ರೂಪಾ ಅಯ್ಯರ್ ಚಿತ್ರದಲ್ಲಿ ರಮ್ಯಾ ಪ್ರೇಮ್ ಜೋಡಿ
'ಮುಖಪುಟ'ದಂತಹ ವಿಭಿನ್ನ ಚಿತ್ರ ನಿರ್ದೇಶಿಸಿದ್ದ ರೂಪಾ ಅಯ್ಯರ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಚಂದ್ರ'. ಮುಖ್ಯ ಭೂಮಿಕೆಯಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಅಭಿನಯಿಸಲಿದ್ದಾರೆ.
ಈಗಾಗಲೆ ರೂಪಾ ಅಯ್ಯರ್ ಅವರು ರಮ್ಯಾ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದಕ್ಕೆ ರಮ್ಯಾ ಕೂಡಾ ಒಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಅಧಿಕೃತ ವರದಿಯಷ್ಟೇ ಹೊರಬೀಳಬೇಕಾಗಿದೆ. ಫೆಬ್ರವರಿ 2012ಕ್ಕೆ ರಮ್ಯಾ ಡೇಟ್ಸ್ ಕೊಟ್ಟಿದ್ದಾರೆ ಎನ್ನುತ್ತವೆ ಮೂಲಗಳು.
'ಜೊತೆಗಾರ' ಹಾಗೂ 'ಜೊತೆ ಜೊತೆಯಲಿ' ಚಿತ್ರದ ಬಳಿಕ ರಮ್ಯಾ ಹಾಗೂ ಪ್ರೇಮ್ ಮತ್ತೆ ಒಂದಾಗುತ್ತಿದ್ದಾರೆ. ಇಷ್ಟಕ್ಕೂ ಚಿತ್ರದ ಕತೆ ಏನೆಂದರೆ, ತಿರುವಾಂಕೂರು ರಾಜ ಕುಟುಂಬದ ಕತೆ. ರಾಯಲ್ ಫ್ಯಾಮಿಲಿಯ ಸಂಬಂಧಗಳು, ಅವರು ಹೆಚ್ಚಾಗಿ ವಿದೇಶಿಯರನ್ನೇ ವರಿಸುತ್ತಿರುವುದು. ಹೀಗೆ ಒಂದಷ್ಟು ಸಂಶೋಧನೆ ಮಾಡಿರುವ ರೂಪಾ ಅವರು ಪಕ್ಕಾ ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಇದೊಂದು ಸಾಂಪ್ರದಾಯಿಕ ಪ್ರೇಮಕಥಾನಕ. ಚಿತ್ರದ ಕತೆ ಕೇಳಿರುವ ರಮ್ಯಾ ಕೂಡಲೆ ಒಪ್ಪಿಗೆ ಸೂಚಿಸಿದರಂತೆ. ರೂಪಾ ಅಯ್ಯರ್ ನಿರ್ದೇಶನದ ಚಿತ್ರ ಎಂದರೆ ನಿರೀಕ್ಷೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿವೆ. ಅವರ 'ಮುಖಪುಟ' ಚಿತ್ರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ 'ಚಂದ್ರ' ಚಿತ್ರದ ಬಗ್ಗೆಯೂ ಅದೇ ರೀತಿಯ ನಿರೀಕ್ಷೆಗಳಿವೆ. (ಏಜೆನ್ಸೀಸ್)


Click it and Unblock the Notifications