'ಟಾಕ್ಸಿಕ್' ರಾಕಿಂಗ್ ಗ್ಲಿಂಪ್ಸ್‌ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಯಾರು?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿರುವ ಫಸ್ಟ್ ಗ್ಲಿಂಪ್ಸ್. ಬಹಳ ವಿಭಿನ್ನವಾಗಿ ಕಟ್ಟಿಕೊಟ್ಟಿರುವ ಝಲಕ್ ಮೋಡಿ ಮಾಡ್ತಿದೆ. ಕೋಟಿ ಕೋಟಿ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.
ಈ ಹಿಂದೆ ಬಂದಿದ್ದ ಎಲ್ಲಾ ಗ್ಲಿಂಪ್ಸ್‌ಗಳ ದಾಖಲೆ ಹಿಂದಿಕ್ಕಿ 'ಟಾಕ್ಸಿಕ್' ದರ್ಬಾರ್ ಮಾಡ್ತಿದೆ. ಬರೀ ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್‌ನಲ್ಲೇ 5 ಕೋಟಿಗೂ ಅಧಿಲ ವೀವ್ಸ್ ಸಾಧಿಸಿದೆ. ಇನ್ನು ಟ್ವಿಟರ್, ಫೇಸ್ಬುಕ್, ಇನ್‌ಸ್ಟಾಗ್ರಾಮ್ ಎಲ್ಲಾ ಪ್ಲಾಟ್‌ಫಾರ್ಮ್ ಸೇರಿ 48 ಗಂಟೆಗಳಲ್ಲಿ 16 ಕೋಟಿಗೂ ಹೆಚ್ಚು ವೀವ್ಸ್ ಸಿಕ್ಕಿದೆ. 'KGF'-2 ನಂತರ ಮುಂದೇನು ಎಂದು ಕೇಳುತ್ತಿರುವವರಿಗೆ ಸರಿಯಾದ ಜವಾಬು ನೀಡಲು ಯಶ್ ತಯಾರಾಗುತ್ತಿರುವುದು ಗೊತ್ತಾಗುತ್ತಿದೆ.

ಸ್ಯಾಂಡಲ್‌ವುಡ್, ಬಾಲಿವುಡ್ ಅಲ್ಲ ಹಾಲಿವುಡ್ ರೇಂಜ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಬಂದಿರುವ ಗ್ಲಿಂಪ್ಸ್ ಅದನ್ನು ಸಾರಿ ಸಾರಿ ಹೇಳುತ್ತಿದೆ. ಬಹಳ ಸ್ಟೈಲಿಶ್ ಆಗಿ ಅಷ್ಟೇ ರಿಚ್ ಆಗಿ ಚಿತ್ರವನ್ನು ಸೆರೆಹಿಡಿಯಲಾಗುತ್ತಿದೆ. ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಅವತಾರದಲ್ಲೇ ಯಶ್ ಕಾಣಿಸಿಕೊಳ್ಳುತ್ತಿರುವ ಸುಳಿವು ಸಿಗುತ್ತಿದೆ. ಕ್ಲಬ್ ಒಳಗೆ ಯಶ್ ಸ್ಟೈಲಿಶ್ ಆಗಿ ಇಳಿದು ಬರುವ ಸ್ಟೈಲ್ ಅಭಿಮಾನಿಗಳ ದಿಲ್ ಕದ್ದಿದೆ.
'ಟಾಕ್ಸಿಕ್' ಬರ್ತ್‌ಡೇ ಪೀಟ್ ಬಿಜಿಎಂ ಕೂಡ ಗಮನ ಸೆಳೆದಿದೆ. ಬಹಳ ವಿಭಿನ್ನವಾದ ಸೌಂಡ್, ಟ್ಯೂನ್ ಅದರಲ್ಲಿದೆ. ಆದರೆ ಯಾರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಎಂದು ಅಧಿಕೃವಾಗಿ ಚಿತ್ರತಂಡ ಹೇಳಿಲ್ಲ. ಈ ಹಿಂದಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಅದರಲ್ಲಿದ್ದ ಹಿನ್ನಲೆ ಸಂಗೀತ ಕೂಡ ಗಮನ ಸೆಳೆದಿತ್ತು. ಲಂಡನ್ ಮೂಲದ ಜೆರೆಮಿ ಸ್ಟಾಕ್ ಬಿಜಿಎಂ ಕಂಪೋಸ್ ಮಾಡಿದ್ದಾರೆ ಎನ್ನಲಾಗಿತ್ತು.
ಮೊದಲಿನಿಂದಲೂ 'ಟಾಕ್ಸಿಕ್' ಚಿತ್ರದ ಸಂಗೀತ ನಿರ್ದೇಶಕ ಯಾರು ಎನ್ನುವ ಚರ್ಚೆ ನಡೀತಿದೆ. ಮೊದಲಿಗೆ ಚರಣ್ ರಾಜ್ ಹೆಸರು ಕೇಳಿಬಂದಿತ್ತು. ಬಳಿಕ ಜೆರೆಮಿ ಸ್ಟಾಕ್ ಎನ್ನುವ ಗುಸುಗುಸು ಶುರುವಾಯಿತು. ಇಬ್ಬರೂ ಸೇರಿ ಮ್ಯೂಸಿಕ್ ಮಾಡ್ತಾರೆ ಎನ್ನುವ ಊಹಾಪೋಹ ಕೂಡ ಇತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಚಿತ್ರತಂಡ ಕೊಡಲಿಲ್ಲ. ಸದ್ಯ ಯೂಟ್ಯೂಬ್‌ನಲ್ಲಿ ಗ್ಲಿಂಪ್ಸ್ ಬಂದರೂ ಅಲ್ಲಿ ಕೂಡ ನಿರ್ಮಾಪಕರು, ನಿರ್ದೇಶಕರ ಹೆಸರು ಬಿಟ್ಟು ಬೇರೆ ತಂತ್ರಜ್ಞರ ಬಗ್ಗೆ ಮಾಹಿತಿ ಇಲ್ಲ.

