»   » ಚಿದಾನಂದ ಸಿನಿಮಾ ಆಫರ್‌ಗಳಿಗೆ ಒಲ್ಲೆ ಅಂತಿದಾರೆ

ಚಿದಾನಂದ ಸಿನಿಮಾ ಆಫರ್‌ಗಳಿಗೆ ಒಲ್ಲೆ ಅಂತಿದಾರೆ

Posted By: Staff
Subscribe to Filmibeat Kannada

ಸಾಕ್ಷಾತ್‌ ರವಿಚಂದ್ರನ್‌ ಕರೆದರೂ ಚಿದಾನಂದ ಒಲ್ಲೆ ಎನ್ನುತ್ತಿದ್ದಾರೆ, ಪಾಪ ಪಾಂಡು !

ಪಾಂಡು ಈಸ್‌ ನಾಟ್‌ ಅವೆಯ್ಲಬಲ್‌ ಟಿಲ್‌ ಡಿಸೆಂಬರ್‌. ಸಿನಿಮಾದವರು ಮುಗಿಬಿದ್ದರೂ, ಪಾಂಡು ಉರುಫ್‌ ಚಿದಾನಂದ ಇಲ್ಲವೆಂದು ನಿರ್ದಾಕ್ಷಿಣ್ಯವಾಗಿ ತಲೆಯಾಡಿಸುತ್ತಿರುವುದಾದರೂ ಯಾತಕ್ಕೆ? ಬಲ್ಲವರು ಹೇಳುವ ಪ್ರಕಾರ ಸಿಹಿ ಕಹಿ ಚಂದ್ರು ಹೇಳಿರುವ ಕಿವಿಮಾತಿಗೆ ಪಾಂಡು ಬದ್ಧರಾಗಿರುವುದಕ್ಕೆ. ಬಂದ ಚಿಲ್ಲರೆ ಪಾತ್ರಗಳನ್ನೆಲ್ಲಾ ಒಪ್ಪಿಕೋ ಬೇಡ. ಆದರೆ ಹೀರೋ ತಲೆ ಮೇಲೆ ಹೊಡೆದಂಥಾ ಹೀರೋನೇ ಆಗು. ಇಲ್ಲದೆ ಹೋದ್ರೆ ನಂಥರ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಆಗಿಬಿಡ್ತೀಯಾ ಅಂತ ಚಂದ್ರು ಕೊಟ್ಟ ಸಲಹೆಯನ್ನು ಪಾಂಡು ತಲೆ ಮೇಲೆ ಹೊತ್ತುಕೊಂಡಿದ್ದಾರೆ.

ಪಾಂಡು ಈಗ ಇನ್ನೂರು ನಾಟೌಟ್‌. ಬಾಲ್ಕನಿಯಿಂದ ಪಾಂಡು ಎಷ್ಟು ಸಾರಿ ಬಿದ್ದರೂ, ಧಾರಾವಾಹಿ ಮಾತ್ರ ಬೀಳಲಿಲ್ಲ. ಬದಲಿಗೆ ಯದ್ವಾ ತದ್ವಾ ಹಿಟ್‌. ಎಂ.ಎಸ್‌.ನರಸಿಂಹ ಮೂರ್ತಿ ದಿನಕ್ಕೊಂದು ಪಾಂಡು ಪ್ರಸಂಗ ಹೊಸೆಯುತ್ತಲೇ ಇದ್ದಾರೆ. ಇನ್ನೊಂದು ತಿಂಗಳಲ್ಲೇ ಮುಗಿಯಬೇಕಿದ್ದ ಪಾಂಡು ಮುಂದುವರೆಸಲು ಜಾಹೀರಾತುದಾರರೇ ಕಾರಣ. ರಾತ್ರಿ 7 ಗಂಟೆಯಿಂದ 7.30ರ ಸ್ಲಾಟ್‌ ಈಟಿವಿಯವರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ. ಆ ಜಾಗೆಗೆ ಬೇರೆ ಧಾರಾವಾಹಿ ಬಂದರೆ, ನಾವು ಜಾಹೀರಾತು ಕೊಡೋದಿಲ್ಲ ಅಂತಲೂ ಹೇಳಿದವರಿದ್ದಾರೆ. ಆ ಕಾರಣಕ್ಕೆ ಪಾಂಡು ಇನ್ನಿಂಗ್ಸ್‌ ಮುಂದುವರೆಯಬೇಕು ಅಂತ ಈಟಿವಿ ಅಪ್ಪಣೆ ಹೊರಡಿಸಿದೆ. ಕನಿಷ್ಠ ಪಕ್ಷ ಡಿಸೆಂಬರ್‌ವರೆಗಾದರೂ ಪಾಂಡು ಪ್ರಹಸನ ಗ್ಯಾರಂಟಿ.
ಆಮೇಲೆ? ಪಾಂಡು ಬಳಗವೇ ಇನ್ನೊಂದು ಧಾರಾವಾಹಿ ಮಾಡಬೇಕಾದ ಒತ್ತಡ ಬಂದರೂ ಅಚ್ಚರಿಯಿಲ್ಲ. ಏನೇ ಇರಲಿ, ಪಾಂಡು ಡಬಲ್‌ ಸೆಂಚುರಿ ಹೊಡೆದ ಖುಷಿಗೆ ಜೂನ್‌ 2ರ ಭಾನುವಾರ ಸಜ್ಜನ್‌ ರಾವ್‌ ಸರ್ಕಲ್‌ ಬಳಿಯ ಸತ್ಯನಾರಾಯಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಒಂದು ಔತಣ ಕೂಟ. ಥೇಟ್‌ ಮದುವೆ ಸಮಾರಂಭದ ಸ್ವರೂಪದ ಈ ಕೂಟದಲ್ಲಿ ತಿಂಡಿ, ಊಟ, ಕಾಫಿಯ ಜೊತೆಗೆ ಪಾಂಡು ಬಳಗದ ಹಾಸ್ಯ ಚಟಾಕಿಗಳ ಪಟಾಕಿಗಳೂ ಸಿಡಿಯಲಿವೆ. ನಿಮಗೂ ಆಮಂತ್ರಣವಿದೆ. ಸಾದ್ಯವಾದರೆ ಹೋಗಿಬನ್ನಿ.

English summary
Papa Pandu 200 not out
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada