ತಾಯಿ ಒಡವೆ ಅಡವಿಟ್ಟು ಆಲ್ಬಂ ಸಾಂಗ್ ಮಾಡಿದ ಬೆಂಗಳೂರಿನ ಯುವಕ
ಜೀವನದಲ್ಲಿ ಏನಾದರೂ ಮಾಡಬೇಕು ಅಂದ್ರೆ ಹಠ ಇರಬೇಕು ಅಂತ್ತಾರೆ. ಅದೇ ರೀತಿ ಈ ಹುಡುಗ ತನ್ನ ಪ್ರತಿಭೆಯನ್ನು ಜನರಿಗೆ ತೋರಿಸಲು ಪಣ ತೊಟ್ಟು ನಿಂತಿದ್ದಾನೆ.
ಪುನೀತ್ ವಿ ಬೆಂಗಳೂರಿನ ಹುಡುಗ. ಒಂದು ಒಳ್ಳೆಯ ಆಲ್ಬಂ ಸಾಂಗ್ ಮಾಡುವುದು ಈತನ ಆಸೆಯಾಗಿತ್ತು. ಪಬ್, ಕ್ಲಬ್, ಎಣ್ಣೆ, ಹೆಂಡ.. ಆಲ್ಬಂ ಹಾಡುಗಳ ನಡುವೆ ಹೆಣ್ಣಿನ ಬಗ್ಗೆ ಹಾಡು ಮಾಡಬೇಕು ಎನ್ನುವ ತಯಾರಿ ಮಾಡಿಕೊಂಡ.
ಪ್ರತಿಭೆ ಇದ್ದರೂ, ಹಣಕಾಸಿನ ಕೊರತೆಯಿಂದ ಹಾಡು ಮಾಡಲು ಆಗುತ್ತಿರಲಿಲ್ಲ. ಆಗ ಹಾಡಿನ ನಿರ್ಮಾಣ ಮಾಡಲು ಯಾರಾದರೂ ಸಿಗುತ್ತಾರೆಯೇ ಎಂದು ತಿಂಗಳುಗಳ ಕಾಲ ಎಲ್ಲ ಕಡೆ ಸುತ್ತಿದ್ದಾನೆ. ಆದರೆ, ಯಾವುದೇ ಫಲ ನೀಡಲಿಲ್ಲ. ಒಂದು ಒಳ್ಳೆಯ ಹಾಡು ಮಾಡಬೇಕು ಎಂದು ಆ ಹುಡುಗ ಪಟ್ಟ ಕಷ್ಟ ಅಷ್ಟಿಟ್ಟಲ್ಲ.

ಎಲ್ಲಿಯೂ ಹಣ ಸಿಗದೆ ಇದ್ದಾಗ ಕೊನೆಗೆ ತನ್ನ ತಾಯಿಯ ಒಡವೆಯನ್ನು ಅಡವಿಟ್ಟು ಸ್ಟೂಡಿಯೊ ಬಾಡಿಗೆ ಕಟ್ಟಿ ಹಾಡಿನ ರೆಕಾರ್ಡಿಂಗ್ ಮಾಡಿದ್ದಾನೆ. ಈತನ ಪರಿಸ್ಥಿತಿ ನೋಡಿ ನಂತರ ಆಲ್ಫ್ರೆಡ್ ಬೆಂಜಾಮಿನ್ ಎನ್ನುವವರು ಆಲ್ಬಂ ಹಾಡನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. ಅವರ ಸಹಾಯದಿಂದ ತಾಯಿಯ ಒಡವೆ ಬಿಡಿಸಿ ಕೊಟ್ಟಿದ್ದಾನೆ.
ಒಂದು ಒಳ್ಳೆಯ ಸಂದೇಶದ ಹಾಡು ಮಾಡಿದ್ದರೂ, ಯೂ ಟ್ಯೂಬ್ ನಲ್ಲಿ ಹಾಡು ಹೆಚ್ಚು ಜನರನ್ನು ತಲುಪುತ್ತಿಲ್ಲ. ಆಗ, ಪುನೀತ್ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಜನರಿಗೆ ಹಾಡು ನೋಡಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಎಂದು ಬೇಡಿಕೊಂಡಿದ್ದಾರೆ.

ಪುನೀತ್ ಹಾಡಿನ ಹೆಸರು ಯೋಧೆ. ತುಂಬ ಕಷ್ಟಪಟ್ಟು ಹೆಣ್ಣಿನ ಬಗ್ಗೆ ಈ ಆಲ್ಬಂ ಹಾಡನ್ನು ಮಾಡಿದ್ದಾರೆ. ಈ ಹಾಡು ಹೆಣ್ಣಿನ ಕಷ್ಟಗಳನ್ನು, ಭ್ರೂಣ ಹತ್ಯೆ ಬಗ್ಗೆ ಹೇಳುತ್ತಿದೆ. ಬರೀ ಯೂ ಟ್ಯೂಬ್ ನೋಡಿ ಸಂಗೀತ ಕಲಿತು ಈ ಹಾಡನ್ನು ಪುನೀತ್ ಮಾಡಿದ್ದಾರೆ.
ಹಾಡಿನ ಸಾಹಿತ್ಯ, ಹಾಗೂ ಕಾನ್ಸೆಪ್ಟ್ ಪುನೀತ್ ಮತ್ತು ವಂದನ ಸೇರಿ ಮಾಡಿದ್ದಾರೆ. ಹಾಡಿನ ಸಂಗೀತ ಪುನೀತ್ ನೀಡಿದ್ದಾರೆ. ಅಕಾಂಕ್ಷ ಬಿಶ್ಟ್ ಸಹ ಹಾಡಿಗೆ ಧ್ವನಿಯಾಗಿದ್ದಾರೆ.


Click it and Unblock the Notifications











