ಮದುವೆ ಕನಸು ಬಿಚ್ಚಿಟ್ಟ ವಿಜಯ್ ದೇವರಕೊಂಡ: ಉದಾಹರಣೆ ಸಮೇತ ವಿವರಿಸಿದ ರೌಡಿ ಬಾಯ್
'ಲೈಗರ್' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಸದ್ಯ ಸಮಂತಾ ಜೊತೆ 'ಖುಷಿ' ಚಿತ್ರದಲ್ಲಿ ರೌಡಿ ಬಾಯ್ ನಟಿಸಿದ್ದು ಚಿತ್ರದ ಹಾಡುಗಳು ಒಂದೊಂದಾಗಿ ರಿಲೀಸ್ ಆಗುತ್ತಿದೆ. ಇದೀಗ ಚಿತ್ರದ 2ನೇ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದೆ. ಶಿವ ನಿರ್ವಾಣ್ ನಿರ್ದೇಶನದ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಮ್ಯೂಸಿಕ್ ನೀಡಿದ್ದಾರೆ.
ಸದ್ಯ ಸಿದ್ದ್ ಶ್ರೀರಾಮ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿರುವ ಚಿತ್ರದ 'ಆರಾಧ್ಯಾ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಹೊಸದಾಗಿ ಮದುವೆಯಾದ ನವಜೋಡಿಯ ಪ್ರೀತಿ, ಪ್ರೇಮ, ಸರಸ ಸಲ್ಲಾಪವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರು ಲಿರಿಕ್ಸ್ ಬರೆದಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಖುಷಿ' ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡದಲ್ಲಿ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಇನ್ನು 'ಆರಾಧ್ಯಾ' ಸಾಂಗ್ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿ ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ಹಾಡಿನ ಸನ್ನಿವೇಶ, ಸಾಹಿತ್ಯ, ಸಂಗೀತದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊಸದಾಗಿ ಮದುವೆಯಾದ ನವ ಜೋಡಿಯ ಮೊದಲ ಒಂದು ವರ್ಷ ನಡೆಯುವ ಸರಸ, ತುಂಟಾಟ, ರೊಮ್ಯಾನ್ಸ್ ಅನ್ನು ಹಾಡಿನಲ್ಲಿ ಇದೆ. "ನಾನು ಮದುವೆ ಆದರೆ ನನ್ನ ವೈವಾಹಿಕ ಜೀವನ ಹೀಗೆಯೇ ಇರಬೇಕು ಅಂದುಕೊಳ್ಳುತ್ತೇನೆ" ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
ವಿಜಯ್ ಮಾತನಾಡಿ "ನನಗೆ ಇನ್ನು ಮದುವೆ ಆಗಿಲ್ಲ, ಮದುವೆ ಆದರೆ ನನ್ನ ಲೈಫ್ 'ಆರಾಧ್ಯ' ಹಾಡಿನ ತರ ಬಹಳ ಕ್ಯೂಟ್ ಆಗಿ ಇರಬೇಕು" ಎಂದಿದ್ದಾರೆ. ಅಷ್ಟೇ ಅಲ್ಲ "ನನಗೆ ಇನ್ನು ಮದುವೆ ಆಗದೇ ಇರಬಹುದು, ಆದರೆ ಈ ಹಾಡಿನಲ್ಲಿ ತೋರಿಸಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂತದ್ದು. ನಿಜ ಹೇಳಬೇಕು ಅಂದರೆ ನಾನು ಅನುಭವಿಸಿರುವ ದೃಶ್ಯಗಳನ್ನೆಲ್ಲಾ ಸೇರಿಸಿ 'ಆರಾಧ್ಯಾ' ಹಾಡು ಮಾಡಲಾಗಿದೆ" ಎಂದು ಹೇಳಿದ್ದಾರೆ. ಅಯ್ಯೋ ಮದುವೆನೇ ಆಗ್ದೇ ಮದುವೆ ನಂತರ ಕಥೆ ನಡೆಯೋಕೆ ಹೇಗೆ ಸಾಧ್ಯ ಎಂದು ಕೆಲವರು ಕೇಳುತ್ತಿದ್ದಾರೆ.
