ದೇವರು ಕೊಟ್ಟ ತಂಗಿ ಮೀರಾ ಜಾಸ್ಮಿನ್‌ಗೆ ಕಂಕಣಭಾಗ್ಯ
ನಟಿ ರಾಧಿಕಾ ಅವರ ಅನುಪಸ್ಥಿತಿಯಲ್ಲಿ ಬರಿದಾಗಿದ್ದ ತಂಗಿ ಪಾತ್ರವನ್ನು ಭರ್ತಿ ಮಾಡಿದ ನಟಿ ಮೀರಾ ಜಾಸ್ಮಿನ್.ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ತಂಗಿ ಎನ್ನಬಹುದು. 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್ ಗೆ ಈಗ ಕಂಕಣಭಾಗ್ಯ ಕೂಡಿಬಂದಿದೆ. ಮ್ಯಾಂಡಲಿನ್ ವಾದಕ ಯು ರಾಜೇಶ್ ಅವರ ಕೈಹಿಡಿಯಲಿದ್ದಾರೆ ಮೀರಾ ಜಾಸ್ಮಿನ್.
ಮೀರಾ ಮತ್ತು ಮ್ಯಾಂಡಲಿನ್ ಲೋಲ ರಾಜೇಶ್ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಸ್ವತಃ ಮೀರಾ ಜಾಸ್ಮಿನ್ ಅವರೆ ಸಭೆ ಸಮಾರಂಭಗಳಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚೆಗೆ ರಾಜೇಶ್ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ, ಮೀರಾಳನ್ನು ಕೈಹಿಡಿಯುವುದಾಗಿ ತಿಳಿಸಿದ್ದಾರೆ. ಮದುವೆಯ ಬಳಿಕ ಆಕೆ ಚಿತ್ರಗಳಲ್ಲಿ ನಟಿಸುತ್ತಾರೆಯೇ ಇಲ್ಲವೆ ಎಂಬುದು ಆಕೆಗೆ ಬಿಟ್ಟ ವಿಚಾರ ಎಂದಿದ್ದಾರೆ.
ಇವರಿಬ್ಬರ ಮದುವೆಯನ್ನು ಇನ್ನು ತಡ ಮಾಡುವುದರಲ್ಲಿ ಅರ್ಥವಿಲ್ಲ. ಇವರ ಮದುವೆಗೆ ನಮ್ಮ ಕುಟುಂಬಿಕರು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ ಎಂದು ರಾಜೇಶ್ ಅವರ ಸಹೋದರ ಶ್ರೀನಿವಾಸ್ ತಿಳಿಸಿದ್ದಾರೆ. ಅಂದಹಾಗೆ ರಾಜೇಶ್ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವರು. ಮೀರಾ ಅವರದು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದವರು.
ಮೌರ್ಯ, ದೇವರು ಕೊಟ್ಟ ತಂಗಿ, ಅರಸು, ಹೂ ಮತ್ತು ಇಜ್ಜೋಡು ಚಿತ್ರಗಳಲ್ಲಿ ಮೀರಾ ಜಾಸ್ಮಿನ್ ಅಭಿನಯಿಸಿದ್ದಾರೆ. ಎಂ ಎಸ್ ಸತ್ಯು ನಿರ್ದೇಶನದ 'ಇಜ್ಜೋಡು' ಚಿತ್ರ ಆಕೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಂತಹ ಚಿತ್ರ. ದೇವರು ಕೊಟ್ಟ ತಂಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ತಂಗಿಯಾಗಿ ಸೇರ್ಪಡೆಯಾಗಿದ್ದರು. ಕಾಕತಾಳೀಯ ಎಂಬಂತೆ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಮೀರಾ ಮದುವೆ ಸುದ್ದಿ ಹೊರಬಿದ್ದಿದೆ.


Click it and Unblock the Notifications











