»   » ತಮಿಳಿನ 'ಕುಸೇಲನ್' ಕನ್ನಡಕ್ಕೆ ರೀಮೇಕ್?

ತಮಿಳಿನ 'ಕುಸೇಲನ್' ಕನ್ನಡಕ್ಕೆ ರೀಮೇಕ್?

Subscribe to Filmibeat Kannada

ನಿರ್ದೇಶಕ ರಮೇಶ್ ಅರವಿಂದ್ ತಮಿಳಿನ 'ಕುಸೇಲನ್' ಚಿತ್ರವನ್ನು ಕನ್ನಡಕ್ಕೆ ತರಲು ನಿರ್ಮಾಪಕರನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಮಾತುಕತೆ ನಡೆಯುತ್ತಿದೆ ಇನ್ನೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ತಮಿಳಿನ ಕುಸೇಲನ್ ಚಿತ್ರವನ್ನು ಸೆವೆನ್ ಆರ್ಟ್ಸ್ ಎಂಬ ಸಂಸ್ಥೆ ನಿರ್ಮಿಸಿದೆ. ರಜನಿಕಾಂತ್ ನಟನೆಯ ಈ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ.

ಇದೇ ಕಥೆ ಮೊದಲು ಮಲೆಯಾಳಂನಲ್ಲಿ ಸಿನಿಮಾ ಆಗಿ ಯಶಸ್ವಿಯೂ ಆಯ್ತು. ಅಲ್ಲಿಂದ ನೇರವಾಗಿ ತಮಿಳಿಗೆ ರೀಮೇಕ್ ಆಗಿ ಈಗ ಕನ್ನಡಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ. ಮಮ್ಮುಟ್ಟಿ ಹಾಗೂ ಶ್ರೀನಿವಾಸನ್ ನಟಿಸಿದ್ದ್ದ ಮಲೆಯಾಳಂನ 'ಕಥಾ ಪರೆಯಂಬೋಲ್" ಹಾಗೂ ರಜನಿಕಾಂತ್ ಹಾಗೂ ಪಶುಪತಿ ನಟಿಸಿರುವ ತಮಿಳಿನ 'ಕುಸೇಲನ್' ಎರಡೂ ಚಿತ್ರಗಳ ಕಥೆ ಒಂದೆ. ಈಗ ಇದೇ ಚಿತ್ರ ಕನ್ನಡಕ್ಕೆ ಬರಲಿದೆ. ಗೋಲ್ಡನ್ ಸ್ಟಾರ್ ಗಣೇಶ್‌ ಹಾಗೂ ಹಾಸ್ಯ ನಟ ಕೋಮಲ್‌ ಗೆಳೆಯರಾಗಿ ನಟಿಸುವ ಸಾಧ್ಯತೆಗಳಿವೆ. ಕೋಮಲ್ ಕಾಲ್ ಶೀಟ್ ಸಿಗದಿದ್ದರೆ ರಮೇಶ್ ಅವರೆ ಕ್ಷೌರಿಕನ ಪಾತ್ರ ನಿರ್ವಹಿಸಲಿದ್ದಾರಂತೆ.

