ಸ್ಯಾಂಡಲ್‌ವುಡ್ 2008 ಗೋಚಾರಫಲ

ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ:
ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ.
ಶಿವರಾಜ್‌ಕುಮಾರ್: ಸತ್ಯ ಇನ್ ಲವ್, ಗಂಡನ ಮನೆ, ಬಂಧು-ಬಳಗ, ಮಾದೇಶ ಹಾಗೂ ಪರಮೇಶ ಪಾನ್‌ವಾಲಾ- ಒಟ್ಟು ಐದು ಸಿನಿಮಾ ತೆರೆಕಂಡರೂ ಯಾವುದರಲ್ಲೂ ಪೂರ್ಣ ಬಂಡವಾಳ ವಾಪಸ್ ಬಂದಿಲ್ಲ.
ರವಿಚಂದ್ರನ್: ನೀ ಟಾಟಾ ನಾ ಬಿರ್ಲಾ ಬಂದಷ್ಟೇ ವೇಗವಾಗಿ ಚಿತ್ರಮಂದಿರಗಳಿಂದ ಕಾಣೆಯಾಯಿತು. ಮಂಜಿನ ಹನಿ ಕಥೆ ಏನಾಯಿತೋ ಸ್ವತಃ ರವಿಚಂದ್ರನ್‌ಗೇ ಗೊತ್ತಿದ್ದಂತಿಲ್ಲ.
ಜಗ್ಗೇಶ್: ರಾಜಕೀಯದಲ್ಲಿ ಸಿನಿಮಾವೋ, ಸಿನಿಮಾದಲ್ಲಿ ರಾಜಕಾರಣವೊ ಅಯೋಮಯ ಪರಿಸ್ಥಿತಿ. ನೀ ಟಾಟಾ ನಾ ಬಿರ್ಲಾ ಹಾಗೂ ಕೋಡಗನಾ ಕೋಳಿ ನುಂಗಿತ್ತಾ ಎರಡೂ ಬರಕತ್ತಾಗಲಿಲ್ಲ.
ಉಪೇಂದ್ರ: ಬುದ್ಧಿವಂತನ ಮೂಲಕ ಮತ್ತೆ ಉಪೇಂದ್ರ ಫಾರ್ಮ್ ಕಂಡುಕೊಂಡಿದ್ದಾರೆ. ಈ ಫಾರ್ಮ್ ಎಷ್ಟು ದಿನ ಮುಂದುವರಿಯುತ್ತೋ ಗೊತ್ತಿಲ್ಲ.
ಸುದೀಪ್-ದರ್ಶನ್ ಹೊಳಪು

ಕ್ಷೀಣಿಸಿದ ಗಲಾಟೆ
ಗಣೇಶನ ಗಲಾಟೆ ಕಡಿಮೆಯಾದದ್ದು 2008ರ ಪ್ರಮುಖ ಘಟನೆಗಳಲ್ಲೊಂದು. ಗಾಳಿಪಟದ ಯಶಸ್ಸು ಯೋಗರಾಜ ಭಟ್ಟರಿಗೆ ನೀಡುವುದಾದರೆ, ಉಳಿದಂತೆ ಗಣೇಶ್ ಅಕೌಂಟಿನಲ್ಲಿ ಉಳಿಯುವುದು ಸೋಲಿನ ಸರಪಳಿ. ಅರಮನೆ ಚೆನ್ನಾಗಿದ್ದರೂ ಪ್ರೇಕ್ಷಕ ಮೆಚ್ಚಲಿಲ್ಲ. ಬೊಂಬಾಟ್, ಸಂಗಮ ಚಿತ್ರಗಳು ಪ್ರೇಕ್ಷಕರ ಸಾರಾಸಗಟು ತಿರಸ್ಕಾರಕ್ಕೆ ಒಳಗಾಗಿವೆ. ಗಣೇಶ್ ಜೊತೆಗೇ ಮಿಂಚಿದ್ದ ವಿಜಯ್‌ರ ಅವ್ವ, ಸ್ಲಂಬಾಲ ತೆರೆಕಂಡರೂ ನಾಯಕನಿಗೆ ವಿಜಯ ತರಲಿಲ್ಲ.
ಪ್ರಶಾಂತ್, ಯೋಗೀಶ ವರ್ಷದ ಗಮನಾರ್ಹ ಮುಖಗಳು. ಪ್ರಜ್ವಲ್, ವಿಜಯ ರಾಘವೇಂದ್ರ, ಶ್ರೀಮುರಳಿ ಯಶಸ್ಸಿನ ಹುಡುಕಾಟ ಮುಂದುವರೆದಿದೆ. ಕೋಮಲ್ ನಗೆನಾಯಕನಾಗಿ ಮಿ. ಗರಗಸದ ಮೂಲಕ ನೆಲೆ ಕಂಡುಕೊಂಡಿದ್ದು ವರ್ಷದ ಮತ್ತೊಂದು ವಿಶೇಷ. ತಾಜ್‌ಮಹಲ್ ಚಿತ್ರ ಗೆಲ್ಲುವ ಮೂಲಕ ಆ ಚಿತ್ರದ ಅಜಯ್ ಮತ್ತೊಂದಷ್ಟು ಅವಕಾಶ ಗಿಟ್ಟಿಸಿದ್ದಾರೆ.
ಈಗ ಪುನೀತ್ ವಿಷಯಕ್ಕೆ ಬರೋಣ. ಬಿಂದಾಸ್ ಹಾಗೂ ವಂಶಿ ಚಿತ್ರಗಳು ಅಪಾರ ನಿರೀಕ್ಷೆ ಮೂಡಿಸಿದರೂ ಆ ನಿರೀಕ್ಷೆ ದೊಡ್ಡ ಗೆಲುವಾಗಿ ಪರಿವರ್ತನೆಗೊಳ್ಳಲಿಲ್ಲ.
ಆಟಕ್ಕುಂಟು ಲೆಕ್ಕಕ್ಕಿಲ್ಲದ ನಾಯಕಿಯರು

ಸಂಪ್ರದಾಯದಂತೆ ಪರಭಾಷಾ ಸುಂದರಿಯರ ಮೆರವಣಿಗೆ ಮುಂದುವರಿದಿದೆ. ಮುಂಚೂಣಿಯಲ್ಲಿ ಪೂಜಾ ಗಾಂಧಿ ಇದ್ದಾರೆ. ಜೆನಿಲಿಯಾ, ಹನ್ಸಿಕಾ ಮೋಟ್ವಾನಿ, ಬಿಯಾಂಕಾ ದೇಸಾಯಿ, ಅಂಕಿತಾ ಅವರಲ್ಲಿ ಎದ್ದುಕಾಣುತ್ತಾರೆ.


Click it and Unblock the Notifications











