'ವರಾಹ ರೂಪಂ' ವಿವಾದ: ರಿಷಬ್ ಶೆಟ್ಟಿ, ಕಿರಗಂದೂರುಗೆ ಜಾಮೀನು, ಹಾಡು ಮತ್ತೆ ಕಟ್!?
'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ವಿವಾದಕ್ಕೆ ಸಿಲುಕಿದ್ದು ಹಳೆಯ ಸುದ್ದಿ. ಪ್ರಕರಣದಲ್ಲಿ 'ಕಾಂತಾರ' ತಂಡದ ಮೇಲುಗೈ ಆಗಿದೆ ಎಂಬ ಸುದ್ದಿಯೂ ನಡುವೆಯೊಮ್ಮೆ ಹೊರಬಿದ್ದಿತ್ತು. ಆದರೆ ಈಗ ಕೇರಳದ ಹೈಕೋರ್ಟ್‌ನಿಂದ ಹೊಸದೊಂದು ಆದೇಶ ಹೊರಬಿದ್ದಿದ್ದು, ವಿವಾದದಲ್ಲಿ ಆರೋಪಿಗಳಾಗಿರುವ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಥೈಕ್ಕುಡಂ ಬ್ರಿಡ್ಜ್ ಹೆಸರಿನ ತಂಡವೊಂದು ಮಾಡಿದ್ದ 'ನವರಸಂ' ಆಲ್ಬಂನ ಹಾಡಿನ ಸಂಗೀತ ಕದ್ದು 'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ಮಾಡಲಾಗಿದೆ ಎಂದು ಸ್ವತಃ ಥೈಕ್ಕುಡಂ ಬ್ರಿಡ್ಜ್‌ನವರು ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಪ್ರಕರಣವು ತುಸು 'ಕಾಂತಾರ' ತಂಡದ ಪರವಾಗಿಯೇ ಆಗಿತ್ತು. ಆ ನಂತರ ಆ ಹಾಡಿನ ಹಕ್ಕು ಹೊಂದಿದ್ದ ಮಾತೃಭೂಮಿ ಪ್ರಿಂಟರ್ಸ್ ಹಾಗೂ ಥೈಕ್ಕುಡಂ ಬ್ರಿಡ್ಜ್‌ನವರು ಕೇರಳ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.
ಹಕ್ಕು ಸ್ವಾಮ್ಯ ಕಾಯ್ದೆ ಉಲ್ಲಂಘಿಸಿರುವ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಬಂಧಿಸುವಂತೆಯೂ ಒತ್ತಾಯಿಸಲಾಗಿತ್ತು. ಆದರೆ ಇದೀಗ ಪ್ರಕರಣದ ಆರೋಪಿಗಳಾದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಕೇರಳ ಹೈಕೋರ್ಟ್, ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.

ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಮೂರ್ತಿ ಬಾದುರುದೀನ್, ''ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ಅಥವಾ ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತಾಗಿ ಸ್ಪಷ್ಟ ತೀರ್ಪು ಬಂದು ಅದನ್ನು ಸಿವಿಲ್ ನ್ಯಾಯಾಲಯವು ಅಂಗೀಕರಿಸುವವರೆಗೆ ಚಿತ್ರದಲ್ಲಿನ ವರಹರೂಪಂ' ಹಾಡು, ಸಂಗೀತದೊಂದಿಗೆ ಕಾಂತಾರ' ಚಲನಚಿತ್ರವನ್ನು ಪ್ರದರ್ಶಿಸಬಾರದು'' ಎಂದಿದ್ದಾರೆ.
ಕೇರಳ ನ್ಯಾಯಾಲಯದ ಆದೇಶದ ಮೇರೆಗೆ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ 'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ಮತ್ತೆ ತೆಗೆಯಲಾಗುತ್ತದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಎದ್ದಿದೆ.
ನಿರೀಕ್ಷಣಾ ಜಾಮೀನು ಮಂಜೂರು ವೇಳೆ ಹೊರಡಿಸಿರುವ ಆದೇಶದಲ್ಲಿ, ''ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣವು ಯಾರ ವ್ಯಾಪ್ತಿಗೆ ಬರುತ್ತಿದೆ, ಎಲ್ಲಿ ವಿಚಾರಣೆಗೆ ಒಳಪಡಬೇಕು ಎಂಬುದನ್ನು ಹೈಕೋರ್ಟ್ ಇನ್ನೂ ತೀರ್ಮಾನ ಮಾಡಬೇಕಾಗಿದೆ ಆದ್ದರಿಂದ ಹಾಗೂ ಆವರೆಗೆ ಎರಡೂ ಪಕ್ಷಗಳ ಹಿತರಕ್ಷಣೆ ಮಾಡುವ ಉದ್ದೇಶದಿಂದ ನಿರೀಕ್ಷಣಾ ಜಾಮೀನು ನೀಡಲಾಗಿದೆ'' ಎಂದಿದ್ದಾರೆ ನ್ಯಾಯಮೂರ್ತಿಗಳು.
'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು ಥೈಕ್ಕುಡಂ ಬ್ರಿಡ್ಜ್‌ನ 'ನವರಸಂ' ಆಲ್ಬಂನ ಹಾಡಿನಂತೆಯೇ ಇದೆ. ಜಿಲ್ಲಾ ನ್ಯಾಯಾಲಯಗಳಲ್ಲಿ 'ಕಾಂತಾರ' ತಂಡವು ಒಂದು ಹಂತದ ಹೋರಾಟ ಮಾಡಿ ಮುನ್ನಡೆ ಸಾಧಿಸಿತ್ತು, ಆದರೆ ಇದೀಗ ಕೇರಳ ಹೈಕೋರ್ಟ್ ಹಾಡನ್ನು ಬಳಸಲಾರದು ಎಂದು ಆದೇಶ ನೀಡಿದೆ. 'ಕಾಂತಾರ' ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.


Click it and Unblock the Notifications











