»   » ರಾಜಕೀಯದ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಹೇಳಿದ್ದೇನು?

ರಾಜಕೀಯದ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಹೇಳಿದ್ದೇನು?

Posted By:
Subscribe to Filmibeat Kannada

ಹಿರಣ್ಣಯ್ಯ ಹೇಳಿದ್ದು
ಮಾಸ್ಟರ್ ಹಿರಣ್ಣಯ್ಯ ಅವರೇ ಒಂಥರಾ. ಅವರ ಸ್ಟೈಲೇ ಇನ್ನೊಂಥರಾ. ಏನೇ ಆದರೂ ಅವರ ಹುಮ್ಮಸ್ಸಿಗೆ ಹುಬ್ಬೇರಿಸಲೇಬೇಕು. ಆರೋಗ್ಯ ಸರಿ ಇಲ್ಲದಿದ್ದರೂ ಆ ಬಗ್ಗೆ ಅವರು ಡೋಂಟ್ ಕೇರ್. ಈಗಲೂ ಕುಂತಲ್ಲಿ ಕೂರುವವರು ಅವರಲ್ಲ. ಏನಿದ್ದರೂ ಕೆಲಸ; ಅದರ ಜತೆಗೆ ಮತ್ತೊಂದಿಷ್ಟು ಮಾತು. ಅಲ್ಲ ಅಲ್ಲ, ಮಾತೆಂಬ ಮಾಣಿಕ್ಯ. ಅವರೇನೇ ಆಡಿದರೂ ಅಲ್ಲಿ ಪನ್ ಇರುತ್ತೆ, ಪಂಚ್ ಇರುತ್ತೆ. ನಿಂತ ನೀರಂತೂ ಅಲ್ಲವೇ ಅಲ್ಲ. ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಾರೆ. ಯಾರಾದ್ರೂ 'ಅಪ್ಪಾಜಿ ನಮ್ ಸಿನಿಮಾದಲ್ಲಿ ನಟಿಸಿ ಪ್ಲೀಸ್' ಎಂದು ಕೇಳಿಕೊಂಡರೆ ಅದಕ್ಕೂ ಹೂಂ...(ಗಜ ಚಿತ್ರದಲ್ಲಿ ನಟಿಸುವಂತೆ ದರ್ಶನ್ ಹಾಗೆ ಕೇಳಿಕೊಂಡಿದ್ದರಂತೆ.) ಅವರ ಹುಮ್ಮಸ್ಸಿನ ಮುಂದಿ ಇಂದಿನ ಹುಡುಗರು ಬರೀ ಠುಸ್...

ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಿ ಅಂತ ಆಫರ್ ಬಂದಿತ್ತಾ. ಹೌದು ಎಂದು ತಲೆ ಆಡಿಸುತ್ತಾರೆ ಸ್ವತಃ ಹಿರಣ್ಣಯ್ಯ!

ಅವರ ಈ ಇಳಿ ವಯಸ್ಸಿನ ಸೂಪರ್ ಪವರ್ ನೋಡಿ ಬಿಜೆಪಿ ಮುಖಂಡರು ಮುಗಿಬಿದ್ದಿದ್ದರಂತೆ. ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವರಲ್ಲಿ ದುಂಬಾಲುಬಿದ್ದಿದ್ದರಂತೆ.ಹೇಗಾದರೂ ಮಾಡಿ ಚಂದ್ರಶೇಖರ್ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ಪಾಳಯದವರು ಹಿರಣ್ಣಯ್ಯರ ಹಿಂದೆ ಬಿದ್ದಿದ್ದರಂತೆ.

ಆದರೆ ಹಿರಣ್ಣಯ್ಯ ಅವಕ್ಕೆಲ್ಲ ಜಗ್ಗಲೇ ಇಲ್ಲ. ಬದಲಾಗಿ ಅವರು ಕೊಟ್ಟ ಸಿಂಪಲ್ ಉತ್ತರ ಏನು ಗೊತ್ತಾ?

-'ನಾವೆಲ್ಲ ಎಲೆಕ್ಷನ್‌ಗೆ ನಿಂತರೆ ಏನು ಪ್ರಯೋಜನ. ಒಂದುವೇಳೆ ಗೆದ್ದರೂ ಎಷ್ಟು ವರ್ಷ ಹೋರಾಡಬಲ್ಲೆವು! ಅಮ್ಮಮ್ಮಾ ಎಂದ್ರೆ ನಾಲ್ಕು ವರ್ಷ... ಅಷ್ಟೇ ಆಮೇಲೆ ಹಾಸಿಗೆ ಹಿಡಿಯುತ್ತೇವೆ. ಆ ಸೊಬಗಿಗೆ ಇವೆಲ್ಲ ಯಾಕೆ ಬೇಕು ಹೇಳಿ? ಹಾಗಂತ ನನಗೆ ರಾಜಕೀಯ ಗೊತ್ತಿಲ್ಲ ಅಂತ ಅಲ್ಲ. ನಾನು ಹೆಸರು ಮಾಡಿದ್ದು ಈ ರಾಜಕಾರಣಿಗಳ ಹೆಸರಿನಲ್ಲೇ. ಅವರ ಬದುಕನ್ನೇ ನಾನು ಅನುಕರಣೆ ಮಾಡಿ ಹೆಸರು ಮಾಡಿದೋನು. ಇವತ್ತಿಗೂ ಜನ ನನ್ನನ್ನು ಲಂಚಾವತಾರ ಹಿರಣ್ಣಯ್ಯ ಅಂತಾನೇ. ಹಾಗಂತ ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತ ಹೊರಟ್ರೆ ಜನ ಆಡಿಕೊಂಡು ನಗುತ್ತಾರೆ!'

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada