»   » ರಾಜ್ ಹುಟ್ಟುಹಬ್ಬದಂದು ಥಿಯೇಟರುಗಳಲ್ಲಿ ಸತ್ಯ ಹರಿಶ್ಚಂದ್ರ

ರಾಜ್ ಹುಟ್ಟುಹಬ್ಬದಂದು ಥಿಯೇಟರುಗಳಲ್ಲಿ ಸತ್ಯ ಹರಿಶ್ಚಂದ್ರ

Subscribe to Filmibeat Kannada

ಕರ್ನಾಟಕದಲ್ಲಿ ವಿವಿಧ ಹಬ್ಬಹರಿದನಗಳಲ್ಲಿ ಬೀದಿಬೀದಿಗಳಲ್ಲಿ ನಡೆಸುವ ಆರ್ಕೆಸ್ಟ್ರಾಗಳಲ್ಲಿ ಈ ಹಾಡು ಮೊಳಗದಿದ್ದರೆ ನೆರೆದಿದ್ದ ಪ್ರೇಕ್ಷಕರು ಚಿಂದಿ ಉಡಾಯಿಸಿಬಿಡುತ್ತಾರೆ. ಆ ಹಾಡಿನ ಸೆಳೆತವೇ ಅಂತಹುದು. ಡಣ್ಡಡ ಡಣ್ಡಡ ಡಣ್ಡಡ ಡಣ್ ಅಂತ ತಮ್ಮಟೆಯ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಎಂಥದೇ ವಾತಾವರಣದಲ್ಲಿ ಮೈಮೇಲೆ ಚಳಿಯ ಗುಳ್ಳೆಗಳೇಳುತ್ತವೆ. ಹಾಡು ತಂತಾನೇ ಬಾಯಲ್ಲಿ ಗುನುಗುಡಲು ಪ್ರಾರಂಭಿಸುತ್ತದೆ. ಹಾಡು ಮುಗಿಯುತ್ತಿದ್ದಂತೆ ಚಪ್ಪಾಳೆಯ ಬಿರುಮಳೆ. ಮೈಮನದಲ್ಲಿ ರೋಮಾಂಚನವೆಬ್ಬಿಸುವ ಈ ಹಾಡು "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ..."

ನಟಸಾರ್ವಭೌಮ ಡಾ.ರಾಜಕುಮಾರ್ ಅದ್ಭುತ ನಟನೆಯಿದ್ದ 1965ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚಂದ್ರ' ಚಿತ್ರದ ಜಾತಿಮತ ಮೀರಿದ ಈ ಹಾಡನ್ನು ಯಾವ ಕನ್ನಡಿಗ ತಾನೆ ಕೇಳಿಲ್ಲ? ಹುಣಸೂರು ಕೃಷ್ಣಮೂರ್ತಿ ಬರೆದ ಘಂಟಸಾಲ ಅವರ ಕಂಚಿನ ಕಂಠದಲ್ಲಿ ಮೂಡಿಬಂದ ಈ ಹಾಡಿನ ಪರಿಯೇ ಅಂತಹುದು. ರಾಜಕುಮಾರ್, ಪಂಢರಿಬಾಯಿ, ನರಸಿಂಹರಾಜು, ಉದಯಕುಮಾರ್, ಎಂ.ಪಿ.ಶಂಕರ್ ಜೀವಂತಿಕೆಯ ಅಭಿನಯವಿದ್ದ ಈ ಚಿತ್ರವೇ ಚಿತ್ರಮಂದಿಗಳಲ್ಲಿ ಮತ್ತೆ ಜೀವಂತಿಕೆಯನ್ನು ಪಡೆದರೆ?

ಹೌದು, ರಾಜಕುಮಾರ್ ಅವರ ಹುಟ್ಟಿದ ಹಬ್ಬದ ದಿನ ಏಪ್ರಿಲ್ 24ರಂದು ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕದಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿ.ನಾಗಿರೆಡ್ಡಿ ನಿರ್ಮಾಣದ 'ಸತ್ಯ ಹರಿಶ್ಚಂದ್ರ' ಬಿಡುಗಡೆಯಾಗಲಿದೆ. ಕಪ್ಪುಬಿಳುಪಿನ ಜಮಾನಾದಲ್ಲಿ ಚಿತ್ರಿತವಾಗಿದ್ದ ಸತ್ಯ ಹರಿಶ್ಚಂದ್ರ ಡಿಟಿಎಸ್ ಅಳಿವಡಿಸಿಕೊಂಡು, ಸಿನೆಮಾಸ್ಕೋಪ್ ತಂತ್ರಜ್ಞಾನವನ್ನು ಒಗ್ಗಿಸಿಕೊಂಡು ತಾಂತ್ರಿಕ ಶ್ರೀಮಂತಿಕೆಯಿಂದ ಪ್ರತಿ ಫ್ರೇಂನಲ್ಲೂ ಬಣ್ಣಬಣ್ಣಗಳನ್ನು ತುಂಬಿಕೊಂಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ರಾಜ್‌ಕುಮಾರ್ ಅಭಿನಯದ 'ಬಂಗಾರದ ಮನುಷ್ಯ', 'ಬಬ್ರುವಾಹನ', 'ಹುಲಿಯ ಹಾಲಿನ ಮೇವು', 'ಕಸ್ತೂರಿ ನಿವಾಸ', 'ದಾರಿ ತಪ್ಪಿದ ಮಗ' ಮುಂತಾದ ಸುಮಾರು 20 ಚಿತ್ರಗಳನ್ನು ನಿರ್ಮಿಸಿದ ಕೆ.ಸಿ.ಎನ್.ಗೌಡ ಅವರು ಸತ್ಯ ಹರಿಶ್ಚಂದ್ರ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ರೆಡ್ಡಿ ಅವರ ಕನಸು ಕೂಡ ಹೌದು. ಕೆಲ ವರ್ಷಗಳ ಹಿಂದೆ ಕೂಡ ಕಲರ್ ಚಿತ್ರವಾಗಿಯೇ ಸತ್ಯ ಹರಿಶ್ಚಂದ್ರ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿತ್ತು. ಎರಡನೇ ಬಿಡುಗಡೆಯಲ್ಲಿಯೂ ಶತದಿನೋತ್ಸವ ಆಚರಿಸಿದ ಇನ್ನೊಂದು ಚಿತ್ರದ ಉದಾಹರಣೆ ನಿಮಗೆ ಸಿಗಲಿಕ್ಕಿಲ್ಲ. ಸತ್ಯ ಹರಿಶ್ಚಂದ್ರ ಮಾಡಿದ ಮೋಡಿಯೇ ಅಂತಹುದು. ಈಗ ಮತ್ತಷ್ಟು ಉನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನವೀನ ಪ್ರಿಂಟ್ಸ್‌ನಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

ಈ ಬಾರಿ ಸತ್ಯ ಹರಿಶ್ಚಂದ್ರ ಹೊಸ ರೂಪವನ್ನು ಪಡೆದಿದ್ದು ವಿದೇಶದಲ್ಲಿ. ಚಿತ್ರದಲ್ಲಿ ಮೂರು ಲಕ್ಷ ಫ್ರೇಂಗಳಿವೆ. ಪ್ರತಿಯೊಂದು ಫ್ರೇಂನಲ್ಲೂ ಆಯಾ ಸೆಟ್ಟು, ಉಡುಪು, ಆಭರಣ, ದೇಹದ ಬಣ್ಣಗಳಿಗೆ ತಕ್ಕಂತೆ ಬಣ್ಣ ನೀಡುತ್ತ ಹೋಗುವುದು ಅತ್ಯಂತ ಕ್ಲಿಷ್ಟ ಮತ್ತು ಚಾಲೇಂಜಿಂಗ್ ಕೆಲಸವಾಗಿತ್ತು ಎಂದು ಕೆಸಿಎನ್ ಗೌಡರು ಹೇಳಿದ್ದಾರೆ. ಒಟ್ಟು 30-40 ಪ್ರಿಂಟುಗಳನ್ನು ಹಾಕಿಸಲಾಗುತ್ತಿದೆ. ಸ್ಯಾಟಲೈಟ್ ಮೂಲಕವೂ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada