'ಕಬ್ಜ' ಸಿನಿಮಾದ ಹಾಡು ಬಿಡುಗಡೆ: ಹೇಗಿದೆ ಮೊದಲ ಹಾಡು?
ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆ ಆಗಿದೆ. ಹಾಡು ಬಿಡುಗಡೆಗೆಂದೇ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಸಿನಿಮಾದ ಹಾಡು ಸಹ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಆರಂಭದಲ್ಲಿ ಅಭಿಮಾನಿಗಳಿಂದ ಸಕಾರಾತ್ಮಕ ಅಭಿಪ್ರಾಯ ಹಾಡಿಗೆ ವ್ಯಕ್ತವಾಗಿದೆ.
ಸಿನಿಮಾದ ಟೈಟಲ್ ಟ್ರ್ಯಾಕ್ ಇದೀಗ ಬಿಡುಗಡೆ ಆಗಿದ್ದು, ಅಬ್ಬರದ ಸಂಗೀತಕ್ಕೆ ಪವರ್‌ಫುಲ್ ಸಾಹಿತ್ಯವನ್ನು ಜೊತೆ ಮಾಡಲಾಗಿದೆ. ಹಾಡಿಗೆ ಸಂಗೀತ ಹಾಗೂ ಸಾಹಿತ್ಯ ಎರಡೂ ರವಿ ಬಸ್ರೂರು ಅವರದ್ದೇ ಆಗಿದೆ. 'ಕಬ್ಜ'ದ ಈ ಹಾಡು ಸಹ 'ಕೆಜಿಎಫ್ 2' ಸಿನಿಮಾದ 'ತೂಫಾನ್' ಪ್ಯಾಟರ್ನ್ ಅನ್ನು ನೆನಪಿಸುತ್ತಿದೆ. 'ಕೆಜಿಎಫ್' ಮಾದರಿಯಲ್ಲಿಯೇ ಪವರ್‌ಫುಲ್ ಹಾಡಿನ ನಡುವೆ ತಾಯಿ ಸೆಂಟಿಮೆಂಟ್‌ನ ಸಾಲುಗಳನ್ನು ಸೇರಿಸಲಾಗಿದೆ.
'ಕಬ್ಜ' ಎನ್ನುವುದೇ ಕೀ ಪದವನ್ನಾಗಿ ಇಟ್ಟುಕೊಂಡು ಹಾಡು ರಚಿಸಲಾಗಿದ್ದು, ಹಾಡನ್ನು ಸಂತೋಶ್ ವೆಂಕಿ ಹಾಡಿದ್ದಾರೆ. ಹಾಡಿನ ನಡುವೆ ಬರುವ ತಾಯಿ ಸೆಂಟಿಮೆಂಟ್‌ನ ಹಾಡನ್ನು ಭವ್ಯಶ್ರೀ ಬಂಡಿಮಠ ಹಾಡಿದ್ದಾರೆ. ಸಪೋರ್ಟ್ ಧ್ವನಿಯಾಗಿ ರವಿ ಬಸ್ರೂರು, ಸಚಿನ್ ಬಸ್ರೂರು, ಮನೀಷ್ ದಿನಕರ್ ಹಾಡಿದ್ದಾರೆ.
ಇನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ ಹಾಡಿಗೆ ಬಳಸಿರುವ ಚಿತ್ರಗಳು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುತ್ತಿದೆ. ಉಪೇಂದ್ರ ಅವರು ಸಾಮಾನ್ಯನಾಗಿರುವ, ಸೂಟು ಬೂಟು ಧರಿಸಿ ಸ್ಟೈಲಿಷ್ ಆಗಿರುವ ಚಿತ್ರಗಳು, ಉಪೇಂದ್ರ ಮುಂದೆ ಗುಂಪೊಂದು ಮಂಡಿ ಊರುತ್ತಿರುವ ಚಿತ್ರಗಳು ಹೀಗೆ ಕತೆಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

'ಕಬ್ಜ' ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮವು ಹೈದರಾಬಾದ್‌ನಲ್ಲಿ ನಡೆದಿದೆ. ನಿರ್ದೇಶಕ ಎಸ್‌ಎಸ್ ರಾಜಮೌಳಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಆದರೆ ತೆಲುಗಿನ ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ನಿಧನ ಹೊಂದಿದ ಕಾರಣ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. 'RRR' ಸಿನಿಮಾದ ನಿರ್ಮಾಪಕ ದಾನಯ್ಯ, ಜನಪ್ರಿಯ ಡ್ಯಾನ್ಸ್ ಮಾಸ್ಟರ್ ಜಾನಿ ಮಾಸ್ಟರ್, ಯುವನಟ ವಿಶ್ವಕ್ ಸೇನ್ ಸಹ ಅತಿಥಿಯಾಗಿ ಆಗಮಿಸಿ ಉಪೇಂದ್ರ ಅವರನ್ನು ಹೊಗಳಿದ್ದಲ್ಲದೆ, ಸಿನಿಮಾಕ್ಕೆ ಶುಭಾಶಯ ಕೋರಿದರು.
ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾವು ಗ್ಯಾಂಗ್‌ಸ್ಟರ್ ಕತೆಯನ್ನು ಹೊಂದಿದ್ದು, ಸಿನಿಮಾದ ಕತೆಯು 80 ರ ದಶಕದಲ್ಲಿ ನಡೆಯಲಿದೆ. ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ನಟ ಸುದೀಪ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಶ್ರಿಯಾ ಶರಣ್ ನಾಯಕಿ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 17 ರಂದು ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











