»   » ಶೇಷಾದ್ರಿ ಎಂಬ ಅಸ್ಪೃಶ್ಯ !ಹೊಸ ಅಲೆಯ ಚಿತ್ರ ಮಾಡುವವರ ಕಾಲೆಳೆಯುವ ಜಾಯಮಾನದವರನ್ನು ಶೇಷಾದ್ರಿ ಖಂಡಾತುಂಡಾಗಿ ತರಾಟೆಗೆ ತೆಗೆದುಕೊಳ್ಳಲು ಅವರ ಅನುಭವವೇ ಕಾರಣ.

ಶೇಷಾದ್ರಿ ಎಂಬ ಅಸ್ಪೃಶ್ಯ !ಹೊಸ ಅಲೆಯ ಚಿತ್ರ ಮಾಡುವವರ ಕಾಲೆಳೆಯುವ ಜಾಯಮಾನದವರನ್ನು ಶೇಷಾದ್ರಿ ಖಂಡಾತುಂಡಾಗಿ ತರಾಟೆಗೆ ತೆಗೆದುಕೊಳ್ಳಲು ಅವರ ಅನುಭವವೇ ಕಾರಣ.

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಕನ್ನಡ ಚಿತ್ರ ಕುಟೀರ  --> ವರದಿಮಾರ್ಚ್‌ 01, 2003

ಶೇಷಾದ್ರಿ ಎಂಬ ಅಸ್ಪೃಶ್ಯ !
ಹೊಸ ಅಲೆಯ ಚಿತ್ರ ಮಾಡುವವರ ಕಾಲೆಳೆಯುವ ಜಾಯಮಾನದವರನ್ನು ಶೇಷಾದ್ರಿ ಖಂಡಾತುಂಡಾಗಿ ತರಾಟೆಗೆ ತೆಗೆದುಕೊಳ್ಳಲು ಅವರ ಅನುಭವವೇ ಕಾರಣ.

*ದಟ್ಸ್‌ಕನ್ನಡ ಬ್ಯೂರೋ

ಮೊನ್ನೆ ಈಟಿವಿಯ ರಸಪ್ರಶ್ನೆಯಲ್ಲಿ ‘ಅತಿಥಿ’ ನಿರ್ದೇಶಕರಾರು ಅಂತ ಕೇಳಿದಾಗ ಯಾರೂ ಉತ್ತರ ಹೇಳಲಿಲ್ಲ. ಒಬ್ಬ ಕ್ರಿಯಾಶೀಲ ನಿರ್ದೇಶಕ ಜನರಿಗೆ ಯಾಕೆ ತಲುಪುತ್ತಿಲ್ಲ ? ಇದು ಅವನ ಸೋಲೋ ಅಥವಾ ಅವನ ಮಾಧ್ಯಮದಲ್ಲಿನ ಹುಳುಗಳ ಹುನ್ನಾರವೇ? ಅಥವಾ ಜನರಿಗೆ ಮನರಂಜನೆ ಬಿಟ್ಟು ಬೇರೇನೂ ಬೇಕೇ ಇಲ್ಲವೋ?

ಇಂಥಾ ಪ್ರಶ್ನೆಗಳ ಹಿನ್ನೆಲೆಯಲ್ಲೂ ಅವತ್ತು ಶೇಷಾದ್ರಿಯ ಒಂದು ಹಿಡಿ ಅಭಿಮಾನಿಗಳಿದ್ದರು. ಅವರಲ್ಲಿ ಬಹುತೇಕರು ಕಾಲೇಜು ವಿದ್ಯಾರ್ಥಿಗಳು ಅನ್ನೋದು ಸಂತೋಷದ ವಿಷಯ. ಶೇಷಾದ್ರಿ ಖಿನ್ನರಾಗಿದ್ದರು ಅನ್ನೋದು ದುಃಖದ ವಿಷಯ.

‘ಹೊಸ ಅಲೆಯ ಚಿತ್ರ ನಿರ್ಮಾಪಕರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಹೊಸತು ಬೇಕು ಅನ್ನುವ ಕಲಾರಸಿಕನಿಗೆ ಅದನ್ನು ಕಟ್ಟಿಕೊಡುವ ಒಂದು ಪ್ರಯೋಗಕ್ಕೆ ಈ ಪರಿಯ ನಡಾವಳಿ ಎಡರು. ಇದರಿಂದ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುವ ನನ್ನಂಥವರಿಗೆ ನೋವಾಗಿದೆ’- ಪಿ.ಶೇಷಾದ್ರಿ ದನಿಯಲ್ಲಿ ಅಸಮಾಧಾನ ಮಡುಗಟ್ಟಿತ್ತು.

ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಮೈಸೂರು ಫಿಲ್ಮ್‌ ಅಂಡ್‌ ಕಲ್ಚರಲ್‌ ಸೊಸೈಟಿ ಆಯೋಜಿಸಿದ್ದ 2 ದಿನಗಳ ಅವಧಿಯ ಹೊಸ ಅಲೆ ಕನ್ನಡ ಚಿತ್ರೋತ್ಸವ ‘ಮಾಯಾ- 2003’ನ್ನು ಗುರುವಾರ (ಫೆ.27) ಮೈಸೂರಿನಲ್ಲಿ ಶೇಷಾದ್ರಿ ಉದ್ಘಾಟಿಸಿದರು. ನಂತರ ಮಾತಾಡಲು ಶುರುವಿಟ್ಟಾಗ ಅವರ ಮೊಗದಲ್ಲಿ ನಗು ಇರಲಿಲ್ಲ. ಪ್ರಶಸ್ತಿ ಪಡಕೊಂಡರೂ, ಹೊಸ ಅಲೆಯ ಒಬ್ಬ ನಿರ್ದೇಶಕನ ಪರಿ ಪಾಟಲು ಎಂಥದೆಂಬುದಕ್ಕೆ ಅವರ ಮುಖಭಾವವೇ ಕನ್ನಡಿ ಹಿಡಿದಂತಿತ್ತು.

ಓವರ್‌ ಟು ಶೇಷಾದ್ರಿ...

‘ಚಿತ್ರೋದ್ಯಮವನ್ನು ವೃತ್ತಿಗಿಂತ ಹವ್ಯಾಸವನ್ನಾಗಿಸಿಕೊಂಡಿರುವವರೇ ಹೆಚ್ಚು. ಚಲನಚಿತ್ರ ಮತ್ತು ದೂರದರ್ಶನವನ್ನು ಸೇರಿಸಿಕೊಂಡು, ಅವಕ್ಕೆ ಮಾಡುವ ಕೆಲಸಗಳಿಗೆ ವಾಣಿಜ್ಯದ ಸ್ವರೂಪ ಕೊಡುತ್ತಿದ್ದಾರೆ. ಒಂದು ವಾಣಿಜ್ಯ ಚಿತ್ರ ಯಾವಾಗಲೂ ಕೆಟ್ಟದಾಗಿರುತ್ತದೆ ಅಥವಾ ಒಂದು ಹೊಸ ಅಲೆಯ ಚಿತ್ರ ಯಾವಾಗಲೂ ಒಳ್ಳೆಯದಾಗಿರುತ್ತದೆ ಅನ್ನುವ ಅಭಿಪ್ರಾಯ ತಪ್ಪು. ಇದಕ್ಕೆ ತದ್ವಿರುದ್ಧವಾದ ಎಷ್ಟೋ ಉದಾಹರಣೆಗಳಿವೆ. ಹೀಗಾಗಿ ಹೊಸ ಅಲೆ ಮತ್ತು ವಾಣಿಜ್ಯ ಚಿತ್ರಗಳ ನಡುವಿನ ವಿಂಗಡಣೆಯೇ ಸರಿಯಲ್ಲ.

‘ಇಷ್ಟೆಲ್ಲ ಎಡರುಗಳ ನಡುವೆಯೂ ಹೊಸ ಅಲೆಯ ಚಿತ್ರಗಳನ್ನು ತೆಗೆಯಲು ಈಗ ಮೊದಲಿನಷ್ಟು ಭಯ ಪಡಬೇಕಾಗಿಲ್ಲ. ಛಾತಿ ಇದ್ದು, ಗುರಿ ಇಟ್ಟುಕೊಂಡು ನುಗ್ಗುವವರನ್ನು ಇವತ್ತು ವಿಶ್ವವಿದ್ಯಾಲಯಗಳು ಪ್ರೋತ್ಸಾಹಿಸುತ್ತಿವೆ. ಒಳ್ಳೆಯ ಚಿತ್ರಗಳನ್ನು ತೆಗೆಯುವ ಯಾರೂ ಹೆದರುವ ಅಗತ್ಯವಿಲ್ಲ’.

ಬರುವ ಮಾರ್ಚ್‌ನಲ್ಲಿ ‘ಕೈರೋ’ದಲ್ಲಿ ನಡೆಯುವ ಚಿತ್ರೋತ್ಸವದಲ್ಲಿ 12 ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಈ ಪೈಕಿ ತಮ್ಮ ‘ಅತಿಥಿ’ ಏಕೈಕ ಭಾರತೀಯ ಚಿತ್ರ ಅಂದಾಗ ಶೇಷಾದ್ರಿ ಮೊಗದಲ್ಲಿ ಗೆಲುವಿನ ಕಳೆ ಮತ್ತು ಇನ್ನಷ್ಟು ಒಳ್ಳೆಯ ಚಿತ್ರಗಳ ಹೊಸೆಯುವ ಹುಮ್ಮಸ್ಸು ಇಣುಕಿತು.


ಪೂರಕ ಓದಿಗೆ
ಅತಿಥಿ: ಯಾರೂ ಗೆಲ್ಲದ ಯುದ್ಧ ಏತಕೋ..?
ನುಡಿಯಿಲ್ಲದವರ ಮುನ್ನುಡಿ
ಶೇಷಾದ್ರಿ ಕಂಡಂತೆ ಬೆಂಗಳೂರು...
ಭೇಷ್‌ ಶೇಷಾದ್ರಿ!

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada