»   » ಉಮಾಶ್ರೀ ಈಗ ಹಾಸ್ಯಮಯೂರಿ

ಉಮಾಶ್ರೀ ಈಗ ಹಾಸ್ಯಮಯೂರಿ

Posted By:
Subscribe to Filmibeat Kannada

ಮೈಸೂರು : ನಿರ್ದೇಶಕ ಪುಟ್ಟಣ್ಣ ಕಣಗಾಲ್‌ನಿಂದ ಅತಿ ಕೆಟ್ಟ ನಟಿ, ನಟನೆಯ ಗಂಧವೇ ಗೊತ್ತಿಲ್ಲ ಎಂದು ಬೈಸಿಕೊಂಡಿದ್ದ ನಟಿಯ ಹೆಸರು- ಉಮಾಶ್ರೀ. ಕಣಗಾಲ್‌ರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ಉಮಾಶ್ರೀ, ಚಿತ್ರರಂಗದಲ್ಲಿ ಎತ್ತರದ ಸ್ಥಾನ ಪಡೆದದ್ದು ಈಗ ಇತಿಹಾಸ. ಇದೇ ಉಮಾಶ್ರೀ ಪ್ರಸ್ತುತ ‘ಹಾಸ್ಯಮಯೂರಿ’ ಎನ್ನುವ ಮನ್ನಣೆಗೆ ಪಾತ್ರರಾಗಿದ್ದಾರೆ.

ರಂಗಭೂಮಿ ಮತ್ತು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ, ಮೈಸೂರಿನ ಲೇಡಿಸ್‌ ವಿಂಗ್‌ ಆಫ್‌ ಟೈಕೂನ್ಸ್‌ ಕ್ಲಬ್‌ ಉಮಾಶ್ರೀ ಅವರಿಗೆ ಇತ್ತೀಚೆಗೆ ‘ಹಾಸ್ಯಮಯೂರಿ’ ಪ್ರಶಸ್ತಿ ನೀಡಿ ಗೌರವಿಸಿತು. ಕ್ಲಬ್‌ನ ಅಧ್ಯಕ್ಷೆ ಶಾರದಾ ಗುಪ್ತ, ಕಾರ್ಯದರ್ಶಿ ಹೇಮಾ ಪ್ರಸನ್ನ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಗೌರವ ಸ್ವೀಕರಿಸಿ ಮಾತನಾಡಿದ ಉಮಾಶ್ರೀ- ಚಿತ್ರಮಂದಿರಕ್ಕೆ ಹೋಗಿ ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡಿ, ಆ ಮೂಲಕ ಕನ್ನಡ ಚಿತ್ರರಂಗ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿ ಎಂದು ಚಿತ್ರರಸಿಕರನ್ನು ಕೋರಿದರು.

ಕಲಾ ಬದುಕು: ಸುಮಾರು 25ವರ್ಷಗಳ ರಂಗಭೂಮಿ ಅನುಭವ ಉಮಾಶ್ರೀ ಅವರನ್ನು ಪಕ್ವವಾಗಿಸಿದೆ. ಎಂತಹ ಪಾತ್ರವಾದರೂ ನೀರು ಕುಡಿದಷ್ಟೇ ಸರಾಗವಾಗಿ ನಿಭಾಯಿಸ ಬಲ್ಲೆ ಎನ್ನುವ ಆತ್ಮವಿಶ್ವಾಸವನ್ನು ತಂದಿದೆ. ಈವರೆಗೆ ರಂಗಭೂಮಿಯ ವೈವಿಧ್ಯಮಯ ಪಾತ್ರಗಳಲ್ಲಿ 6000 ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು.

ಬಿ.ವಿ.ಕಾರಂತರ ಜೋಕುಮಾರಸ್ವಾಮಿ, ತದ್ರೂಪಿ, ಸಿ.ಆರ್‌.ಸಿಂಹರ ತುಘಲಕ್‌, ಮೀಸೆ ಬಂದೋರು ಮತ್ತು ಟಿ.ಎನ್‌.ನಾಗಾಭರಣ ಅವರ ಸಂಗ್ಯಾಬಾಳ್ಯದಲ್ಲಿ ಉಮಾಶ್ರೀ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ಪಾತ್ರಗಳೇ ತಾವಾಗಿ, ತಾವೇ ಪಾತ್ರವಾಗಿ ರಂಗಾಸಕ್ತರ ಮನವನ್ನು ತಟ್ಟಿದ್ದಾರೆ.

ಸುಮಾರು 225 ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ, ಪುಟ್ನಂಜ, ಮೊಮ್ಮಗ ಮತ್ತಿತರ ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಎನ್‌.ಎಸ್‌.ರಾವ್‌, ದಿನೇಶ್‌, ಮೈಸೂರು ಲೋಕೇಶ್‌ ಮತ್ತಿತರರ ಜೋಡಿಯಾಗಿ ಹಾಸ್ಯಪಾತ್ರಗಳಲ್ಲಿ ಮಿಂಚಿದ್ದಾರೆ. ರಾಜ್ಯ ಸರಕಾರ ಉಮಾಶ್ರೀ ಸೇವೆ ಗುರ್ತಿಸಿ ವಿಧಾನ ಪರಿಷತ್ತು ಸದಸ್ಯರನ್ನಾಗಿ ಅವರನ್ನು ನಾಮಕರಣ ಮಾಡಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada