Kabzaa Audio Launch : 'ಕಬ್ಜ' ಆಡಿಯೋ ಲಾಂಚ್ ಈವೆಂಟ್ ಹೈಲೆಟ್ಸ್: ಅದ್ಧೂರಿ ವೇದಿಕೆಯಲ್ಲಿ ಉಪ್ಪಿ- ಶಿವಣ್ಣ ಹಂಗಾಮಾ
ಶಿಡ್ಲಘಟ್ಟದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಚಿತ್ರತಂಡಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಸಚಿವರಾದ ಡಾ. ಸುಧಾಕರ್, ಕಾಂಗ್ರೆಸ್ ನಾಯಕ ಹೆಚ್. ಎಂ ರೇವಣ್ಣ ಸಾಥ್ ನೀಡಿದರು. ಶಿಡ್ಲಘಟ್ಟದ ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಐವತ್ತು ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿ ಆದರು.
ಅದ್ಧೂರಿ ಕಾರ್ಯಕ್ರಮದಲ್ಲಿ 'ಕಬ್ಜ' ಚಿತ್ರದ 3ನೇ ಹಾಡನ್ನು ಬಿಡುಗಡೆ ಮಾಡಲಾಯಿತು. 'ಚುಮು ಚುಮು ಚಳಿ' ಸ್ಪೆಷಲ್ ಸಾಂಗ್ ಅನ್ನು ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ದಂಪತಿ ಬಿಡುಗಡೆ ಮಾಡಿದರು. ಈ ಐಟಂ ಸಾಂಗ್‌ನಲ್ಲಿ ಉಪೇಂದ್ರ ಜೊತೆ ಬಸಣ್ಣಿ ತಾನ್ಯಾ ಹೋಪ್ ಹೆಜ್ಜೆ ಹಾಕಿದ್ದಾರೆ. ರವಿ ಬಸ್ರೂರು ಟ್ಯೂನ್‌ಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಮೂಡಿ ಬಂದಿದೆ. ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ನಟ ಶಿವರಾಜ್ ಕುಮಾರ್ ಮಾತನಾಡಿ "ಶಿಡ್ಲಘಟ್ಟ ನನಗೆ ಬಹಳ ಪರಿಚಿತ. ಈ ಊರು ರೇಷ್ಮೆಗೆ ಹೆಸರುವಾಸಿ. ನಮ್ಮ ಕಸೀನ್ ಒಬ್ಬರು ಇಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಚೆನ್ನಾಗಿ ಗೊತ್ತು. ಇತ್ತೀಚೆಗೆ ಮೂರ್ನಾಲ್ಕು ಕಾರ್ಯಕ್ರಮಗಳಿಗೆ ಬಂದಿದ್ದೆ. ಆರ್. ಚಂದ್ರು ನಮ್ಮ ಮನೆ ಹುಡುಗ ಅಂದ್ರೆ ತಪ್ಪಲ್ಲ. ಉಪೇಂದ್ರ ಅಂದು 'ಓಂ' ಸಿನಿಮಾ ಮಾಡದೇ ಇದ್ದಿದ್ದರೆ ಭಾರತೀಯ ಚಿತ್ರರಂಗದಲ್ಲಿ ಅಂಡರ್ ವರ್ಲ್ಡ್ ಸಿನಿಮಾ ಬರ್ತಿರ್ಲಿಲ್ಲ."
"ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ಇನ್ನು ನಮ್ಮ ಚಂದ್ರು ಎಮೋಷನ್ ಇರುವ ಕಥೆಯನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಶ್ರಿಯಾ ಶರಣ್ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗೌತಮಿ ಪುತ್ರ ಶಾತಕರ್ಣಿ' ಚಿತ್ರದಲ್ಲಿ ಅವರು ನಟಿಸಿದ್ದರು. ನಾನು ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದೆ. ಈ ವೇದಿಕೆಯಲ್ಲಿ ಇರುವವೆರೆಲ್ಲಾ ನಮಗೆ ಗೊತ್ತಿರುವವರು. ಗೀತಾಗೆ ಕಾಲು ನೋವು ಇದ್ರು ಚಂದ್ರುಗಾಗಿ ಉಪೇಂದ್ರಗಾಗಿ ನಾವು ಬಂದಿದ್ದೇವೆ. ಕಬ್ಜ ಚಿತ್ರಕ್ಕೆ ಒಳ್ಳೆಯದಾಗಲಿ" ಎಂದರು.

ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ "ಶಿಡ್ಲಘಟ್ಟದ ಜನರನ್ನು ನೋಡಿ ಖುಷಿ ಆಯಿತು. ಈ ಸಿನಿಮಾದಿಂದ ಚಂದ್ರು ನಿಮ್ಮೆಲ್ಲರ ಮನಸ್ಸನ್ನು ಕಬ್ಜ ಮಾಡುತ್ತಾರೆ. ಎಲ್ಲರೂ ಈ ಸಿನಿಮಾ ನೋಡಿ ಎಂದರು. ಶಿವಣ್ಣನಿಗೆ ನಾನು ಮತ್ತೆ ಒಂದು ಸಿನಿಮಾ ಮಾಡೇ ಮಾಡ್ತೀನಿ. ನಿರ್ಮಾಪಕರು ಗೀತಕ್ಕ ಇಲ್ಲೇ ಇದ್ದಾರೆ. ಗೀತಕ್ಕ ಕೂಡ ನಮ್ಮ ಕಂಪನಿಯಲ್ಲಿ ಸಿನಿಮಾ ಮಾಡಿ ಅಂತ ಹೇಳಿದ್ದಾರೆ. ನಾನು ಈಗಾಗಲೇ ಒಂದು ಅವಕಾಶ ಕಳ್ಕೊಂಡಿದ್ದೀನಿ."
"ನಾನು ಅಪ್ಪು ಸರ್‌ಗೆ ಸಿನಿಮಾ ಡೈರೆಕ್ಷನ್ ಮಾಡೋಕೆ ಆಗಲಿಲ್ಲ.ಆದರೆ ಶಿವಣ್ಣ ಅವರಲ್ಲಿ ಅಪ್ಪು ಅವರ ಎಲ್ಲಾ ಹೋಲಿಕೆ ಇದೆ. ಆದಷ್ಟು ಬೇಗ ಶಿವಣ್ಣನ ಸಿನಿಮಾ ಡೈರೆಕ್ಷನ್ ಮಾಡ್ತಿನಿ. ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲರೂ ಸಿನಿಮಾ ನೋಡಿ" ಎಂದು ಉಪೇಂದ್ರ ಹೇಳಿದ್ದಾರೆ. ಇನ್ನು ವೇದಿಕೆಯಲ್ಲೇ ಉಪ್ಪಿ ಆಕ್ಷನ್ ಕಟ್ ಹೇಳಿದರು. ಶಿವಣ್ಣ ನಿರ್ದೇಶಕ ಆರ್. ಚಂದ್ರು ಅವರನ್ನೇ 'ಓಂ' ನಾಯಕಿ ಎನ್ನುವಂತೆ ಹಿಡಿದುಕೊಂಡು ಡೈಲಾಗ್ ಹೇಳಿದರು.
ಇನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಾಕಷ್ಟು ಜನ ವಿಭಿನ್ನ ಪರ್ಫಾರ್ಮೆನ್ಸ್ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು. ಇನ್ನು ತೆಲುಗು ನಟ ಪವನ್ ಕಲ್ಯಾಣ್ 'ಕಬ್ಜ' ಶುಭ ಹಾರೈಕೆಯ ಪೋಸ್ಟ್ ಅನ್ನು ಕೂಡ ಪ್ರದರ್ಶಿಸಲಾಯಿತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ 'ಕಬ್ಜ' ಸಿನಿಮಾ ಮೂಡಿ ಬರ್ತಿದೆ. ಈ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಕಿಚ್ಚ ಸುದೀಪ್ ಕೂಡ ನಟಿಸಿದ್ದಾರೆ. ಕಾರಣಾಂತರಗಳಿಂದ ಅವರು ಇಂದಿನ ಕಾರ್ಯಕ್ರಮಕ್ಕೆ ಭಾಗಿ ಆಗಲಿಲ್ಲ.


Click it and Unblock the Notifications











