»   » ಇಂದು ಪ್ರೇಮ ಸಿಂಚನದ ಜೊತೆಗೆ ಭಕ್ತಿ ಹೂರಣ

ಇಂದು ಪ್ರೇಮ ಸಿಂಚನದ ಜೊತೆಗೆ ಭಕ್ತಿ ಹೂರಣ

Posted By:
Subscribe to Filmibeat Kannada

ಬೆಂಗಳೂರು, ಫೆ.1: ಬೆಳದಿಂಗಳಾಗಿ ಬಾ, ನವಶಕ್ತಿ ವೈಭವ ಮತ್ತು ಕುಸುಮ ಎಂಬ ಮೂರು ಚಿತ್ರಗಳು ಒಂದೇ ದಿನದಲ್ಲಿ ತೆರೆಕಾಣುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಒಟ್ಟಿಗೆ ಆಗುತ್ತಿರುವ ಮೂರು ಪ್ರಸವಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಾಗಿದೆ.

ಎಂ.ಎಸ್.ರಮೇಶ್ ನಿರ್ದೇಶಿಸುತ್ತಿರುವ, ಬಿ.ವಿ.ಪ್ರಮೋದ್ ನಿರ್ಮಿಸುತ್ತಿರುವ ಚಿತ್ರದಲ್ಲಿ ವಿಜಯ ರಾಘವೇಂದ್ರ ಹಾಗೂ ರಮಣೆತೋ ಚೌಧರಿ ನಟಿಸುತ್ತಿದ್ದಾರೆ. ಯುವಕರು ತೆಗೆದುಕೊಳ್ಳುವ ಆತುರದ ನಿರ್ಧಾರಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ಮಹತ್ವದ ಸಂದೇಶ ಚಿತ್ರದಲ್ಲಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಚಿತ್ರದ ಮತ್ತೊಂದು ವಿಶೇಷ ಸಾಹಿತಿ ಚಂದ್ರಶೇಖರ ಕಂಬಾರರು ಬಣ್ಣಹಚ್ಚಿ ನಾಯಕನ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಚಿತ್ರಕ್ಕೆ ಗುರುಕಿರಣ್‌ರ ಸಂಗೀತವಿದೆ. ದಾಸರಿ ಸೀನು ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಅಂಜುಮಹೇಂದ್ರ, ಶ್ರೀನಿವಾಸ್ ಅವರ ನೃತ್ಯ, ನಂಜುಂಡ ಸ್ವಾಮಿ ಕಲೆ, ರಾಮ್‌ಶೆಟ್ಟಿ ಸಾಹಸ ಚಿತ್ರಕ್ಕಿದೆ. ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ಅವಿನಾಶ್ ಸಹಾ ಇದ್ದಾರೆ.

ಇನ್ನು 'ನವಶಕ್ತಿ ವೈಭವ' ಚಿತ್ರದ ಹೆಸರೇ ಹೇಳುವಂತೆ ಇದೊಂದು ಭಕ್ತಿ ಪ್ರಧಾನ ಚಿತ್ರ. ಕರ್ನಾಟಕದ ಒಂಭತ್ತು ಪುಣ್ಯಕ್ಷೇತ್ರಗಳಲ್ಲಿ ನವಶಕ್ತಿ ವೈಭವವನ್ನು ಚಿತ್ರೀಕರಿಸಿರುವುದು ವಿಶೇಷ. ಚಿತ್ರದ ತಾರಾಗಣದಲ್ಲಿ ನಟಿಮಣಿಯರ ದಂಡೇ ಇದೆ. ಜಯಮಾಲ, ಸುಧಾರಾಣಿ, ಪ್ರೇಮಾ, ಅನುಪ್ರಭಾಕರ್, ವಿಜಯಲಕ್ಷ್ಮಿ, ರಾಧಿಕಾ, ದಾಮಿನಿ, ಖುತಿಕಾ, ರುಚಿತಾಪ್ರಸಾದ್ ದೇವತೆಗಳ ಪಾತ್ರದಲ್ಲಿ ತೆರೆಯ ನವಶಕ್ತಿಗಳಾಗಿ ದರ್ಶನ ನೀಡಲಿದ್ದಾರೆ. ಸುರೇಶ್ ಕುಮಾರ್ ಜೈನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಾಯಿ ಪ್ರಕಾಶ್‌ರ ನಿರ್ದೇಶನವಿದೆ. ಶೃತಿ, ರಾಂಕುಮಾರ್, ವಾಸು ಮುಖ್ಯ ಭೂಮಿಕೆಯಲ್ಲಿದ್ದಾರೆ. ತೆರೆಯ ಹಿಂದಿನ ಕಲಾವಿದರ ಪಟ್ಟಿ ಹೀಗಿದೆ, ಹಂಸಲೇಖಾ ಸಂಗೀತ, ಜೆ.ಕೆ.ಭಾರವಿ ಚಿತ್ರಕಥೆ, ದಾಸರಿ ಸೀನು ಛಾಯಾಗ್ರಹಣ,ಪಿ.ಆರ್.ಸೌಂದರ ರಾಜನ್ ಸಂಕಲನ,ಚಿಂದೋಡಿ ಬಂಗಾರೇಶ್ ಕಥೆ, ರಮೇಶ್ ದೇಸಾಯಿ ಕಲೆ.

'ಕುಸುಮ' ಕೋಮಲ ಹುಡುಗಿಯೊಬ್ಬಳ ಬಾಳಿನಲ್ಲಿ ಸಂಭವಿಸುವ ಆಕಸ್ಮಿಕಗಳನ್ನು ಆಕೆ ಹೇಗೆ ಸಂಭಾಳಿಸುತ್ತಾಳೆ ಎನ್ನುವ ಕಥೆಯನ್ನು 'ಕುಸುಮ' ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ತಾರಾಗಣದಲ್ಲಿ ಅರ್ಜುನ್, ನಿವಾಸ್, ಯಾಮಿನಿ ಶರ್ಮಾ, ಜಯಂತಿ, ಬ್ಯಾಂಕ್ ಜನಾರ್ಧನ್, ಗಿರಿಜಾ ಲೋಕೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪದ್ಮಾ ವಾಸಂತಿ ಇದ್ದಾರೆ. ಸೂಪರ್ ಫಿಲಂಸ್ ಲಾಂಛನದಲ್ಲಿ ನವಾಜ್ ನಿರ್ಮಿಸುತ್ತಿರುವ ಚಿತ್ರಕ್ಕೆ ಪತ್ತಿ ವಿ.ಎಸ್.ಗುರುಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ಕೃಪಾಕರ್ ಸಂಗೀತ ಚಿತ್ರಕ್ಕಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada