ತೆರೆಯ ಮೇಲೆ ಚಿರಂಜೀವಿ ಮತ್ತೆ ತಿಲ್ಲಾನ ತಿಲ್ಲಾನ
ಅಮಿತಾಬ್ ಬಚ್ಚನ್ ಅವರ ಸಲಹೆ ಮೇರೆಗೆ ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ(55) ಮತ್ತೆ ಅಭಿನಯಿಸುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಅವರು ಚಿತ್ರರಂಗಕ್ಕೆ ನಿವೃತ್ತಿ ಪ್ರಕಟಿಸಿದ್ದರು. ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ಚಿತ್ರಗಳಲ್ಲಿ ಅಭಿನಯಿಸುವುದು ಕಷ್ಟವಾಗುತ್ತದೆ ಎಂದು ಚಿರು ಹೇಳಿದ್ದರು.
ಆದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರರಂಗವನ್ನಿ ನೀವು ತ್ವರೆಯಬಾರದು ಎಂದು ವಿನಂತಿಸಿಕೊಂಡರು. ಅವರ ಮಾತಿಗೆ ಬೆಲೆ ಕೊಟ್ಟು ಈಗ ಮತ್ತೆ ಬಣ್ಣ ಹಚ್ಚಿಕೊಳ್ಳುವುದಾಗಿ ಚಿರಂಜೀವಿ ಹೇಳಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸಲಿರುವ 150ನೇ ಚಿತ್ರದಲ್ಲಿ ಅಭಿನಯಿಸುವುದಾಗಿ ಚಿರಂಜೀವಿ ಇಂದು ಪ್ರಕಟಿಸಿದರು.
ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿರುವ 'ಬುಡ್ಡಾ ಹೋಗಯಾ ತೇರಾ ಬಾಪ್' ಚಿತ್ರದ ಪ್ರೀಮಿಯರ್ ಪ್ರದರ್ಶನಲ್ಲಿ ಮಾತನಾಡುತ್ತಿದ್ದರು. ಚಿರಂಜೀವಿ ಅಭಿನಯಿಸಲಿರುವ ಮುಂದಿನ ಚಿತ್ರದಲ್ಲಿ ಅಮಿತಾಬ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅದೇ ವೇದಿಕೆಯಲ್ಲಿದ್ದ ಮತ್ತೊಬ್ಬ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡುತ್ತಾ, ಚಿರಂಜೀವಿ ಎಸ್ ಎಂದರೆ ಅವರ 151ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ಚಿರಂಜೀವಿ ಮುಗುಳ್ನಕ್ಕರು.
"ನನ್ನ ಮುಂದಿನ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸಲಿದ್ದಾರೆ. ನಾನು ಮತ್ತೆ ಅಭಿನಯಕ್ಕೆ ಮರಳುತ್ತಿದ್ದೇನೆ" ಎಂದು ಹೇಳುತ್ತಿದ್ದಂತೆ ಚಿರಂಜೀವಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ವಿಶೇಷ ಅಂದರೆ ಚಿರು 150ನೇ ಚಿತ್ರವನ್ನು ಅವರ ಮಗ ರಾಮ್ ಚರಣ್ ತೇಜ ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











