Year Ender 2024: ಈ ವರ್ಷದ ಟಾಪ್ 10 ಕನ್ನಡ ಸಾಂಗ್ಸ್ ಪಟ್ಟಿ
ಏನೋ ಪ್ಯಾನ್ ಇಂಡಿಯಾ ಟ್ರೆಂಡ್ ಬಂದರೂ ಹಾಡುಗಳಿಲ್ಲದೇ ಭಾರತದ ಸಿನಿಮಾಗಳು ಬರಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆದರೂ ಕೂಡ ಬಹುತೇಕ ಸಿನಿಮಾಗಳಲ್ಲಿ ಹಾಡುಗಳಿರುತ್ತವೆ. ಕೆಲವೊಮ್ಮೆ ಹಾಡುಗಳಿಂದಲೇ ಸಿನಿಮಾ ಗೆದ್ದಿರುವ ಉದಾಹರಣೆಗಳಿವೆ.
ಒಂದು ಚಿತ್ರದಲ್ಲಿ ಹಿಟ್ ಸಾಂಗ್ಸ್ ಮಾಡೋಕೆ ಚಿತ್ರತಂಡ ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಒಳ್ಳೆ ಟ್ಯೂನ್ ಹಾಕಿ, ಕ್ಯಾಚಿ ಲಿರಿಕ್ಸ್ ಬರೆದು ಖ್ಯಾತ ಗಾಯಕರಿಂದ ಹಾಡಿಸುತ್ತಾರೆ. ಇನ್ನು ಬಳಿಕ ದೊಡ್ಡ ದೊಡ್ಡ ಸೆಟ್ ಹಾಕಿ ಅಥವಾ ವಿದೇಶಗಳಲ್ಲಿ ಸಾಂಗ್ ಶೂಟಿಂಗ್ ಮಾಡುತ್ತಾರೆ. ಸ್ಟಾರ್ ಕೊರಿಯೋಗ್ರಫರ್ ನಾಯಕ-ನಾಯಕಿರನ್ನು ಕುಣಿಸುತ್ತಾರೆ. ಟೀಸರ್, ಟ್ರೈಲರ್ ಟ್ರೆಂಡ್ ಶುರುವಾಗುವ ಮುನ್ನ ಬರೀ ಆಡಿಯೋ ಸಾಂಗ್ಸ್ ಕೇಳಿ ಜನ ಥಿಯೇಟರ್‌ಗೆ ಬರುತ್ತಿದ್ದರು.

ಹಾಡುಗಳು ಒಂದು ಚಿತ್ರಕ್ಕೆ ಇನ್ವಿಟೇಷನ್ ಇದ್ದಂತೆ ಎನ್ನುವ ಮಾತು ಇತ್ತು. ಈ ವರ್ಷ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದಿವೆ. ಅಷ್ಟು ಚಿತ್ರಗಳಲ್ಲಿ 500ಕ್ಕೂ ಹೆಚ್ಚು ಸಾಂಗ್ಸ್ ಹೊರ ಬಂದಿವೆ. ಅದರಲ್ಲಿ ಕೆಲವು ಸೂಪರ್ ಹಿಟ್ ಆಗಿದೆ. ಸಿನಿರಸಿಕರು ಪದೇ ಪದೇ ಪ್ಲೇ ಮಾಡಿ ಕೇಳಿ ಖುಷಿಪಟ್ಟಿದ್ದಾರೆ. ಹಿಟ್ ಮಾಡಿದ್ದಾರೆ. ಅಂತಹ ವರ್ಷದ ಟಾಪ್ 10 ಕನ್ನಡ ಹಾಡುಗಳ ಲಿಸ್ಟ್ ಇಲ್ಲಿದೆ.
ಪರಿಚಯವಾದೆ(ಬಘೀರ)
ಡಾ. ಸೂರಿ ನಿರ್ದೇಶನದ 'ಬಘೀರ' ಸಿನಿಮಾ ಈ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶ್ರೀಮುರಳಿ ಜೋಡಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದರು. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳಲ್ಲಿ 'ಪರಿಚಯವಾದೆ' ಮೆಲೋಡಿ ಸಾಂಗ್ ಸಿನಿರಸಿಕರ ಮನಗೆದ್ದಿತ್ತು. ಈ ವರ್ಷದ ಟಾಪ್ 10 ಕನ್ನಡ ಗೀತೆಗಳಲ್ಲಿ ಇದು 10ನೇ ಸ್ಥಾನದಲ್ಲಿದೆ.

ಕಾವಲಿಗ
ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಸಂತೋಷ್ ವೆಂಕಿ ಗಾಯನದಲ್ಲಿ ಬಂದ 'ಕಾವಲಿಗ' ಸಾಂಗ್ ನಿಧಾನವಾಗಿ ಕೇಳಗರ ಮನಸೂರೆಗೊಂಡಿತ್ತು. ಕೊನೆಯಿಂದ ಎರಡನೇ ಸ್ಥಾನದಲ್ಲಿ ಈ ಹಾಡಿದೆ.
ಮಾಯಾವಿ(ಆಲ್ಬಮ್)
ಇತ್ತೀಚೆಗೆ ಬಹಳ ಸದ್ದು ಮಾಡಿದ ಕನ್ನಡ ಆಲ್ಬಮ್ ಸಾಂಗ್ 'ಮಾಯಾವಿ'. ಸಂಚಿತ್ ಹೆಗ್ಡೆ ಕಂಪೋಸ್ ಮಾಡಿ ನಾಗಾರ್ಜುನ ಶರ್ಮಾ ಸಾಹಿತ್ಯ ಈ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಗೌತಮ್ ಹೆಬ್ಬಾರ್, ಸನ್ನಿ ಎಂಆರ್ ಹಾಗೂ ಸಂಜಿತ್ ಹೆಗಡೆ ಈ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದ್ದಾರೆ. ಸಂಗೀತ ಪ್ರೇಮಿಗಳಂತೂ ಪದೇ ಪದೇ ಪ್ಲೇ ಮಾಡಿ ಹಾಡು ಕೇಳುತ್ತಿದ್ದಾರೆ.
ಒಬ್ಬನೇ ಶಿವ(ಯುವ)
ರಾಘಣ್ಣನ ಕಿರಿಮಗ ಯುವರಾಜ್‌ಕುಮಾರ್ ಈ ವರ್ಷಕ್ಕೆ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣದ 'ಯುವ' ಚಿತ್ರಕ್ಕೆ ಸಂತೋಷ್ ಆನಂದರಾಮ್ ಆಕ್ಷನ್ ಕಟ್ ಹೇಳಿದ್ದರು. ಅಜನೀಶ್ ಲೋಕನಾಥ್ ಸಂಗೀತದಲ್ಲಿ 'ಒಬ್ಬನೇ ಶಿವ' ಹಾಡು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹಾಡಿನ ಸಾಹಿತ್ಯ ಕೂಡ ಸೊಗಸಾಗಿತ್ತು.
ಜೀವ ನೀನೆ(ಮಾರ್ಟಿನ್)
ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಬಹಳ ಟೀಕೆಗೆ ಗುರಿಯಾಗಿದ್ದು ಗೊತ್ತೇಯಿದೆ. ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ಮಿಂಚಿದ್ದರು. ಇವರಿಬ್ಬರ ನಡುವಿನ 'ಜೀವ ನೀನೆ' ರೊಮ್ಯಾಂಟಿಕ್ ಸಾಂಗ್ ಹಿಟ್ ಆಗಿತ್ತು. ಮಣಿಶರ್ಮಾ ಸಂಗೀತದ ಹಾಡಿಗೆ ಸ್ವತಃ ನಿರ್ದೇಶಕರು ಸಾಹಿತ್ಯ ಬರೆದಿದ್ದರು. ಸೋನು ನಿಗಮ್ ಹಾಗೂ ಶ್ರುತಿಕ ದನಿಯಾಗಿ ಹಾಡು ಬಹಳ ಇಂಪಾಗಿತ್ತು.
ಡೋಂಟ್‌ವರಿ ಬೇಬಿ(ಭೀಮ)
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ 'ಭೀಮ' ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ. ಚರಣ್‌ರಾಜ್ ಚಿತ್ರಕ್ಕೆ ಮ್ಯೂಸಿಕ್ ಚಿತ್ರಕ್ಕಿತ್ತು. ಸಾಕು ತಂದೆ ಸತ್ತಾಗ ಭೀಮ ಸಾಕು ತಾಯಿಗೆ ಸಮಾಧಾನ ಮಾಡುತ್ತಾ ಹಾಡಿ ಕುಣಿಯುವ ಹಾಡಿದು. ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಟ್ರೋಲ್ ಸಾಂಗ್(UI)
ಬಹುನಿರೀಕ್ಷಿತ 'ಯುಐ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಹಿಟ್ ಲಿಸ್ಟ್ ಸೇರಿದೆ. ಅದರಲ್ಲೂ ಟ್ರೋಲ್ ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ಈ ಹಾಡು ವೈರಲ್ ಆಗಿತ್ತು. ಈ ಹಾಡು ಲಿಸ್ಟ್‌ನಲ್ಲಿ 4ನೇ ಸ್ಥಾನದಲ್ಲಿದೆ.
ನನಗೆ ನೀನು(ಉಪಾಧ್ಯಕ್ಷ)
ಚಿಕ್ಕಣ್ಣ ಹೀರೊ ಆಗಿ ನಟಿಸಿದ ಸಿನಿಮಾ 'ಉಪಾಧ್ಯಕ್ಷ'. ಈ ವರ್ಷ ಗೆಲುವಿನ ದಡ ಸೇರಿದ ಮೊದಲ ಸಿನಿಮಾ ಇದು. ಅರ್ಜುನ್ ಜನ್ಯಾ ಚಿತ್ರಕ್ಕೆ ಟ್ಯೂನ್ ಹಾಕಿದ್ದರು. 'ನನಗೆ ನೀನು ನಿನಗೆ ನಾನು' ಡುಯೆಟ್ ಸಾಂಗ್ ಕೇಳುಗರ ಹೃದಯಕ್ಕೆ ಹತ್ತಿರವಾಗಿತ್ತು.
ಹಿತ್ತಲಕ್ಕೆ(ಕರಟಕ ದಮನಕ)
ಈ ವರ್ಷದ ಟಾಪ್ ಎರಡನೇ ಸ್ಥಾನದಲ್ಲಿ ನಿಲ್ಲುವ ಕನ್ನಡ ಹಾಡು 'ಹಿತ್ತಲಕ್ಕೆ ಕರಿಬ್ಯಾಡ ಮಾವ'. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಸಿನಿಮಾ ಹಿಟ್ ಆಗಲಿಲ್ಲ. ಆದರೆ ಈ ಹಾಡು ಸಖತ್ ಸೌಂಡ್ ಮಾಡಿತ್ತು. ಪ್ರಭುದೇವಾ ಜೊತೆ ಪೈಪೋಟಿಗೆ ಬಿದ್ದು ನಿಶ್ವಿಕಾ ಕುಣಿದಿದ್ದರು. ಇವರಿಬ್ಬರ ಡ್ಯಾನ್ಸ್ ಜುಗಲ್ಬಂದಿ ನೋಡಲು ಪದೇ ಪದೇ ಯೂಟ್ಯೂಬ್‌ನಲ್ಲಿ ಜನ ತಡಕಾಡಿದ್ದರು. 8 ತಿಂಗಳಲ್ಲಿ 80 ಮಿಲಿಯನ್ ವೀವ್ಸ್ ಸಾಧಿಸಿದೆ.
ದ್ವಾಪರ(ಕೃಷ್ಣಂ ಪ್ರಣಯಸಖಿ)
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯಸಖಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೂ ಜನ್ಯಾ ಸಂಗೀತವಿತ್ತು. 'ದ್ವಾಪರ ದಾಟುತ' ಹಾಡು ಹಿಟ್ ಆಗಿ ಚಿತ್ರವನ್ನು ಗೆಲ್ಲಿಸಿತ್ತು. ಇದು 1ನೇ ಸ್ಥಾನದಲ್ಲಿದೆ. ಲಿರಿಕಲ್ ವೀಡಿಯೋ ಹಾಗೂ ವೀಡಿಯೋ ಸಾಂಗ್ ಸೇರಿ ಒಟ್ಟು 81 ಮಿಲಿಯನ್ ವೀವ್ಸ್ ಗಳಿಸಿದೆ.


Click it and Unblock the Notifications











