ಜೋಗಯ್ಯ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ: ರಜನಿ
ಪ್ರೇಮ್ ಒಬ್ಬ ಪ್ರತಿಭಾನ್ವಿತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ನಿರ್ದೇಶಿಸಿದ ಮೊದಲ ಮೂರು ಚಿತ್ರ ( ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ) ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದು ಗೊತ್ತಿರುವ ವಿಚಾರ. ಹೆಚ್ಚಿನ ನಿರ್ಮಾಪಕ/ನಿರ್ದೇಶಕರು ಕನ್ನಡ ಚಿತ್ರಗಳಿಗೆ ಸರಿಯಾದ ಪಬ್ಲಿಸಿಟಿ ನೀಡುತ್ತಿಲ್ಲ ಎನ್ನುವುದು ಒಪ್ಪಿಕೊಳ್ಳುವ ವಿಚಾರ. ಚಿತ್ರದ ಬಗ್ಗೆ ವ್ಯವಸ್ಥಿತ ಪ್ರಚಾರ ಆರೋಗ್ಯಕರ ಆದರೆ ಪ್ರಚಾರಕ್ಕಾಗಿ ಪುಗಸಟ್ಟೆ ಗಿಮಿಕ್ ಎಷ್ಟು ಸರಿಯಲ್ವೇ?
ಪ್ರೇಮ್ ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರ 'ಜೋಗಯ್ಯ' ಧ್ವನಿಸುರುಳಿ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದ್ದಂತೂ ನಿಜ. ಚಿತ್ರದ ಮಹೂರ್ತ ಸಮಾರಂಭಕ್ಕೆ ಬಿಜೆಪಿ ಹಿರಿಯ ನಾಯಕ ಆಡ್ವಾಣಿ, ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಬರಲಿದ್ದಾರೆನ್ನುವ ಸುದ್ದಿ ಬರೀ ಗಿಮಿಕ್ ಆಗಿ ಉಳಿಯಿತು. ಚಿತ್ರದ ಬಗ್ಗೆ ಇತ್ತೇಚಿಗೆ ಹೊರಬಿದ್ದ ಭಾರಿ ಸುದ್ದಿಯೆಂದರೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು.
ದಶಕಗಳ ನಂತರ ರಜನಿಕಾಂತ್ 'ಜೋಗಯ್ಯ' ಚಿತ್ರದ ಮೂಲಕ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರೆನ್ನುವ ವಿಷಯವನ್ನು ಕನ್ನಡ, ತಮಿಳು, ತೆಲುಗು, ಇಂಗ್ಲಿಷ್ ಪ್ರಿಂಟ್ ಮತ್ತು ಅಂತರ್ಜಾಲ ತಾಣಗಳು ಪ್ರಕಟಿಸಿದ್ದೆ ಪ್ರಕಟಿಸಿದ್ದು, ಆದರೆ ಇದೆಲ್ಲಾ ಯಾರೋ ಹಾರಿಸಿದ ಗಾಳಿಪಟ ಎನ್ನುವುದು ಸ್ಪಷ್ಟವಾಗಿದೆ.
"ನಾನು ಜೋಗಯ್ಯ ಚಿತ್ರದಲ್ಲಿ ನಟಿಸುತ್ತೇನೆ ಎನ್ನುವುದು ಬರೀ ರೂಮರ್. ಆ ತರಹದ್ದು ಏನೂ ಇಲ್ಲ" ಎಂದು ಸ್ವತಃ ರಜನೀಕಾಂತ್ ಹೇಳುವ ಮೂಲಕ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಉಪೇಂದ್ರ ಅಭಿನಯದ ಬ್ಲಾಕ್ ಬಸ್ಟರ್ "ಸೂಪರ್" ಚಿತ್ರ ವೀಕ್ಷಿಸಲು ಬಂದಿದ್ದ ರಜನಿ ಈ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಕನ್ನಡ ಚಿತ್ರದಲ್ಲಿ ನಟಿಸುವ ಅಸೆ ಇದೆ. ಒಳ್ಳೆ ಕಥೆ ಬಂದರೆ ಕನ್ನಡದಲ್ಲಿ ನಟಿಸಲು ನಾನು ಯಾವತ್ತಿಗೂ ಸಿದ್ಧ ಎಂದು ರಜನಿ ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. [ಜೋಗಯ್ಯ]


Click it and Unblock the Notifications