ಚರಣ್ ರಾಜ್ ಅಲ್ಲ ಜೆರೆಮಿ ಸ್ಟಾಕ್ ಕೂಡ ಅಲ್ಲ, 'KGF' ಖ್ಯಾತಿಯ ರವಿ ಬಸ್ರೂರು 'ಟಾಕ್ಸಿಕ್' ಗ್ಲಿಂಪ್ಸ್‌ಗೆ ಬಿಜಿಎಂ ಕಂಪೋಸ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಈ ಬಗ್ಗೆ ಕಾಮೆಂಟ್ ಹಾಕುತ್ತಿದ್ದಾರೆ. ರವಿ ಬಸ್ರೂರು ಬಿಜಿಎಂ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರವಿ ಮ್ಯೂಸಿಲ್ ಸದ್ದು ಮಾಡ್ತಿದೆ.
'ಟಾಕ್ಸಿಕ್' ಗ್ಲಿಂಪ್ಸ್ ಹಿನ್ನಲೆ ಸಂಗೀತ ಕೇಳುವುದಕ್ಕೆ ಹೊಸದಾಗಿದೆ. ರವಿ ಬಸ್ರೂರು ಅವರದ್ದು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ ಎನ್ನುವುದು ಕೆಲವರ ವಾದ. ಆದರೆ ಈ ಬಿಜಿಎಂ ಅವರದ್ದೇ ಎಂದು ಹೇಳಲಾಗ್ತಿದೆ. 'ಟಾಕ್ಸಿಕ್' ಚಿತ್ರಕ್ಕಾಗಿ ಹಿಂದಿನ ತಮ್ಮ ಶೈಲಿ ಬಿಟ್ಟು ಹೊಸದಾಗಿ ಟ್ರೈಲ್ ಮಾಡಿದ್ದಾರೆ ಎನ್ನುವುದು ಕೆಲವರ ಲೆಕ್ಕಾಚಾರ. ಒಟ್ಟಾರೆ 'ಟಾಕ್ಸಿಕ್' ಚಿತ್ರಕ್ಕೂ ರವಿ ಟ್ಯೂನ್ ಹಾಕ್ತಾರೆ ಎಂದು ಕೇಳಿ ಸಿನಿರಸಿಕರು ಖುಷಿಯಾಗಿದ್ದಾರೆ.
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ರವಿ ಬಸ್ರೂರು ಸಂಗೀತ ಕೊಂಚ ಹೆಚ್ಚೇ ಸದ್ದು ಮಾಡುತ್ತದೆ. 'ಟಾಕ್ಸಿಕ್' ಚಿತ್ರದಲ್ಲೂ ಅದನ್ನು ನೀರಿಕ್ಷೆ ಮಾಡಬಹುದು ಎಂದು ಚರ್ಚೆ ನಡೀತಿದೆ. ಆದರೆ ಚಿತ್ರದ ಸಂಗೀತ ನಿರ್ದೇಶಕರು ಯಾರು ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.


Click it and Unblock the Notifications











