತಿಯ ನಟರಾಜನ ಆರಾಧನೆ: ಅಚ್ಚರಿ ಮೂಡಿಸಿದ ರವಿ ಬಸ್ರೂರು ಟ್ಯೂನ್
ರಿಯಲ್ ಸ್ಟಾರ್ ಉಪೇಂದ್ರ, ಶ್ರಿಯಾ ಶರಣ್ ನಟನೆಯ 'ಕಬ್ಜ' ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ಈ ಬಾರಿ ಲಿರಿಕಲ್ ವಿಡಿಯೋ ಬದಲು ವಿಡಿಯೋ ಸಾಂಗ್ ಶೇರ್ ಮಾಡಿದೆ ಚಿತ್ರತಂಡ. ಬರೀ ಮಾಸ್ ಸಾಂಗ್‌ಗಳಿಂದಲೇ ಸದ್ದು ಮಾಡ್ತಿದ್ದ ರವಿ ಬಸ್ರೂರು ದೇವರ ಭಕ್ತಿ ಗೀತೆಗೆ ಕ್ಲಾಸಿಕಲ್ ಟಚ್ ಇರುವ ಟ್ಯೂನ್ ಹಾಕಿದ್ದಾರೆ.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 7 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ತಿದ್ದಿ ತೀಡಲಾಗುತ್ತಿದೆ. ಉಪೇಂದ್ರ ಜೊತೆಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಿಚ್ಚ ಸುದೀಪ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮೇಕಿಂಗ್ ಹಂತದಿಂದಲೇ ಸಿನಿಮಾ ಭಾರೀ ಸದ್ದು ಮಾಡ್ತಾ ಬರ್ತಿದೆ. ರಿಲೀಸ್ ಡೇಟ್ ಹತ್ತಿರವಾದಂತೆ 'ಕಬ್ಜ' ಖದರ್ ಹೆಚ್ಚಾಗುತ್ತಿದೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. KGF ಮಾದರಿಯಲ್ಲಿ ಮೂಡಿ ಬರುತ್ತಿರುವ ಗ್ಯಾಂಗ್‌ಸ್ಟರ್ ಸಿನಿಮಾ ಇದು. ಸದ್ಯ 'ಕಬ್ಜ' ಚಿತ್ರದ ಗಾನಬಜಾನ ಶುರುವಾಗಿದೆ.

'ನಮಾಮಿ ನಮಾಮಿ' ಭಕ್ತಿಗೀತೆ
'ಕಬ್ಜ' ಚಿತ್ರದಲ್ಲಿ ನಾಯಕಿ ಶ್ರಿಯಾ ಶರಣ್ ರಾಣಿ ಮಧುಮತಿ ಎನ್ನು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಾಗಿ ಬಹುಭಾಷಾ ತಾರೆಯನ್ನು ಆರ್. ಚಂದ್ರು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಧುಮತಿ ನಟರಾಜನನ್ನು ಸ್ತುತಿಸುವ ಹಾಡು 'ನಮಾಮಿ ನಮಾಮಿ'. ಕಥಕ್ ಡ್ಯಾನ್ಸರ್ ಆಗಿರುವ ಶ್ರಿಯಾ ಶರಣ್ ಹಾಡಿಗೆ ಬಹಳ ಸೊಗಸಾಗಿ ನೃತ್ಯ ಮಾಡಿದ್ದಾರೆ. 5 ಭಾಷೆಗಳಲ್ಲಿ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದೆ. ಮೇಕಿಂಗ್ ಕಣ್ಣಿಗೆ ಹಬ್ಬ ಎನ್ನುವಂತಿದೆ.

