»   » ಸ್ಯಾಂಡಲ್‌ವುಡ್‌ನಲ್ಲೀಗ ನವ್ಯಾ ಎಂಬ ತಂಗಾಳಿ!

ಸ್ಯಾಂಡಲ್‌ವುಡ್‌ನಲ್ಲೀಗ ನವ್ಯಾ ಎಂಬ ತಂಗಾಳಿ!

Subscribe to Filmibeat Kannada


ಒಂದು ಆ್ಯಂಗಲ್‌ನಿಂದ ನೋಡಿದರೆ ಛಾಯಾಸಿಂಗ್‌ರಂತೆ, ಇನ್ನೊಂದು ಆ್ಯಂಗಲ್‌ನಿಂದ ನೋಡಿದರೆ ಮೀರಾ ಜಾಸ್ಮಿನ್‌ರಂತೆ ಕಾಣುವ ನವ್ಯಾ ನಾಯರ್‌ ಕನ್ನಡಕ್ಕೆ ಬಂದಿದ್ದಾರೆ!

‘ಗಜ’ ಚಿತ್ರದ ನಾಯಕಿಯಾಗಿ ಈಕೆ ಆಯ್ಕೆಯಾಗಿದ್ದು, ಚಿತ್ರದ ನಾಯಕ ‘ಮಚ್ಚು ಮುಟ್ಟೋದಿಲ್ಲ ’ ಎಂದು ಬೆಚ್ಚಿಬೆಚ್ಚಿ ಹೇಳುವ ದರ್ಶನ್‌!

ಈ ದರ್ಶನ್‌ ಸಿನಿಮಾ ಹೀರೋಹಿನ್‌ಗಳು ಎಂದರೆ ‘ಸುಂಟರಗಾಳಿ’ಯೇ ನೆನಪಾಗುತ್ತದೆ! ಆದರೆ ನವ್ಯಾ ನಾಯರ್‌, ತಂಗಾಳಿ ಅನ್ನೋದು ನಿಮಗೆ ಗೊತ್ತಿರಲಿ! ಮೈಚಳಿಬಿಟ್ಟು ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳು ಸುಮ್ಮನಿರುವುದಿಲ್ಲವಂತೆ! ಹಿಂದೆ ಒಂದು ಸಲ ಅಂಥಾ ತಪ್ಪು ಮಾಡಿ, ಸಾಕಷ್ಟು ಪಾಠ ಕಲಿತಿದ್ದಾರೆ! ಮಲಯಾಳಂ ಚಿತ್ರರಂಗದಲ್ಲಿ ನವ್ಯಾ ನಾಯರ್‌ ಬಗ್ಗೆ ಒಳ್ಳೆಯ ಮಾತಿವೆ.

ಅಭಿನಯದ ವಿಷ್ಯಾದಲ್ಲಿ ಹೇಳೋದಾದರೆ, ಎರಡು ರಾಜ್ಯ ಪ್ರಶಸ್ತಿಗಳು ಅವರ ಮಡಿಲಲ್ಲಿವೆ. ಹೀಗಾಗಿ ಆ ಬಗ್ಗೆ ಜಾಸ್ತಿ ಮಾತು ಬೇಡ. ಚಿತ್ರದ ಕತೆ, ನಾಯಕಿಗೆ ಅಭಿನಯಿಸೋದಕ್ಕೆ ಅವಕಾಶ ಇದ್ದರಷ್ಟೇ ಸಹಿಹಾಕುತ್ತೇನೆ ಎನ್ನುವ ನವ್ಯಾ, ‘ಗಜ’ಚಿತ್ರದ ಮೂಲಕ, ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ. ಈ ಮಧ್ಯೆ ತಮಿಳಿನಲ್ಲೂ ನಟಿಸುತ್ತಿದ್ದಾರೆ.

ನವ್ಯಾ ಅವರದು ‘ಗಜ’ಚಿತ್ರದಲ್ಲಿ ವಿದೇಶದಿಂದ ಬರುವ ಹುಡುಗಿಯ ಪಾತ್ರ. ಸದ್ಯದಲ್ಲಿಯೇ ಒಳ್ಳೆ ಕನ್ನಡ ಕಲಿಯುವುದಾಗಿ ಹೇಳುವ ಮೂಲಕ, ಇಂಗ್ಲಿಷ್‌ನಲ್ಲಿ ನರಳುವ ನಮ್ಮ ಕನ್ನಡದ ಹುಡುಗಿಯರ ಕಿವಿಹಿಂಡಿದ್ದಾರೆ.

ಸುರೇಶ್‌ ಗೌಡ ಮತ್ತು ಪಿ.ಎಸ್‌.ಶ್ರೀನಿವಾಸಮೂರ್ತಿ ನಿರ್ಮಾಣದ ಈ ಚಿತ್ರದ ನಿದೇಶಕರು, ಕೆ.ಮಾದೇಶ್‌. ಹರಿಕೃಷ್ಣ ಸಂಗೀತದ ಹೊಣೆಹೊತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada