ತಮಿಳು ಚಿತ್ರರಂಗದ ಕದತಟ್ಟಿದ ನೀನಾಸಂ ಅಶ್ವತ್ಥ್
ತಮ್ಮ ವಿಭಿನ್ನ ಅಭಿನಯದ ಮೂಲಕ ಗಮನಸೆಳೆದ ಅಪ್ಪಟ ಕಲಾವಿದ ನೀನಾಸಂ ಅಶ್ವತ್ಥ್. ಕನ್ನಡದಲ್ಲಿ ತಮಗೆ ಸರಿಯಾಗಿ ಅವಕಾಶಗಳೇ ಸಿಗುತ್ತಿಲ್ಲ ಎಂದು ನೀನಾಸಂ ಅಶ್ವತ್ಥ್ ಒಮ್ಮೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಸ್ವಲ್ಪ ದಿನ ಕಾಯುತ್ತೇನೆ, ಪರಿಸ್ಥಿತಿ ಹೀಗೆ ಮುಂದುವರಿದರೆ ತಾವು ಪರಭಾಷಾಗೆ ಹೋಗುವುದಾಗಿ ತಿಳಿಸಿದ್ದರು.
ಈಗ ಅವರ ಮಾತು ನಿಜವಾಗಿದೆ. ನೀನಾಸಂ ಅಶ್ವತ್ಥ್ ಪಕ್ಕದ ಮನೆ ಕದ ತಟ್ಟಿದ್ದಾರೆ. ತಮಿಳು ಚಿತ್ರರಂಗ ಅವರನ್ನು ಅಪ್ಪಿಕೊಂಡಿದೆ. ಕಿಶೋರ್, ಸುದೀಪ್, ಅಚ್ಯುತ್ ಕುಮಾರ್, ಅವಿನಾಶ್ ಈಗಾಗಲೆ ಅನ್ಯಭಾಷೆಯ ಚಿತ್ರಗಳಲ್ಲಿ 'ಸೈ' ಎನ್ನಿಸಿಕೊಂಡ ನಟರು. ಈಗ ಇವರ ಸಾಲಿಗೆ ನೀನಾಸಂ ಅಶ್ವತ್ಥ್ ಸಹ ಸೇರ್ಪಡೆಯಾಗಿದ್ದಾರೆ.
ಪ್ರಶಾಂತ್ ನಿರ್ದೇಶನದ'ಉಂಗೂ ವೀಡ ತಂಬಿ' (ತುಂಬಿದ ಮನೆಯ ತಮ್ಮ) ಎಂಬ ಚಿತ್ರದಲ್ಲಿ ನೀನಾಸಂ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಮ್ಮದು ದೊಡ್ದ ಪಾತ್ರ ಅಲ್ಲದಿದ್ದರೂ ತಕ್ಕಮಟ್ಟಿಗೆ ಗುರುತಿಸಿಕೊಳ್ಳುವ ಪಾತ್ರ. ಇದು ತಮ್ಮ ಚೊಚ್ಚಲ ತಮಿಳು ಚಿತ್ರ. ಅಲ್ಲಿನ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುವ ಪಾತ್ರ. ಈ ಪಾತ್ರ ನನಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ ನೀನಾಸಂ.
ಏತನ್ಮಧ್ಯೆ ಅಶ್ವತ್ಥ್ ಅವರಿಗೆ ಮತ್ತೊಂದು ದೊಡ್ಡ ಬ್ಯಾನರಿನ ತಮಿಳು ಚಿತ್ರವೊಂದು ಹುಡುಕಿಕೊಂಡು ಬಂದಿದೆ. ಇನ್ನೂ ಹೆಸರಿಡ ಈ ಚಿತ್ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಅಶ್ವತ್ಥ್ ಕನ್ನಡದ ಶಿಕಾರಿ, ವಿಷ್ಣುವರ್ಧನ, ಸನಿಹ ಹಾಗೂ ಕೇಳದೆ ನಿಮಗೀಗ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಯಾರಿಗೆ ಗೊತ್ತು ಅಶ್ವತ್ಥ್ ಮುಂದೊಂದು ದಿನ ಪ್ರಕಾಶ್ ರೈಆಗಲೂ ಬಹುದು.


Click it and Unblock the Notifications











