Naanu Nandini: ನಿಂತ್ರು ಕುಂತ್ರು ನಂದಿನಿ ಗುಂಗು: ಫುಲ್ ಟ್ರೆಂಡಿಂಗು.. ದಾಖಲೆ ಬರೆದ 'ವಿಕ್ಕಿ'ಪಿಡಿಯ ಸಾಂಗು
ಸೋಶಿಯಲ್ ಮೀಡಿಯಾದಲ್ಲಿ ಯಾವ ಫೋಟೊ, ಯಾವ ವಿಡಿಯೋ ಯಾವಾಗ ಟ್ರೆಂಡ್ ಕ್ರಿಯೇಟ್ ಮಾಡುತ್ತೋ ಹೇಳೋಕ್ಕಾಗಲ್ಲ. ಸದ್ಯ ಕರ್ನಾಟಕದ ಮಟ್ಟಿಗೆ ನಂದಿನಿ ಕ್ರೇಜ್ ಜೋರಾಗಿದೆ. ಇದು 'ಬಂಧನ' ನಂದಿನಿ ಅಲ್ಲ, 'ಮುಂಗಾರುಮಳೆ' ನಂದಿನಿ ಅಂತೂ ಮೊದ್ಲೇ ಅಲ್ಲ. ಒಟ್ನಲ್ಲಿ ನೆಟ್ಟಿಗರು 'ನಾನು ನಂದಿನಿ' ಎಂದು ಗುನುಗುತ್ತಿದ್ದಾರೆ.
ತಮ್ಮ ವಿಭಿನ್ನ ಕಾಮಿಡಿ ವಿಡಿಯೋಗಳಿಂದ ವಿಡಿಯೋ ಕ್ರಿಯೇಟರ್ ವಿಕಾಸ್ (ವಿಕ್ಕಿ ಪಿಡಿಯ)ನೆಟ್ಟಿಗರ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಕೆಲವೇ ಕ್ಷಣಗಳ ಸಣ್ಣ ವಿಡಿಯೋ ಮೂಲಕ ನಗಿಸಿ ಕೆಲವೊಮ್ಮೆ ಒಳ್ಳೆ ಸಂದೇಶವನ್ನು ಕೊಡುತ್ತಾ ಬರ್ತಿದ್ದಾರೆ. ವಿಕ್ಕಿ ಮಾಡಿರೋ ಹೊಸ ವಿಡಿಯೋ "ನಾನು ನಂದಿನಿ ಬೆಂಗಳೂರಿಗ್ ಬಂದಿನಿ" ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

'I am barbie girl' ಇಂಗ್ಲೀಷ್ ಟ್ಯೂನ್‌ಗೆ ಐಟಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಹುಡುಗಿಯರ ಗೋಳನ್ನು ಹಾಸ್ಯ ರೂಪದಲ್ಲಿ ಹಾಡು ಬರೆದು ಹಾಡಿದ್ದಾರೆ. ಜೊತೆಗೆ ತಾವೇ ಹುಡುಗಿಯ ಗೆಟಪ್‌ನಲ್ಲಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನೋಡ ನೋಡುತ್ತಲೇ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಎರಡೇ ದಿನದಲ್ಲಿ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 13 ಮಿಲಿಯನ್‌ಗೂ ಹೆಚ್ಚು ವೀವ್ಸ್, 1 ಮಿಲಿಯನ್ ಲೈಕ್ಸ್ ಸಾಧಿಸಿದೆ.
"ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ, ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ, ಅಂದ್ರೂನೂ ತಿಂತೀನಿ. ಬಂದಿದ್ ದುಡ್ಡ್ ಎಲ್ಲಾ ಮನೇಗ್ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ" ಹೀಗೆ ಹಾಡು ಮುಂದುವರೆಯುತ್ತದೆ. ಒಮ್ಮೆ ನೋಡಿದವರು ಮತ್ತೆ ವಿಡಿಯೋ ನೋಡುತ್ತಿದ್ದಾರೆ. ಶೇರ್ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲಾ ಕಡೆ ವೈರಲ್ ಆಗ್ತಿದೆ.

ಬಿಗ್ ಬಾಸ್ ಖ್ಯಾತಿಯ ವೈನ್ ಸ್ಟೋರ್ ರಘು, ದಿವ್ಯಾ ಉರುಡುಗ, ನಿರೂಪಕಿ ಅನುಪಮಾ ಗೌಡ, ನಟಿ ಚೈತ್ರಾ ಆಚಾರ್, ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ಈ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನ ಮೀಮ್ಸ್ ಪೇಜ್‌ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿರುವವ ಕೆಲವರು ಈ ಹಾಡುನ್ನು ತಮಗೆ ಕನೆಕ್ಟ್ ಮಾಡಿಕೊಂಡು ನಗುತ್ತಿದ್ದಾರೆ. ಇನ್ನು ನಂದಿನಿ ಹೆಸರಿನ ತಮ್ಮ ಆಪ್ತರಿಗೆ ಶೇರ್ ಮಾಡಿ ಖುಷಿಪಡುತ್ತಿದ್ದಾರೆ.
'ನಾನು ನಂದಿನಿ' ಹಾಡುಗೆ ಕೆಲ ಸಿನಿಮಾ ಗೀತೆಗಳ ತುಣುಕನ್ನು ಎಡಿಟ್ ಮಾಡಿ ಕೆಲವರು ಶೇರ್ ಮಾಡುತ್ತಿದ್ದಾರೆ. ಪೋಷಕರು ಈ ಹಾಡಿಗೆ ತಮ್ಮ ಮಕ್ಕಳ ವಿಡಿಯೋ ತುಣುಕುಗಳನ್ನು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಡುತ್ತಿದ್ದಾರೆ. ಕೆಲ ಹುಡುಗರು ಕೂಡ ವಿಕ್ಕಿ ರೀತಿಯಲ್ಲೇ ಹುಡುಗಿ ವೇಷದಲ್ಲಿ 'ನಾನು ನಂದಿನಿ' ಎಂದು ಹಾಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನು ವಿಕ್ಕಿ 'ನಾನು ನಂದಿನಿ' ಚಾಲೆಂಜ್ ಕೂಡ ಕೊಟ್ಟಿದ್ದಾರೆ. ತಮ್ಮ ರೀತಿಯಲ್ಲೇ ರೀಲ್ಸ್ ಮಾಡಿ #ನಾನುನಂದಿನಿ ಹ್ಯಾಷ್‌ಟ್ಯಾಗ್‌ನಲ್ಲಿ ಹಂಚಿಕೊಳ್ಳುವಂತೆ ಹೇಳಿದ್ದಾರೆ. ಅತ್ಯತ್ತಮ ವಿಡಿಯೋ ಮಾಡುವ ಮೂವರಿಗೆ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು 'ನಾನು ನಂದಿನಿ' ಅಂತ ಮೈಕೈ ಆಡಿಸೋಕೆ ಶುರು ಮಾಡಿದ್ದಾರೆ. ಕಿರುತೆರೆ ನಟಿ ಸಾರಾ ಅಣ್ಣಯ್ಯ 'ಅಮೃತಧಾರೆ' ಧಾರಾವಾಹಿ ಸೆಟ್‌ನಲ್ಲಿ ರೀಲ್ಸ್ ಮಾಡಿದ್ದಾರೆ. ಸಹ ನಟ ಶಶಿಧರ್ ಹೆಗ್ಡೆ ಆಕೆಗೆ ಸಾಥ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಕಂಟೆಂಟ್ ಕ್ರಿಯೇಟರ್ ವಿಕ್ಕಿ ಈ ಹಿಂದೆ ಕೂಡ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಕೆಲ ರಾಜಕಾರಣಿಗಳ ಭಾಷಣದ ವಿಡಿಯೋಗಳನ್ನು ತಮಾಷೆಯಾಗಿ ತಮ್ಮದೇ ಶೈಲಿಯಲ್ಲಿ ಕ್ರಿಯೇಟ್ ಮಾಡಿ ಗಮನ ಸೆಳೆದಿದ್ದರು. ಆದರೆ 'ನಾನು ನಂದಿನಿ' ದಿಢೀರ್ ವೈರಲ್ ಆಗಿದೆ. ಇದೀಗ ಆತನ ಹಳೇ ವಿಡಿಯೋಗಳನ್ನು ಕೂಡ ನೆಟ್ಟಿಗರು ಹುಡುಕಾಡುತ್ತಿದ್ದಾರೆ.


Click it and Unblock the Notifications











