ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬಂದಿದೆ ಓಂ!
ಬೆಂಗಳೂರು ಭೂಗತ ಜಗತ್ತನ್ನು ಮೊಟ್ಟ ಮೊದಲ ಬಾರಿಗೆ ತೆರಗೆ ತಂದಂತಹ ಚಿತ್ರ ಓಂ. ಉಪೇಂದ್ರ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯನ ನಟರಾಗಿ ಅಭಿನಯಿಸಿದ್ದರು. ಇಷ್ಟೆಲ್ಲಾ ಪೀಠಿಕೆಗೆ ಕಾರಣ 'ಓಂ' ಚಿತ್ರ ಈಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ತೆರೆಕಾಣುತ್ತಿದೆ.
ಇದೇ ಶುಕ್ರವಾರ (ಸೆ.3) ಬೆಂಗಳೂರಿನ ಅಪರ್ಣ ಮತ್ತು ಉಮಾ(ಚಾಮರಾಜಪೇಟೆ) ಚಿತ್ರಮಂದಿರಗಳಲ್ಲಿ ನಾಲ್ಕು ಪ್ರದರ್ಶನಗಳೊಂದಿಗೆ ಮತ್ತೊಮ್ಮೆ ತೆರೆಕಾಣುತ್ತಿದೆ. 'ಓಂ' ತೆರೆಕಂಡ ಬಳಿಕ ಕನ್ನಡ ಚಿತ್ರರಂಗದಲ್ಲಿ ಲಾಂಗು ಮತ್ತು ಮಚ್ಚು ಭರಾಟೆ ಅಧಿಕವಾಯಿತು ಎಂದೇ ಹೇಳಬೇಕು. ಆದರೆ ಅವುಗಳಲ್ಲಿ ಗೆದ್ದಿದ್ದು ಮಾತ್ರ ಬೆರಳೆಣೆಕೆಯಷ್ಟು ಚಿತ್ರಗಳು ಎಂಬುದು ಕಠೋರ ಸತ್ಯ.
ಈ ಚಿತ್ರದಲ್ಲಿ ಉಪೇಂದ್ರ ಅವರು ರಿಯಲ್ ರೌಡಿಗಳನ್ನು ಬಳಸಿಕೊಂಡಿದ್ದರು. ಕುಖ್ಯಾತ ರೌಡಿಗಳಾದ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಮತ್ತು ತನ್ವೀರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜೈಲಿನಲ್ಲಿದ್ದ ಎಷ್ಟೋ ಮಂದಿ ರೌಡಿಗಳು ಜಾಮೀನ ಮೇಲೆ ಹೊರಬಂದು ಈ ಚಿತ್ರದಲ್ಲಿ ನಟಿಸಿದ್ದು ವಿಶೇಷ. ಹಾಗಾಗಿ 'ಓಂ' ವಿವಾದಾತ್ಮಕ ಚಿತ್ರ ಎನ್ನಿಸಿಕೊಂಡಿತ್ತು.
ಹಂಸಲೇಖ ಸಂಗೀತ ಸಂಯೋಜಿಸಿದ್ದ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು. ಏ ದಿನಕರ... ಹಾಗೂ ಓ ಗುಲಾಬಿಯೆ...ಗಾನಗಂಧರ್ವ ಡಾ.ರಾಜ್ ಕುಮಾರ್ ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು. 1995ರಲ್ಲಿ ತೆರೆಕಂಡಿದ್ದ ಈ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಗೆ ರೀಮೇಕ್ ಆಗಿದೆ. ರಾಮ್ ಗೋಪಾಲ್ ವರ್ಮಾ ಅವರ 'ಸತ್ಯ' ಚಿತ್ರದಲ್ಲಿ ನಮ್ಮ ಕನ್ನಡದ 'ಓಂ' ಚಿತ್ರದ ನೆರಳು ಸಾಕಷ್ಟಿದೆ.


Click it and Unblock the Notifications