ಮಯೋಸೈಟಿಸ್ ಸಮಸ್ಯೆಯಿಂದ ಚೇತರಿಸಿಕೊಂಡು ಈ ಚಿತ್ರದಲ್ಲಿ ಸಮಂತಾ ನಟಿಸಿದ್ದಾರೆ. ಶೂಟಿಂಗ್ ನಡುವೆಯೇ ಆಕೆಗೆ ಗಂಭೀರ ಸಮಸ್ಯೆ ಇರುವುದು ಗೊತ್ತಾಗಿತ್ತು. ನಂತರ ಶೂಟಿಂಗ್ ನಿಲ್ಲಿಸಿ ಚಿಕಿತ್ಸೆ ಪಡೆದು ವಿಶ್ರಾಂತಿ ತೆಗೆದುಕೊಂಡಿದ್ದರು. ಹೊಸದಾಗಿ ಮದುವೆಯಾದ ನವಜೋಡಿ ಜೀವನದಲ್ಲಿ ಏನೆಲ್ಲಾ ಆಗುತ್ತದೆ? ಕೆಲ ಭಿನ್ನಾಭಿಪ್ರಾಯಗಳಿಂದ ಸಂಸಾರ ನೌಕೆ ಅಲುಗಾಡುವುದು, ಅದನ್ನು ಇಬ್ಬರು ಹೇಗೆ ಸರಿಪಡಿಸಿಕೊಳ್ಳುತ್ತಾರೆ ಎನ್ನುವುದು 'ಖುಷಿ' ಸಿನಿಮಾ ಕಥೆ.
'ಲೈಗರ್' ಸಿನಿಮಾದಲ್ಲಿ ಮಾಸ್ ಹೀರೊ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲು ವಿಜಯ್ ದೇವರಕೊಂಡ ಪ್ರಯತ್ನಿಸಿದ್ದರು. ಆದರೆ ಸಿನಿಮಾ ಮಾತ್ರ ಹೀನಾಯವಾಗಿ ಸೋಲುಂಡಿತ್ತು. ಇದೀಗ ಒಂದು ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಮೂಲಕ ವಿಜಯ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರಲಿದೆ. ಈ ಬಾರಿ ವಿಜಯ್‌ಗೆ ಸ್ಯಾಮ್ ಸಾಥ್ ಕೂಡ ಸಿಕ್ಕಿದೆ. ಸೆಪ್ಟೆಂಬರ್ 1ಕ್ಕೆ 'ಖುಷಿ' ಸಿನಿಮಾ ತೆರೆಗಪ್ಪಳಿಸಲಿದೆ.
ನಟಿ ಸಮಂತಾ ಪರಿಸ್ಥಿತಿ ಕೂಡ ಇದೇ ರೀತಿ ಇದೆ. ಆಕೆ ಲೀಡ್ ರೋಲ್‌ನಲ್ಲಿ ನಟಿಸಿದ್ದ ಐತಿಹಾಸಿಕ ಸಿನಿಮಾ 'ಶಾಕುಂತಲಂ' ಅಟ್ಟರ್ ಫ್ಲಾಪ್ ಆಗಿತ್ತು. ಇನ್ನು ಮಯೋಸೈಟಿಸ್ ಸಮಸ್ಯೆಯಿಂದ ಆಕೆಯ ಕರಿಯರ್ ಮುಗಿಯೇ ಹೋಯಿತು ಎನ್ನುವ ಅರ್ಥದಲ್ಲಿ ಕೆಲವರು ಮಾತನಾಡಿದ್ದರು. ಅದಕ್ಕೆಲ್ಲಾ ಉತ್ತರ ಕೊಡಲು 'ಖುಷಿ' ಚಿತ್ರದಲ್ಲಿ ಆರಾಧ್ಯ ಆಗಿ ಸ್ಯಾಮ್ ಬರ್ತಿದ್ದಾರೆ.


Click it and Unblock the Notifications