ಮನಗೆದ್ದ ರವಿಬಸ್ರೂರು ಟ್ಯೂನ್
ರವಿಬಸ್ರೂರು KGF ಛಾಯೆಯಿಂದ ಹೊರಬರುತ್ತಿಲ್ಲ. 'ಕಬ್ಜ' ಬಿಜಿಎಂ, ಸಾಂಗ್ಸ್ ಎಲ್ಲವೂ KGF ಸಿನಿಮಾವನ್ನೇ ನೆನಪಿಸುತ್ತಿದೆ ಎನ್ನುವ ವಾದ ಕೆಲವರದ್ದಾಗಿತ್ತು. ಆದರೆ 'ನಮಾಮಿ ನಮಾಮಿ' ಗೀತೆಗೆ ರವಿ ಬಹಳ ವಿಭಿನ್ನವಾಗಿ ಟ್ಯೂನ್ ಹಾಕಿ ಗೆದ್ದಿದ್ದಾರೆ. ಈ ಬಗ್ಗೆ ಕಾಮೆಂಟ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಿನ್ನಲ್ ರಾಜ್ ಸಾಹಿತ್ಯ, ಐಶ್ವರ್ಯ ರಂಗರಾಜನ್ ದನಿ ಹಾಡಿಗೆ ಪೂರಕವಾಗಿದೆ. ಹಿಂದಿಯಲ್ಲೂ ಐಶ್ವರ್ಯ ಹಾಡು ಹಾಡಿದ್ದಾರೆ. ಅದ್ಧೂರಿ ಸೆಟ್‌ನಲ್ಲಿ ಸಾಂಗ್ ಶೂಟ್ ಮಾಡಲಾಗಿದೆ. ಒಂದಷ್ಟು ಡ್ಯಾನ್ಸರ್ಸ್ ಶ್ರಿಯಾ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ.

ಶಿಡ್ಲಘಟ್ಟದಲ್ಲಿ ಆಡಿಯೋ ಲಾಂಚ್
ಫೆಬ್ರವರಿ 26ಕ್ಕೆ ಶಿಡ್ಲಘಟ್ಟದಲ್ಲಿ ಬಹಳ ಅದ್ಧುರಿಯಾಗಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಯಾಂಡಲ್‌ವುಡ್ ತಾರೆಯರ ಜೊತೆಗೆ ತೆಲುಗು ಸ್ಟಾರ್‌ಗಳನ್ನು ಕಾರ್ಯಕ್ರಮಕ್ಕೆ ಚಂದ್ರು ಆಹ್ವಾನಿಸುತ್ತಿದ್ದಾರೆ. 3ಲಕ್ಷ ಜನ ಈ ಆಡಿಯೋ ಲಾಂಚ್ ಈವೆಂಟ್‌ಗೆ ಭಾಗಿ ಆಗುವ ನಿರೀಕ್ಷೆ ಇದೆ. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಇದಕ್ಕಾಗಿ ದೊಡ್ಡ ವೇದಿಕೆ ನಿರ್ಮಾಣ ಆಗಲಿದೆ.

ಆಕ್ಷನ್ ಎಂಟರ್‌ಟೈನರ್ 'ಕಬ್ಜ'
ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾ ಇದು. 1940ರ ದಶಕದಲ್ಲಿ ಶುರುವಾಗುವ 'ಕಬ್ಜ' ಸಿನಿಮಾ ಕಥೆ 70ರವರೆಗೆ ಸಾಗಿ ಬರುತ್ತದೆ. ಅಂಡರ್ ವರ್ಲ್ಡ್ ಅಧಿಪತ್ಯಕ್ಕಾಗಿ ದೊಡ್ಡ ದೊಡ್ಡ ಗ್ಯಾಂಗ್‌ಸ್ಟರ್‌ಗಳ ನಡುವಿನ ಕಾಳಗದ ಕಥೆಯನ್ನು ಚಂದ್ರು ಕಟ್ಟಿಕೊಟ್ಟಿದ್ದಾರೆ. ಇನ್ನು 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಭರದಿಂದ ಸಾಗ್ತಿದೆ. ಅದರ ಸಣ್ಣ ಮೇಕಿಂಗ್ ಝಲಕ್ ರಿಲೀಸ್ ಆಗಿ ವೈರಲ್ ಆಗ್ತಿದೆ.


Click it and Unblock the Notifications