ಮಹಾಭಾರತದ ಶ್ರೀ ಕೃಷ್ಣ ರಾಜನಾಗಿರುತ್ತಾನೆ. ಆದರೆ ತನ್ನ ಬಾಲ್ಯದ ಸ್ನೇಹಿತ ಕುಚೇಲನನ್ನು ಮರೆತಿರಲ್ಲ. ಕುಚೇಲನನ್ನು ಬಡತನ ಕಾಡುತ್ತಿರುತ್ತದೆ. ತನ್ನ ಹೆಂಡತಿಯ ಒತ್ತಾಯಕ್ಕೆ ಮಣಿದು ರಾಜನಾದ ಶ್ರೀ ಕೃಷ್ಣನ ಸಹಾಯ ಯಾಚಿಸಲು ಬರುತ್ತಾನೆ. ಆದರೆ ಗೆಳೆಯನಲ್ಲಿ ಸಹಾಯ ಯಾಚಿಸಲು ಸ್ವಾಭಿಮಾನ ಅಡ್ಡಬರುತ್ತದೆ. ತನ್ನ ಗೆಳೆಯ ಬಾಲ್ಯದಲ್ಲಿ ಇಷ್ಟಪಡುತ್ತಿದ್ದ ಒಣ ಅವಲಕ್ಕಿಯನ್ನು ಕಟ್ಟಿಕೊಂಡು ಬಂದಿರುತ್ತಾನೆ. ಗೆಳೆಯನ ವೈಭೋಗ ಕಂಡು ಅವಲಕ್ಕಿ ಕೊಡಲು ಆತನಿಗೆ ಸಂಕೋಚವಾಗುತ್ತದೆ. ಆದರೆ ಕೃಷ್ಣ ಅದನ್ನು ಬಿಡದೆ ಕುಚೇಲನಿಂದ ಕಸಿದುಕೊಂಡು ತನ್ನ ಹೆಂಡತಿಯೊಂದಿಗೆ ಹಂಚಿಕೊಂಡು ತಿಂದು ಖುಷಿಪಡುತ್ತಾನೆ. ಕುಚೇಲನಿಗೆ ಆದರ, ಆತಿಥ್ಯ ಮಾಡಿ ಕಳುಹಿಸುತ್ತಾನೆ. ಕುಚೇಲ ಏನನ್ನೂ ಕೇಳದೆ ಮನೆಗೆ ವಾಪಸ್ಸಾಗುತ್ತಾನೆ. ಮನೆಗೆ ಬಂದು ನೋಡಿದಾಗ ತನ್ನ ಗುಡಿಸಿಲಿನ ಪಕ್ಕ ಅರಮನೆ ಎದ್ದು ನಿಂತಿರುತ್ತದೆ. ಶ್ರೀ ಕೃಷ್ಣ ಅರಮನೆ ಕಟ್ಟಿಸಿ ಕೊಟ್ಟಿರುತ್ತಾನೆ. ಹಾಗೆಯೇ ತನ್ನ ಗೆಳೆಯನ ಪ್ರೀತಿಯ ಸಂಕೇತವಾದ ಹಳೆ ಗುಡಿಸಲನ್ನೂ ಉಳಿಸಿರುತ್ತಾನೆ. ಇದು ಮಹಾಭಾರತದ ಮನ ಮಿಡಿಯುವ ಕಥೆ.

ಇದೇ ಕಥೆಯನ್ನು ಒಂಚೂರು ಬದಲಾಯಿಸಿ ತಮಿಳಿನಲ್ಲಿ 'ಕುಸೇಲನ್' ಚಿತ್ರವನ್ನು ನಿರ್ಮಿಸಿದ್ದಾರೆ. ಹಣ, ಅಂತಸ್ತು, ಐಶ್ವರ್ಯ ಬಂದರೂ ಬದಲಾಗದ ಗೆಳೆಯನೊಬ್ಬನ ಕಥೆ. ಬಾಲ್ಯದ ಗೆಳೆಯರಿಬ್ಬರಲ್ಲಿ ಒಬ್ಬ ಸೂಪರ್ ಸ್ಟಾರ್ ಆಗುತ್ತಾನೆ. ಮತ್ತೊಬ್ಬ ಆತನ ಗೆಳೆಯ ಕ್ಷೌರಿಕ. ಬಹಳ ವರ್ಷಗಳ ನಂತರ ಅವರಿಬ್ಬರೂ ಭೇಟಿಯಾಗುತ್ತಾರೆ. ಆದರೆ ತನ್ನ ಬಾಲ್ಯದ ಗೆಳೆಯನನ್ನು ಸೂಪರ್ ಸ್ಟಾರ್ ಮರೆತಿರುವುದಿಲ್ಲ. ಆತನಿಗೆ ಸಹಾಯ ಮಾಡುತ್ತಾನೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada